Prajwal Revanna case: ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಪ್ರಜ್ವಲ್ ರೇವಣ್ಣ
High court: ಫಾರ್ಮ್ ಹೌಸ್‌ನಲ್ಲಿ 47 ವರ್ಷದ ಮಹಿಳೆಯನ್ನು ಪ್ರಜ್ವಲ್ ಬಲವಂತವಾಗಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಸ್ಪೆಷಲ್ ಕೋರ್ಟ್ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು, ಪ್ರಜ್ವಲ್ ಅವರನ್ನು ದೋಷಿಯೆಂದು ಘೋಷಿಸಿ, ಜೀವಿತಾವಧಿ ಜೈಲು ಮತ್ತು ₹11.50 ಲಕ್ಷ ದಂಡ ವಿಧಿಸಿದ್ದರು.

-

ಬೆಂಗಳೂರು: ಹಾಸನದ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna case) ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ (physical abuse) ಸ್ಪೆಷಲ್ ಕೋರ್ಟ್ ಆಗಸ್ಟ್ 2ರಂದು ದೋಷಿ ಎಂದು ತೀರ್ಪು ಪ್ರಕಟ ಮಾಡಿತ್ತು. ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ (Life Imprisonment) ಮತ್ತು ₹11.50 ಲಕ್ಷ ದಂಡ ವಿಧಿಸಿತ್ತು. ಇದಾದ ನಂತರ ಜೈಲುಪಾಲಾಗಿರುವ ಪ್ರಜ್ವಲ್ ರೇವಣ್ಣ ಇದೀಗ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ (karnataka High Court) ಮೇಲ್ಮನವಿ ಸಲ್ಲಿಸಿದ್ದಾರೆ.
ಪ್ರಕರಣ ರಾಜಕೀಯ ದುರುದ್ದೇಶಪೂರಿತ ಎಂದು ಪ್ರಜ್ವಲ್ ರೇವಣ್ಣ ಆರೋಪಿಸಿದ್ದು, ಮೇಲ್ಮನವಿ ಸಲ್ಲಿಕೆ ಮಾಡಿ ಶಿಕ್ಷೆ ರದ್ದು ಮಾಡುವಂತೆ ಕೋರಿದ್ದಾರೆ. ರಾಜಕೀಯ ದುರುದ್ದೇಶದಿಂದ ಮಹಿಳೆಯನ್ನು ಅಸ್ತ್ರವಾಗಿ ಬಳಸಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪ್ರಜ್ವಲ್ ರೇವಣ್ಣ ಆರೋಪಿಸಿದ್ದಾರೆ. ಇದು 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವೈರಲ್ ಆದ ಅಶ್ಲೀಲ ವೀಡಿಯೋಗಳಿಂದ ಉಂಟಾದ ನಾಲ್ಕು ಪ್ರಕರಣಗಳಲ್ಲಿ ಮೊದಲನೆಯದ್ದಾಗಿದೆ. ಇನ್ನೂ ಮೂರು ಪ್ರಕರಣಗಳು ಬಾಕಿ ಇವೆ.
ಪ್ರಜ್ವಲ್ ರೇವಣ್ಣ ಹೈಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿಯಲ್ಲಿ, "ರಾಜಕೀಯ ಷಡ್ಯಂತ್ರದಿಂದ ಪ್ರಕರಣವನ್ನು ರೂಪಿಸಲಾಗಿದೆ. 2023ರಲ್ಲಿ ಹಾಸನದ ಫಾರ್ಮ್ ಹೌಸ್‌ಗೆ ಗೃಹಪ್ರವೇಶ ನಡೆದಾಗ ಮಹಿಳೆಯು ಪಾಲ್ಗೊಂಡಿರುವುದು ದಾಖಲೆಯಲ್ಲಿದೆ. ಅತ್ಯಾಚಾರವಾಗಿದ್ದರೆ ಅವರು ಹೇಗೆ ಗೃಹಪ್ರವೇಶಕ್ಕೆ ಬರುತ್ತಿದ್ದರು?" ಎಂದು ಪ್ರಶ್ನಿಸಲಾಗಿದೆ. ಮಹಿಳೆಯು ಘಟನೆಯಾಗಿ 3 ವರ್ಷಗಳ ನಂತರ ದೂರು ನೀಡಿರುವುದು ಸಂದೇಹಾಸ್ಪದ ಎಂದು ಹೇಳಿದ್ದಾರೆ. ಸ್ಟೋರ್ ರೂಮ್‌ನಲ್ಲಿ ಸಿಕ್ಕಿದ ಬಟ್ಟೆ ಮತ್ತು ಕೂದಲಿದ್ದ ಬ್ಯಾಗ್ ಅನ್ನು ಮಹಿಳೆ ಗುರುತಿಸಿಲ್ಲ ಎಂದು ಆರೋಪಿಸಲಾಗಿದೆ. ಬ್ಯಾಟರಿ ಮತ್ತು ಪೇಂಟ್ ಇರುವ ರೂಮ್‌ನಲ್ಲಿ ಮಹಿಳೆಯ ಉಡುಪು ಸಿಕ್ಕಿತೆಂದು ಹೇಳಿದ್ದಾರೆ, ಆದರೆ ಲಾಕ್ ಆಗಿದ್ದ ರೂಮ್‌ನಲ್ಲಿ ವೀರ್ಯಾಣುವಿರುವ ಬಟ್ಟೆ ಸಿಗುವುದು ಹೇಗೆ? ಎಂದು ಪ್ರಶ್ನೆ ಮಂಡಿಸಲಾಗಿದೆ. ಕೂದಲನ್ನು ಸುತ್ತಿ ಬ್ಯಾಗ್‌ನಲ್ಲಿ ಇಟ್ಟಿರುವ ರಹಸ್ಯ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ಮೇಲ್ಮನವಿಯಲ್ಲಿ, ಮಹಿಳೆಯ ಸಿಆರ್‌ಪಿಸಿ 164 ಹೇಳಿಕೆಯನ್ನು ಕೋರ್ಟ್‌ಗೆ ಹಾಜರುಪಡಿಸಿಲ್ಲ ಎಂದು ಆರೋಪಿಸಲಾಗಿದೆ. ಆರೋಪಿತ ವೀಡಿಯೋ ಇದೆ ಎಂದು ಹೇಳಿರುವ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿಲ್ಲ. ಎಫ್‌ಎಸ್‌ಎಲ್ (ಫಾರೆನ್ಸಿಕ್ ಸೈನ್ಸ್ ಲ್ಯಾಬ್) ವರದಿಯಲ್ಲೂ ವಿರೋಧಾಭಾಸಗಳಿವೆ ಎಂದು ಹೇಳಿ, ಶಿಕ್ಷೆ ರದ್ದುಪಡಿಸುವಂತೆ ಕೋರಲಾಗಿದೆ. ಪ್ರಜ್ವಲ್ ರೇವಣ್ಣ, "ಇದು ರಾಜಕೀಯ ದುರುದ್ದೇಶದಿಂದ ರೂಪಿತ ಪ್ರಕರಣ. ಜೊತೆಗೆ ನ್ಯಾಯಾಂಗ ತಪ್ಪುಗಳಿವೆ" ಎಂದು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆಯಲ್ಲಿ, 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹಾಸನದಲ್ಲಿ ವೈರಲ್ ಆದ ಅಶ್ಲೀಲ ವೀಡಿಯೋಗಳು ಉಂಟಾದ ನಾಲ್ಕು ಪ್ರಕರಣಗಳಲ್ಲಿ ಇದು ಮೊದಲನೆಯದ್ದಾಗಿದೆ. ಫಾರ್ಮ್ ಹೌಸ್‌ನಲ್ಲಿ 47 ವರ್ಷದ ಮಹಿಳೆಯನ್ನು ಪ್ರಜ್ವಲ್ ಬಲವಂತವಾಗಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಸ್ಪೆಷಲ್ ಕೋರ್ಟ್ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು, ಪ್ರಜ್ವಲ್ ಅವರನ್ನು ದೋಷಿಯೆಂದು ಘೋಷಿಸಿ, ಜೀವಿತಾವಧಿ ಜೈಲು ಮತ್ತು ₹11.50 ಲಕ್ಷ ದಂಡ ವಿಧಿಸಿದ್ದರು.
ಈ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆಯಲ್ಲಿ ಪ್ರಜ್ವಲ್ ಕೂದಲು ಮತ್ತು ಶರೀರ ದ್ರವಗಳು ಸಂತ್ರಸ್ತೆಯ ಉಡುಪಿನೊಂದಿಗೆ ಹೊಂದಿಕೊಂಡಿವೆ ಎಂದು ವರದಿ ಬಂದಿತ್ತು. ಆದರೆ, ಮೇಲ್ಮನವಿಯಲ್ಲಿ ಇದನ್ನು ರಾಜಕೀಯ ಷಡ್ಯಂತ್ರ ಎಂದು ಹೇಳಲಾಗಿದೆ. ಹೈಕೋರ್ಟ್ ಈ ಮೇಲ್ಮನವಿಯನ್ನು ಚುರುಕುಗೊಳಿಸಿ ವಿಚಾರಣೆ ನಡೆಸಲಿದೆ ಎಂದು ನಿರೀಕ್ಷೆಯಿದೆ.
ಇದನ್ನೂ ಓದಿ: Prajwal Revanna: ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಆದ ಪ್ರಜ್ವಲ್ ರೇವಣ್ಣ ; ದಿನಕ್ಕೆ ಸಂಬಳ ಎಷ್ಟು ಗೊತ್ತಾ?