ಮಂಗಳೂರು, ಫೆ.17: ಪಿಲಿಕುಳ ನಿಸರ್ಗಧಾಮ (Pilikula Biological Park) ಕಳೆದ ಕೆಲವು ವಾರಗಳಿಂದ ಕೆಟ್ಟ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಪ್ರಾಣಿಗಳು ಸರಣಿ ಸಾವಿಗೀಡಾಗಿದ್ದು, ಇವುಗಳನ್ನು ನೋಡಿಕೊಳ್ಳಲಾಗದ ವ್ಯವಸ್ಥೆಯ ವೈಫಲ್ಯ ಎದ್ದು ಕಾಣುತ್ತಿದೆ. ಪಿಲಿಕುಳ ಉದ್ಯಾನವನದ ಅಧಿಕಾರಿಗಳು ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ನಿಂದ (Karnataka high court) ಛೀಮಾರಿ ಹಾಕಿಸಿಕೊಂಡಿದ್ದರು. ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಂದಿದ್ದು, ಇತ್ತೀಚೆಗೆ ಅಸಹಜವಾಗಿ ಸಾವನಪ್ಪಿದ ಪ್ರಾಣಿಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ.
ಪ್ರಾಣಿಗಳ ಅಸಹಜ ಸಾವು, ಆಹಾರ ಪೂರೈಕೆಯಲ್ಲಿ ವ್ಯತ್ಯಯ, ಪ್ರಾಣಿಗಳ ವಿನಿಮಯ- ಲೆಕ್ಕಪತ್ರ ಅವ್ಯವಹಾರ ಸೇರಿದಂತೆ ವಿವಿಧ ರೀತಿಯ ಅಪರಾತಪರಾಗಳ ಕಾರಣಕ್ಕೆ ಕಳೆದ ಹಲವು ವರ್ಷಗಳಿಂದ ಪಿಲಿಕುಳ ಜೈವಿಕ ಉದ್ಯಾನವನ ಸುದ್ದಿಯಾಗುತ್ತಿದೆ. ಸುಮಾರು ನಾಲ್ಕು ವರ್ಷ ಗಳಿಂದ ಹುಲಿ, ಜಿಂಕೆ, ಕಡವೆ, ಹಂದಿ ಸೇರಿದಂತೆ 100ಕ್ಕೂ ಅಧಿಕ ಪ್ರಾಣಿಗಳು ಮೃತಪಟ್ಟಿವೆ ಎನ್ನುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳಿಗೆ ನೀಡುವ ಆಹಾರವನ್ನು ಪರಿಶೀಲಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಇತ್ತೀಚೆಗೆ ಸಾವನ್ನಪ್ಪಿದ ಜಿಂಕೆಯೊಂದರ ಮರಣೋತ್ತರ ವರದಿಯಲ್ಲಿ ಪ್ರಾಣಿಯ ದೇಹದಲ್ಲಿ ಹೈಡ್ರೋಸೈನೇಡ್ ಹಾಗೂ ನೈಟ್ರೇಟ್ ಅಂಶಗಳು ಪತ್ತೆಯಾಗಿರುವುದು ಬೆಚ್ಚಿಬೀಳಿಸುವ ಸಂಗತಿಯಾಗಿದೆ. ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಪ್ರಯೋಗಾಲಯದಿಂದ ಬಂದ ವರದಿ ಪ್ರಕಾರ, ಮೃಗಾಲಯದಲ್ಲಿ ಎಲೆಕೋಸು ಮತ್ತು ಹೂಕೋಸು ಬೆಳೆಗಳಲ್ಲಿ ಬಳಸುವ ಅತಿಯಾದ ಕೀಟನಾಶಕ ಅವಶೇಷಗಳನ್ನು ಸರಿಯಾಗಿ ಶುಚಿಗೊಳಿಸದೇ ಪ್ರಾಣಿಗಳಿಗೆ ನೀಡಲಾಗುತ್ತಿತ್ತು ಎನ್ನಲಾಗಿದೆ.
Pilikula Biological park: ಮಂಗಳೂರು ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ನಿಗೂಢ ಮರಣ; ವಾರದಲ್ಲಿ 9 ಸಾವು ವರದಿ
ಈ ವಿಷಕಾರಿ ಅಂಶಗಳು ನಿಧಾನವಾಗಿ ದೇಹದಲ್ಲಿ ಸಂಗ್ರಹವಾಗಿ ‘ಸ್ಲೋ ಪಾಯಿಸನಿಂಗ್’ ಮೂಲಕ ಸಾವಿಗೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಹುಲಿ, ಜಿಂಕೆ, ಸಾಂಬಾರ್, ಕಾಡುಹಂದಿ ಸೇರಿದಂತೆ ಅನೇಕ ಪ್ರಾಣಿಗಳು ಮೃತಪಟ್ಟಿದ್ದು, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣವೇ ಎಂಬ ಪ್ರಶ್ನೆ ಮೂಡಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನೋಡಿಕೊಳ್ಳಲಾಗದಿದ್ದರೆ ಬಂದ್ ಮಾಡಿ: ಹೈಕೋರ್ಟ್
ಪ್ರಸಿದ್ಧ ಪಿಲಿಕುಳ ಮೃಗಾಲಯದ ಅವ್ಯವಸ್ಥೆ ಕಂಡು ಹೈಕೋರ್ಟ್ (High Court) ನ್ಯಾಯಾಧೀಶರೇ ಶಾಕ್ ಆಗಿದ್ದು, ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ರೆ ತಕ್ಷಣ ಮೃಗಾಲಯ ಬಂದ್ ಮಾಡಿ ಎಂದು ಸರ್ಕಾರಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದೆ.
ಸುಮಾರು 370 ಎಕರೆಗಳಷ್ಟು ವಿಶಾಲವಾಗಿ ಹಬ್ಬಿರೋ ಈ ಪಾರ್ಕ್, ದೇಶದ ಅತ್ಯಂತ ನೈಸರ್ಗಿಕವಾದ ಮೃಗಾಲಯಗಳಲ್ಲಿ ಒಂದು ಅಂತಲೇ ಹೆಸರುವಾಸಿ. ಪಶ್ಚಿಮ ಘಟ್ಟಗಳ ಅಳಿವಿನಂಚಿನಲ್ಲಿರೋ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿರೋ ಪಿಲಿಕುಳ, ಕರಾವಳಿಗೆ ಬರುವ ಪ್ರವಾಸಿಗರ ಮೊದಲ ಆಯ್ಕೆ. ಅಂತಹ ಸುಂದರ ತಾಣ ಇಂದು ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ. ಪಿಲಿಕುಳದ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಅಂದ್ರೆ, ಇಲ್ಲಿನ ಅವ್ಯವಸ್ಥೆ, ಪ್ರಾಣಿಗಳ ದಯನೀಯ ಸ್ಥಿತಿ ಕಂಡು ಹೈಕೋರ್ಟ್ ನ್ಯಾಯಧೀಶರೇ ಶಾಕ್ ಆಗಿದ್ದಾರೆ.
MLA SN Subbareddy: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆ ಅಸಿಂಧು ಎಂದ ರಾಜ್ಯ ಹೈಕೋರ್ಟ್
ತುಕ್ಕು ಹಿಡಿದ ಪಂಜರ, ಕಲುಷಿತ ನೀರು, ಅಶುಚಿ ವಾತಾವರಣ, ಸರಿಯಾದ ಆಹಾರ ಇಲ್ಲದೇ ಇರೋದು, ಇದು ಪಿಲಿಕುಳ ಮೃಗಾಲಯದ ಸದ್ಯದ ಸ್ಥಿತಿ. ವನ್ಯಜೀವಿ ಸಂರಕ್ಷಕ ಭುವನ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಪಿಲಿಕುಳ ಮೃಗಾಲಯದ ಕರ್ಮ ಕಾಂಡಗಳು ಹೈಕೋರ್ಟ್‍ನಲ್ಲಿ ಹೊರಬಿದ್ದಿವೆ. ಪ್ರಾಣಿಗಳನ್ನು ಇರಿಸಿರುವ ಪಂಜರಗಳು ಸಂಪೂರ್ಣ ತುಕ್ಕು ಹಿಡಿದಿವೆ, ಅಲ್ಲಿ ಸರಿಯಾದ ಭದ್ರತೆಯೇ ಇಲ್ಲ. ಅಶುಚಿಯಾದ ಪರಿಸರದಲ್ಲಿ ಪ್ರಾಣಿಗಳು ನರಳುತ್ತಿರುವ ಫೋಟೋಗಳನ್ನು ನೋಡಿ ನ್ಯಾಯಪೀಠ ಕೆಂಡಾಮಂಡಲವಾಗಿದೆ.
ಈ ಪಾರ್ಕ್‍ನ ಲೈಸೆನ್ಸ್ ಅವಧಿ 2025ರ ಡಿಸೆಂಬರ್ 1ಕ್ಕೇ ಮುಕ್ತಾಯವಾಗಿದೆ. ಸದ್ಯ ಯಾವುದೇ ಪರವಾನಗಿ ಇಲ್ಲದೆ ಪಿಲಿಕುಳ ಮೃಗಾಲಯ ನಡೀತಿದೆ. ಇಷ್ಟೆಲ್ಲಾ ಅವ್ಯವಸ್ಥೆ ಬಗ್ಗೆ ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ 2023 ಮತ್ತು 2025ರಲ್ಲಿ ಶೋಕಾಸ್ ನೋಟಿಸ್ ನೀಡಿದ್ರೂ ಅಧಿಕಾರಿಗಳು ಮಾತ್ರ ಕ್ಯಾರೆ ಅಂದಿಲ್ಲ. ಮಲಿನಗೊಂಡ ನೀರು ಕುಡಿದು, ಸರಿಯಾದ ಚಿಕಿತ್ಸೆ ಸಿಗದೆ ಮೂಕ ಪ್ರಾಣಿಗಳು ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿವೆ ಎಂಬುದು ಅರ್ಜಿದಾರರ ಗಂಭೀರ ಆರೋಪ.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ಪರವಾನಗಿ ವಿಸ್ತರಣೆಗೆ ಅರ್ಜಿ ಸಲ್ಲಿಸಲಾಗಿದೆ. ಅದು ಪರಿಶೀಲನೆಯಲ್ಲಿದೆ ಎಂದು ಸಮರ್ಥನೆ ನೀಡಿದ್ದಾರೆ. ನ್ಯಾಯಾಲಯ ಮಾತ್ರ ಇದನ್ನು ಒಪ್ಪಿಲ್ಲ. ಪ್ರಾಣಿಗಳಿಗೆ ರಕ್ಷಣೆ ನೀಡಲಾಗದಿದ್ರೆ ಅದನ್ನು ಮುಚ್ಚಿಬಿಡಿ ಅಂತಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.