Sukri Bommagowda: ಸಾರಾಯಿ ಮುಕ್ತ ಗ್ರಾಮಕ್ಕಾಗಿ ಹೋರಾಟ ಮಾಡಿದ ಪದ್ಮಶ್ರೀ ಪುರಸ್ಕೃತೆ, ಜನಪದ ಗಾನ ಕೋಗಿಲೆ ಸುಕ್ರಿ ಬೊಮ್ಮಗೌಡ
ಜಾನಪದ ಗಾಯಕಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಡುಹಕ್ಕಿ ಸುಕ್ರಿ ಬೊಮ್ಮ ಗೌಡ (88) ಅವರು ವಯೋಸಹಜ ಕಾಯಿಲೆಗಳಿಂದ ಗುರುವಾರ ನಸುಕಿನ ಜಾವ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಿಗೇರಿಯ ಸುಕ್ರಜ್ಜಿ ಕಳೆದ ಹಲವು ವರ್ಷದಿಂದ ಉಸಿರಾಟದ ಸಮಸ್ಯೆ ಸೇರಿದಂತೆ ಕೆಲ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
![ಗಾನ ಕೋಗಿಲೆ ಸುಕ್ರಿ ಬೊಮ್ಮಗೌಡ ಜೀವನಗಾಥೆ ಕುರಿತು ಇಲ್ಲಿದೆ ಮಾಹಿತಿ](https://cdn-vishwavani-prod.hindverse.com/media/original_images/Sukri_Bommagowda.jpg)
ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ ನಿಧನ
![Profile](https://vishwavani.news/static/img/user.png)
ಉತ್ತರ ಕನ್ನಡ, ಫೆ.13: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಜಾನಪದ ಗಾಯಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ (88) ಅವರು ಇಂದು ನಿಧನರಾಗಿದ್ದಾರೆ ಅನಾರೋಗ್ಯಕ್ಕೆ ತುತ್ತಾಗಿದ್ದ ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಈ ಹಿಂದೆ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗಿದೇ ಇಂದು ಬೆಳಿಗ್ಗೆ ಹುಟ್ಟೂರಿನ ಸ್ವಗೃಹದಲ್ಲಿ ಕೊನೆಯುಸಿರು ಎಳೆದಿದ್ದಾರೆ. ಹಾಲಕ್ಕಿ ಸಮುದಾಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಕೊಂಡಾಡುವಂತೆ ಮಾಡಿದ್ದ ಕೀರ್ತಿ ಸುಕ್ರಿ ಬೊಮ್ಮಗೌಡ ಅವರಿಗೆ ಸಲ್ಲಲಿದ್ದು, ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಹುಟ್ಟಿ, ಅಕ್ಷರ ಜ್ಞಾನ ಇಲ್ಲದಿದ್ದರು, ತಮ್ಮ ಜನಾಂಗದ ಜನಪದ ಹಾಡುಗಳನ್ನು ಪ್ರಚುರ ಪಡಿಸಿದರು.
ಅಲ್ಲದೇ ಗ್ರಾಮೀಣ ಸೊಗಡನ್ನ ಎಲ್ಲೆಡೆ ಪಸರಿಸಿ, ತಮ್ಮ ಗಾಯನ ಪ್ರತಿಭೆ ಮೂಲಕ ಇಡೀ ದೇಶವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ ಹಳ್ಳಿಗಾಡಿನ ದಿಟ್ಟ ಮಹಿಳೆ. ಇದಲ್ಲದೇ ಮದ್ಯ ಮುಕ್ತ ಗ್ರಾಮ ಮಾಡುವ ಹೋರಾಟದಲ್ಲಿ ಭಾಗಿಯಾದ ಇವರು ತಮ್ಮ ಊರನ್ನು ಮದ್ಯ ಮುಕ್ತ ಗ್ರಾಮವನ್ನಾಗಿಸಿದರು. 2017 ರಲ್ಲಿ ಇವರ ಜನಪದ ಹಾಡಿನ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಇವರ ಜೀವನಗಾಥೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಸುಕ್ರಿ ಬೊಮ್ಮಗೌಡ ಯಾರು?
ಸುಕ್ರಿ ಬೊಮ್ಮಗೌಡ ಉತ್ತರ ಕನ್ನಡ ಜಿಲ್ಲೆಯ ಬಡಿಗೇರಿ ಎಂಬಲ್ಲಿನವರು. ಅವರು ಬುಡಕಟ್ಟು ಸಮುದಾಯವಾದ ಹಾಲಕ್ಕಿ ಒಕ್ಕಲಿಗ ಪಂಗಡಕ್ಕೆ ಸೇರಿದವರು. ಸಾಂಪ್ರದಾಯಿಕ ಬುಡಕಟ್ಟು ಸಂಗೀತ ಕ್ಷೇತ್ರದಲ್ಲಿನ ಅವರ ಕೆಲಸಗಳಿಗೆ ಪದ್ಮಶ್ರೀ ಸಹಿತ ಹಲವು ಪ್ರಶಸ್ತಿ, ಪುರಸ್ಕಾರಗಳು ಅವರಿಗೆ ಲಭಿಸಿದೆ. ಅವರು ತಮ್ಮ ಸಮುದಾಯದ ಇತರರಿಗೆ ಸಾಂಪ್ರದಾಯಿಕ ಹಾಡುಗಳನ್ನು ಕಲಿಸಿ ಕೊಡುತ್ತಾರೆ. ಆ ಮೂಲಕ ಅದರ ಉಳಿವಿಗೆ ಶ್ರಮಿಸಿದ್ದಾರೆ. ಸುಕ್ರಿ ಬೊಮ್ಮಗೌಡ ಅವರು ಸುಕ್ರಜ್ಜಿ ಎಂದು ಮತ್ತು ಹಾಲಕ್ಕಿ ಕೋಗಿಲೆ/ ಜನಪದ ಕೋಗಿಲೆ ಎಂದೂ ಕರೆಯಲ್ಪಟ್ಟಿದ್ದಾರೆ.
ಈ ಸುದ್ದಿಯನ್ನು ಓದಿ: Sukri Bommagowda Passes Away: ಜಾನಪದ ಹಾಡು ಹಕ್ಕಿ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಇನ್ನಿಲ್ಲ
5000 ಹಾಡುಗಳ ಒಡತಿ ಸುಕ್ರಜ್ಜಿ
2017ನೇ ಇಸವಿಯಲ್ಲಿ ಪದ್ಮಪ್ರಶಸ್ತಿಗೆ ಭಾಜನರಾಗಿರುವ ಸುಕ್ರಿ ಬೊಮ್ಮಗೌಡ ಹಾಲಕ್ಕಿ ಸಮುದಾಯವರು. ಉತ್ತರಕನ್ನಡ ಜಿಲ್ಲೆಯ ಅಂಕೋಲಾದವರಾದ ಇವರು ಸುಕ್ರಜ್ಜಿ ಎಂದೇ ಖ್ಯಾತಿ ಪಡೆದಿದ್ದಾರೆ. ಸುಮಾರು 5000ಕ್ಕೂ ಹೆಚ್ಚು ಹಾಲಕ್ಕಿ ಹಾಡುಗಳನ್ನು ಇವರು ಹಾಡಿದ್ದಾರೆ. 100 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಹಾಡುಗಳು ಕೂಡ ಇವರಿಗೆ ಕಂಠಪಾಠವಾಗಿದೆ. ಸುಕ್ರಜ್ಜಿ ಅವರ ಹಾಡುಗಳು ಪುಸ್ತಕ ರೂಪ ಪಡೆದಿದ್ದು, ಕರ್ನಾಟಕ ಜಾನಪದ ಅಕಾಡೆಮಿ ಈ ಕಾರ್ಯದಲ್ಲಿ ಕೈಜೋಡಿಸಿತ್ತು.
ಮದ್ಯ ಮುಕ್ತ ಗ್ರಾಮದ ಕೂಗು
ಹಾಡು ಹೇಳುವುದು ಮಾತ್ರವಲ್ಲದೇ ಸಾಮಾಜಿಕ ಚಟುವಟಿಕೆಯಲ್ಲೂ ಗುರುತಿಸಿಕೊಂಡಿದ್ದ ಇವರು, ಕುಡಿತದ ವಿರುದ್ಧ ಆಂದೋಲನ ಕೈಗೊಂಡಿದ್ದರು. ಪರಿಸರ ಕಾಳಜಿಯೂ ಇರುವ ಇವರು ಪರಿಸರ ಉಳಿಸಲು ಕಾರ್ಯದಲ್ಲೂ ತೊಡಗಿದ್ದಾರೆ. ಇವರ ಜನಪದ ಹಾಗೂ ಸಾಮಾಜಿಕ ಸೇವಾ ಕ್ಷೇತ್ರವನ್ನು ಗುರುತಿಸಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಇನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಸೇರಿದಂತೆ ದೇಶ ಹಾಗೂ ರಾಜ್ಯದ ಹಲವು ಪ್ರತಿಷ್ಠಿತ ಪ್ರಶಸ್ತಿ ಸುಕ್ರಿ ಬೊಮ್ಮ ಗೌಡ ಅವರನ್ನು ಅರಸಿಕೊಂಡು ಬಂದಿವೆ.
ಇನ್ನು ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಮೋದಿ ಅಂಕೋಲಾಕ್ಕೆ ತೆರಳಿದ್ದ ವೇಳೆ ಸುಕ್ರಿ ಗೌಡ ಅವರ ಕಾಲಿಗೆ ಬಿದ್ದು ಪ್ರಧಾನಿ ಮೋದಿ ಆಶೀರ್ವಾದ ಪಡೆದಿದ್ದರು. ಆ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.