Positive Thinking: ರಿಸಲ್ಟ್ ನೋಡಿ ನಿಮ್ಮ ಮಕ್ಕಳನ್ನು ದಯವಿಟ್ಟು ನೋಯಿಸಬೇಡಿ...
Second PUC Result: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಡಿಮೆ ಅಂಕ ಪಡೆದುಕೊಂಡವರು ಕೊರಗಬೇಕಾಗಿಲ್ಲ. ಅದರಲ್ಲಿಯೂ ಪೋಷಕರು ಮಕ್ಕಳ ಅಂಕಗಳನ್ನು ಮತ್ತೊಬ್ಬರಿಗೆ ಹೋಲಿಸಿ, ಹೀಯಾಳಿಸಿ ಅವರಿಗೆ ನೋವಾಗುವಂತೆ ವರ್ತಿಸಲೇಬಾರದು ಎನ್ನುತ್ತಾರೆ ಕೌನ್ಸಲರ್ ವೀಣಾ ಪ್ರಕಾಶ್. ಅವರು ಪೋಷಕರಿಗೆ ಹೇಳಿದ ಕಿವಿಮಾತು ಇಲ್ಲಿದೆ.


-ವೀಣಾ ಪ್ರಕಾಶ್
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ (Second PUC Result) ಪ್ರಕಟಗೊಂಡಿದೆ. ಒಳ್ಳೆಯ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಮುಂದೆ ಇನ್ನೂ ಒಳ್ಳೆಯ ಅಂಕಗಳನ್ನು ಪಡೆಯಲಿ ಎಂದು ಹಾರೈಕೆಗಳು. ಈ ಲೇಖನವನ್ನು ಬರೆಯುತ್ತಿರುವುದು ಕೇವಲ ಅಭಿನಂದನೆ ಅಥವಾ ಹಾರೈಕೆಗಳನ್ನು ಹೇಳುವ ಉದ್ದೇಶದಿಂದ ಅಲ್ಲ. ಓರ್ವ ಕೌನ್ಸಲರ್ ಆಗಿರುವ ನಾನು, ನನ್ನ ಅನುಭವದ ಆಧಾರದ ಮೇಲೆ, ಇಲ್ಲಿ ಮುಖ್ಯವಾಗಿ ಪೋಷಕರಿಗೆ, ಕೆಲವು ಕಿವಿಮಾತುಗಳನ್ನು (Positive Thinking) ಹೇಳ ಬಯಸುತ್ತೇನೆ.
ದಯವಿಟ್ಟು ನಿಮ್ಮ ಮಕ್ಕಳ ಅಂಕಗಳನ್ನು ಮತ್ತೊಬ್ಬರಿಗೆ ಹೋಲಿಸಿ, ಹೀಯಾಳಿಸಿ ಅವರಿಗೆ ನೋವಾಗುವಂತೆ ವರ್ತಿಸಬೇಡಿ. ಎಷ್ಟೋ ಮಕ್ಕಳು ಕಷ್ಟಪಟ್ಟು ಓದಿದರೂ ಸಹಿತ, ಯಾವುದೋ ಕಾರಣದಿಂದ ಕಮ್ಮಿ ಅಂಕಗಳನ್ನು ತೆಗೆದಿರುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳದೆ, "ಆ ಮಕ್ಕಳೆಲ್ಲ ಅಷ್ಟೊಂದು ತೆಗೆದಿದ್ದಾರೆ, ನೀನು ಮಾತ್ರ ಇಷ್ಟೇ ತೆಗೆದಿದ್ದಿ..." ಇತ್ಯಾದಿ ತುಲನೆ ಮಾಡುವ ಮೂಲಕ ನಿಮ್ಮ ಮಕ್ಕಳನ್ನು ದಯವಿಟ್ಟು ನೋಯಿಸಬೇಡಿ.
ಈ ಸುದ್ದಿಯನ್ನೂ ಓದಿ: Second PU Result: ದ್ವಿತೀಯ ಪಿಯು ಪಿಯುಸಿ ಫಲಿತಾಂಶ: ಶೇ.73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ
ಪ್ರತಿ ವರ್ಷ ತುಂಬಾ ಮಕ್ಕಳು, ಕಡಿಮೆ ಅಂಕಗಳು ಬಂದರೆ ಅಥವಾ ಅನುತ್ತೀರ್ಣರಾದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಮಕ್ಕಳಿಗೆ ಸೋಲು, ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸದೇ ಇರುವುದು.
ಸೋತ ತಕ್ಷಣ ಅಥವಾ ಫೇಲ್ ಆದ ತಕ್ಷಣ, ಅಥವಾ ಕಮ್ಮಿ ಅಂಕಗಳು ಬಂದ ತಕ್ಷಣ ಭವಿಷ್ಯವೇ ಮುಗಿದು ಹೋಯಿತು, ಮುಂದೆ ಯಾವ ದಾರಿಯೂ ಇಲ್ಲ ಅನ್ನುವ ಭಯ, ಆತಂಕ ಮಕ್ಕಳ ಮನಸ್ಸಿನಲ್ಲಿ ಬರುವ ಹಾಗೆ ಮಾಡಿರುವುದೇ ಇದಕ್ಕೆಲ್ಲ ಮುಖ್ಯ ಕಾರಣ. ತುಂಬಾ ಮಕ್ಕಳು ಖಿನ್ನತೆಗೆ (Depression )ಒಳಗಾಗುತ್ತಾರೆ. ಮುಂದೆ ಓದುವುದೇ ಇಲ್ಲ ಎಂಬ ಹಠಕ್ಕೂ ಬೀಳುತ್ತಾರೆ.
ಮಕ್ಕಳು ಕಡಿಮೆ ಅಂಕ ತೆಗೆದುಕೊಂಡಾಗ, ಕಮ್ಮಿ ಬರಲು ಕಾರಣವೇನು ಎಂಬುದನ್ನು ಮೊದಲು ತಿಳಿಯಲು ಪ್ರಯತ್ನಿಸಬೇಕು. ಮಗುವಿನ ತಪ್ಪಿದೆಯೇ, ಇದ್ದರೆ ಅದು ಯಾವ ರೀತಿ, ಅದಕ್ಕೆ ಏನು ಪರಿಹಾರ ಅಂತ ಹುಡುಕುವ ಪ್ರಯತ್ನ ಮಾಡಬೇಕು. ಕಡಿಮೆ ಅಂಕಗಳನ್ನು ಪಡೆದ ಮಕ್ಕಳನ್ನು ತುಂಬಾ ಹುಷಾರಾಗಿ ನಿಭಾಯಿಸಬೇಕು, ಪ್ರೀತಿ, ಕಾಳಜಿ ತೋರಬೇಕು.
ಎರಡು ವರ್ಗಗಳ ತಂದೆ-ತಾಯಿಗಳನ್ನು ನೋಡಿದ್ದೇನೆ. "ಅಂಕಗಳು ಕಮ್ಮಿ ಬಂದಾಕ್ಷಣ ಜೀವನ ಮುಗಿದು ಹೋಗಿಲ್ಲ, ಇದುವೇ ಕೊನೆಯಲ್ಲ, ಬೇಕಾದಷ್ಟು ದಾರಿಗಳಿವೆ, ಚಿಂತಿಸಬೇಡ, ಹೆದರಬೇಡ. ನಿನ್ನ ಜತೆಗೆ ನಾವಿದ್ದೇವೆ..." ಅಂತ ಸಮಾಧಾನಿಸುವ, ಧೈರ್ಯ ಹೇಳುವ ಒಂದು ವರ್ಗ.
"ಎನ್ ಈ ಥರಾ ಅಂಕಗಳನ್ನು ತೆಗೊಂಡಿದ್ದೀಯ? ಮುಂದೆ ಎನ್ ಮಾಡ್ತಿ ನೀನು? ನಿನ್ನ ಟ್ಯೂಷನ್ ಅದು ಇದು ಅಂತ ಎಷ್ಟೆಲ್ಲ ದುಡ್ಡು ಸುರಿದಿಲ್ಲ ನಾವು? ಎಲ್ಲ ಮಣ್ಣುಪಾಲು..." ಅಂತ ಹೀಯಾಳಿಸುವ ಇನ್ನೊಂದು ವರ್ಗ.

ಮಕ್ಕಳು ಮಾನಸಿಕವಾಗಿ ಆರೋಗ್ಯವಾಗಿರಬೇಕು ಎಂದರೆ ಅವರಲ್ಲಿ ಮೊದಲು ಕೀಳರಿಮೆ ಬರದೆ ಇರುವ ಹಾಗೆ ನೋಡಿಕೊಳ್ಳಬೇಕು, ಅವರಲ್ಲಿ ಆಶಾವಾದ, ಆತ್ಮವಿಶ್ವಾಸ ತುಂಬಬೇಕು. ಪ್ರತಿ ವರ್ಷದಂತೆ ಈ ಸಾರಿಯೂ ನಮ್ಮ ಆಪ್ತ ಸಮಾಲೋಚನಾ ಕೇಂದ್ರಕ್ಕೆ ಕೌನ್ಸೆಲಿಂಗ್ ಸಲುವಾಗಿ ತುಂಬಾ ಕೇಸ್ ಗಳು ಬಂದಿವೆ. ಇದು ನೋಡಿದಾಗ ಬೇಸರವಾಗುತ್ತದೆ.
ಸಾಮಾನ್ಯವಾಗಿ ಇಲ್ಲಿಗೆ ಬರುವ ಹೆಚ್ಚಿನ ತಂದೆ ತಾಯಿಯಂದಿರು, ತಮ್ಮದು ಏನೂ ತಪ್ಪೇ ಇಲ್ಲ, ಮಕ್ಕಳದ್ದೇ ಎಲ್ಲ ತಪ್ಪು ಎಂಬ ರೀತಿಯಲ್ಲಿ ಮಾತಾಡುತ್ತಾರೆ. ಇದು ಆ ಮಕ್ಕಳ ಮನಸ್ಸನ್ನು ಘಾಸಿ ಮಾಡುತ್ತದೆ, ಇನ್ನಷ್ಟು ದುರ್ಬಲಗೊಳಿಸುತ್ತದೆ. ಮಕ್ಕಳ ಮನಸ್ಸು ಬಹಳ ಸೂಕ್ಷ್ಮ ಎಂಬುದನ್ನು ನಾವು ಮರೆಯಬಾರದು. ಮಕ್ಕಳು ಮಾನಸಿಕವಾಗಿ ಯಾತನೆ, ಹಿಂಸೆ ಪಡುವುದನ್ನು ನೋಡುವುದು ಸಮಾಲೋಚಕರಾಗಿ ನಮಗೂ ಕಷ್ಟವೇ. ಪರೀಕ್ಷೆ ಮತ್ತು ಫಲಿತಾಂಶದ ಕಾರಣಕ್ಕಾಗಿ ಯಾವ ಮಕ್ಕಳ ಮನಸ್ಸಿಗೂ ನೋವಾಗದೆ ಇರಲಿ.

"Your Scores and grades are not the end of the road...
There is much more beautiful path in front of you"
ಇಂತಹ ಮನೋಧರ್ಮ, ಆತ್ಮಸ್ಥೈರ್ಯ ಮಕ್ಕಳಲ್ಲಿ ಮೂಡಿಸುವ ಜವಾಬ್ದಾರಿ ಪೋಷಕರಲ್ಲಿ ಬರಬೇಕು. ಆಗ ಎಷ್ಟೋ ಆತ್ಮಹತ್ಯೆಗಳು ಕಡಿಮೆಯಾಗುತ್ತವೆ. ಒಳ್ಳೆಯ ಮಾನಸಿಕ ಆರೋಗ್ಯ ಹೊಂದಿರುವ ಉತ್ತಮ ಸಮಾಜ ನಿರ್ಮಾಣವಾಗಲಿ ಎಂಬ ಆಶಯ ನಮ್ಮದು.
(ಲೇಖಕಿ: ಆಪ್ತ ಸಮಾಲೋಚಕಿ)