Toll hike: ವಾಹನ ಸವಾರರಿಗೆ ಶಾಕ್, ರಾಜ್ಯದಲ್ಲಿ ಟೋಲ್ ದರ ಏರಿಕೆ
ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನ ಟೋಲ್ಗಳಿಗೆ ಪರಿಷ್ಕೃತ ದರಗಳು ಅನ್ವಯವಾಗಲಿವೆ. ಗರಿಷ್ಠ ಶೇ 5 ರಷ್ಟು ಮತ್ತು ಕನಿಷ್ಠ ಶೇ 3 ರಷ್ಟು ಹೆಚ್ಚಳವಾಗಲಿದೆ ಎಂದು ಎನ್‌ಎಚ್‌ಎಐ ಯ ಬೆಂಗಳೂರಿನ ಯೋಜನಾ ನಿರ್ದೇಶಕ ಕೆಬಿ ಜಯಕುಮಾರ್ ಮಾಹಿತಿ ನೀಡಿದ್ದಾರೆ.


ಬೆಂಗಳೂರು: ಬೆಲೆ ಏರಿಕೆಗಳಿಂದ ತತ್ತರಿಸಿರುವ ರಾಜ್ಯದ (Karnataka) ಜನತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತೊಂದು ಶಾಕ್ ನೀಡಿದೆ. ಏಪ್ರಿಲ್ 1ರಿಂದ ಕರ್ನಾಟಕದಾದ್ಯಂತ ಟೋಲ್ (Toll hike) ಸುಂಕ ಶೇ 3-5ರಷ್ಟು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಬೆಲೆ ಏರಿಕೆ, ಹಣದುಬ್ಬರಕ್ಕೆ ಅನುಗುಣವಾಗಿ ವಾರ್ಷಿಕವಾಗಿ ಮಾಡುವ ದರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಈಗ ಟೋಲ್ ಸುಂಕ ಹೆಚ್ಚಳಕ್ಕೆ ಎನ್‌ಎಚ್‌ಎಐ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನ ಟೋಲ್ಗಳಿಗೆ ಪರಿಷ್ಕೃತ ದರಗಳು ಅನ್ವಯವಾಗಲಿವೆ. ಗರಿಷ್ಠ ಶೇ 5 ರಷ್ಟು ಮತ್ತು ಕನಿಷ್ಠ ಶೇ 3 ರಷ್ಟು ಹೆಚ್ಚಳವಾಗಲಿದೆ ಎಂದು ಎನ್‌ಎಚ್‌ಎಐ ಯ ಬೆಂಗಳೂರಿನ ಯೋಜನಾ ನಿರ್ದೇಶಕ ಕೆಬಿ ಜಯಕುಮಾರ್ ಮಾಹಿತಿ ನೀಡಿದ್ದಾರೆ.
ಟೋಲ್ ಸುಂಕ ಹೆಚ್ಚಾಗಲಿರುವ ಟೋಲ್ ಪ್ಲಾಜಾಗಳು
ಕರ್ನಾಟಕದಲ್ಲಿ ಸುಮಾರು 66 ಟೋಲ್ ಪ್ಲಾಜಾಗಳಿವೆ. ಟೋಲ್ ಸುಂಕ ಹೆಚ್ಚಾಗುವ ಟೋಲ್ ಪ್ಲಾಜಾಗಳಲ್ಲಿ ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (ಬೆಂಗಳೂರು-ಮೈಸೂರು), ನಂಗ್ಲಿ (ಬೆಂಗಳೂರು-ತಿರುಪತಿ), ಬಾಗೇಪಲ್ಲಿ (ಬೆಂಗಳೂರು-ಹೈದರಾಬಾದ್), ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ), ಮತ್ತು ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) ಟೋಲ್ ಪ್ಲಾಜಾಗಳು ಸೇರಿವೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾರ್ಚ್ 19ರಂದು ರಾಜ್ಯಸಭೆಗೆ ತಿಳಿಸಿರುವ ಪ್ರಕಾರ 2023-24 ರಲ್ಲಿ ಭಾರತದಲ್ಲಿ ಒಟ್ಟು ಟೋಲ್ ಸಂಗ್ರಹವು 64,809.86 ಕೋಟಿ ರೂ.ಗಳನ್ನು ತಲುಪಿದೆ. ಇದು ಹಿಂದಿನ ವರ್ಷಕ್ಕಿಂತ 35% ಹೆಚ್ಚಾಗಿದೆ. 2019-20 ರಲ್ಲಿ ಸಂಗ್ರಹವು 27,503 ಕೋಟಿ ರೂ.ಗಳಷ್ಟಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: Toll Pass: 3 ಸಾವಿರ ರೂ ಪಾವತಿಸಿದರೆ ವರ್ಷಪೂರ್ತಿ ಟೋಲ್ ಫ್ರೀ ಪ್ರಯಾಣ- ಕೇಂದ್ರದಿಂದ ಬಂಪರ್ ಆಫರ್