ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pilikula Biological park: ಮಂಗಳೂರು ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ನಿಗೂಢ ಮರಣ; ವಾರದಲ್ಲಿ 9 ಸಾವು ವರದಿ

Pilikula Biological park: ಪಿಲಿಕುಳದಲ್ಲಿ 5 ಪುನುಗು ಬೆಕ್ಕುಗಳು, 2 ಕೃಷ್ಣಮೃಗ ಮತ್ತು ಒಂದು ಬರಿಂಕ ಮಾತ್ರ ಮೃತಪಟ್ಟಿದ್ದು, ಮಳೆಯ ಹಿನ್ನೆಲೆಯಲ್ಲಿ ಶೀತ ವಾತಾವರಣ ಹೆಚ್ಚಾದ ಪರಿಣಾಮ ಈ ಪ್ರಾಣಿಗಳು ಮೃತಪಟ್ಟಿವೆ ಎಂದು ಜೈವಿಕ ಉದ್ಯಾನವನದ ಪ್ರಭಾರ ನಿರ್ದೇಶಕರು ತಿಳಿಸಿದ್ದಾರೆ.

ಮಂಗಳೂರು ಪಿಲಿಕುಳ ಉದ್ಯಾನದಲ್ಲಿ ಒಂದೇ ವಾರದಲ್ಲಿ 9 ಪ್ರಾಣಿಗಳ ನಿಗೂಢ ಮರಣ

ಪಿಲಿಕುಳ ಜೈವಿಕ ಉದ್ಯಾನವನ

ಹರೀಶ್‌ ಕೇರ ಹರೀಶ್‌ ಕೇರ Jul 4, 2025 11:10 PM

ಮಂಗಳೂರು: ದಕ್ಷಿಣ ಕನ್ನಡದ (Dakshina Kannada) ಮಂಗಳೂರು (Mangaluru) ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ (Pilikula Biological park) ಒಂದೇ ವಾರದಲ್ಲಿ 9 ಪ್ರಾಣಿಗಳು ನಿಗೂಢವಾಗಿ (animals death) ಮೃತಪಟ್ಟಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. 2 ಕೃಷ್ಣಮೃಗ, 5 ಪುನುಗು ಬೆಕ್ಕು, 1 ಬಿಳಿ ಗೂಬೆ ಹಾಗೂ 1 ಬರಿಂಕ ಸೇರಿದಂತೆ ಒಟ್ಟು 9 ಪ್ರಾಣಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಪಿಲಿಕುಳ ಜೈವಿಕ ಉದ್ಯಾನವನದೊಳಗೆ ನೀರು ನುಗ್ಗಿ, ಕಂಪೌಂಡ್ ಕುಸಿದು ಪ್ರಾಣಿಗಳಿಗೆ ತೊಂದರೆಯಾಗಿತ್ತು. ಈ ಬಗ್ಗೆ ವನ್ಯಜೀವಿ ಸಂರಕ್ಷಕ ಭುವನ್ ದೇವಾಡಿಗ ಅವರು ಸೆಂಟ್ರಲ್ ಝೂ ಅಥಾರಿಟಿಗೆ ದೂರು ನೀಡಿದ್ದರು.‌ ಈ ದೂರಿನನ್ವಯ ಮುಖ್ಯ ವನ್ಯಜೀವಿ ವಾರ್ಡನ್‌ಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಇದಾಗಿ ವಾರದೊಳಗೆ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಒಂಬತ್ತು ಪ್ರಾಣಿಗಳು ಮೃತಪಟ್ಟ ಬಗ್ಗೆ ಮಾಹಿತಿ ದೊರೆತಿದೆ.

ಪಿಲಿಕುಳದಲ್ಲಿ 5 ಪುನುಗು ಬೆಕ್ಕುಗಳು, 2 ಕೃಷ್ಣಮೃಗ ಮತ್ತು ಒಂದು ಬರಿಂಕ ಮಾತ್ರ ಮೃತಪಟ್ಟಿದ್ದು, ಮಳೆಯ ಹಿನ್ನೆಲೆಯಲ್ಲಿ ಶೀತ ವಾತಾವರಣ ಹೆಚ್ಚಾದ ಪರಿಣಾಮ ಈ ಪ್ರಾಣಿಗಳು ಮೃತಪಟ್ಟಿವೆ ಎಂದು ಜೈವಿಕ ಉದ್ಯಾನವನದ ಪ್ರಭಾರ ನಿರ್ದೇಶಕರು ತಿಳಿಸಿದ್ದಾರೆ.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ಅವರು ಸ್ಥಳ ಪರಿಶೀಲನೆ ನಡೆಸಿದ್ದು, ಇತ್ತೀಚೆಗೆ ಉದ್ಯಾನವನದಲ್ಲಿ ವಿವಿಧ ಕಾರಣಗಳಿಂದ ಪ್ರಾಣಿಗಳು ಸಾವನ್ನಪ್ಪಿವೆ. ಆರು ಬೆಕ್ಕುಗಳಲ್ಲಿ, ಐದು ಬೆಕ್ಕುಗಳು ಕಳೆದ ನಾಲ್ಕು ದಿನಗಳಲ್ಲಿ ಸಾವನ್ನಪ್ಪಿವೆ. ಇನ್ನು ಕಳೆದ ಶುಕ್ರವಾರ ಅಷ್ಟೇ ದೊಡ್ಡ ಅಳಿಲು ಸಾವನ್ನಪ್ಪಿದ್ದರೆ, ಕಳೆದ ಮೂರು ದಿನಗಳಲ್ಲಿ ನಾಲ್ಕು ಹೆಣ್ಣು ಬೆಕ್ಕುಗಳು ಸಾವನ್ನಪ್ಪಿವೆ ಎಂದು ಹೇಳಿದ್ದಾರೆ.

ನಾನು ವೈದ್ಯರ ಜೊತೆ ಉದ್ಯಾನವನಕ್ಕೆ ಭೇಟಿ ನೀಡಿದ್ದು, ಮಲಬಾರ್ ದೈತ್ಯ ಅಳಿಲಿನ ಮರಣೋತ್ತರ ಪರೀಕ್ಷೆಯನ್ನು ನನ್ನ ಸಮ್ಮುಖದಲ್ಲಿ ನಡೆಸಲಾಯಿತು. ಆ ಅಳಿಲಿಗೆ 16 ವರ್ಷ ವಯಸ್ಸಾಗಿದ್ದು, ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಸಾವನ್ನಪ್ಪಿರಬಹುದು. ಇನ್ನು ಹೆಣ್ಣು ಬೆಕ್ಕುಗಳ ಮಾದರಿಗಳನ್ನು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ಸ್ ಮತ್ತು ಬನ್ನೇರುಘಟ್ಟದಲ್ಲಿರುವ ವನ್ಯಜೀವಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಜಿಂಕೆ ಅಂತರ್-ಸಂತಾನೋತ್ಪತ್ತಿ ಸಂಬಂಧಿತ ಕಾರಣಗಳಿಂದ ಸಾವನ್ನಪ್ಪಿರಬಹುದು. ಪರೀಕ್ಷಾ ವರದಿ ನಮಗೆ ತಲುಪಿದ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ. ಸದ್ಯ ಜೈವಿಕ ಉದ್ಯಾನವನದಲ್ಲಿ ಸುಮಾರು 1,250 ಪ್ರಾಣಿಗಳು, ಪಕ್ಷಿಗಳು ಮತ್ತು ಸರೀಸೃಪಗಳು ಇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: High-Speed Corridor: ಮಂಗಳೂರು-ಬೆಂಗಳೂರು ಹೈಸ್ಪೀಡ್ ಕಾರಿಡಾರ್‌ಗೆ ಡಿಪಿಆರ್ ತಯಾರಿ ಕಾರ್ಯ ಆರಂಭ: ಕ್ಯಾ.ಬ್ರಿಜೇಶ್‌ ಚೌಟ