Prajwal Revanna: ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಆದ ಪ್ರಜ್ವಲ್ ರೇವಣ್ಣ ; ದಿನಕ್ಕೆ ಸಂಬಳ ಎಷ್ಟು ಗೊತ್ತಾ?
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪರಪ್ಪನ ಅಗ್ರಹಾರದಲ್ಲಿ ಸಾಮಾನ್ಯ ಕೈದಿಗಳಂತೆ ತಮ್ಮ ತಪ್ಪಿಗೆ ಶಿಕ್ಷೆಯನ್ನ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಖೈದಿಗಳು ಜೈಲಿನಲ್ಲಿ ಯಾವುದಾದರೊಂದು ಕೆಲಸ ಮಾಡಲೇಬೇಕು.

-

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪರಪ್ಪನ ಅಗ್ರಹಾರದಲ್ಲಿ ಸಾಮಾನ್ಯ ಕೈದಿಗಳಂತೆ ತಮ್ಮ ತಪ್ಪಿಗೆ ಶಿಕ್ಷೆಯನ್ನ ಅನುಭವಿಸುತ್ತಿದ್ದಾರೆ. ಜೈಲಾಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ಲೈಬ್ರರಿಯ ಕ್ಲರ್ಕ್ ಆಗಿ ನೇಮಿಸಿದ್ದು, ಪುಸ್ತಕಗಳನ್ನು ಕೊಡುವುದು ಹಾಗೂ ನೋಂದಣಿ ಮಾಡಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಸದ್ಯ ಒಂದು ದಿನದ ಮಟ್ಟಿಗೆ ಪ್ರಜ್ವಲ್ ಕೆಲಸ ಮಾಡಿದ್ದು, ದಿನಗೂಲಿಯಾಗಿ ದಿನಕ್ಕೆ 522 ರೂ. ಗಳನ್ನ ನೀಡಲಾಗುತ್ತದೆ. ಕೆಲಸಕ್ಕೆ ಹಾಜರಾಗದಿದ್ದರೆ ಸಂಬಳ ನೀಡಲಾಗುವುದಿಲ್ಲ.
ನ್ಯಾಯಾಲಯದ ವಿಚಾರಣೆಗಾಗಿ ಆಗಾಗ ಬರಬೇಕಾಗಿರುವುದರಿಂದ ಮತ್ತು ವಕೀಲರೊಂದಿಗೆ ಇತರ ಪ್ರಕರಣಗಳ ಚರ್ಚೆಗಾಗಿ ಸಮಯ ಬೇಕಾಗಿರುವ ಕಾರಣ, ಅವರನ್ನು ಪೂರ್ಣ ಸಮಯದ ಕೆಲಸಕ್ಕೆ ನಿಯೋಜಿಸಿಲ್ಲ. ಪ್ರಜ್ವಲ್ ರೇವಣ್ಣ ಅವರ ಜೈಲು ಜೀವನವು ಸಾಮಾನ್ಯ ಕೈದಿಗಳಂತೆಯೇ ಇದ್ದು, ಕಾರಾಗೃಹದ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆಯಾಗಿದ್ದರೂ, ಜೈಲಿನಲ್ಲಿ ಕೆಲಸ ಮಾಡುವ ಮೂಲಕ ಸಮಯ ಕಳೆಯುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಖೈದಿಗಳು ಜೈಲಿನಲ್ಲಿ ಯಾವುದಾದರೊಂದು ಕೆಲಸ ಮಾಡಲೇಬೇಕು. ಖೈದಿಗಳ ಅರ್ಹತೆ, ಆಸಕ್ತಿಗೆ ಅನುಗುಣವಾಗಿ ಕೆಲಸ ಹಂಚಿಕೆ ಮಾಡಲಾಗುತ್ತೆ. ಪ್ರಜ್ವಲ್ ರೇವಣ್ಣ ತಾನು ಕೃಷಿ ಕೆಲಸ ಮಾಡುತ್ತೇನೆ, ಜೊತೆಗೆ ಜೈಲಿನ ಅಡ್ಮಿನಿಸ್ಟ್ರೇಟೀವ್ ಕೆಲಸ ಕೂಡ ಮಾಡುವುದಾಗಿ ಜೈಲು ಅಧಿಕಾರಿಗಳಿಗೆ ತಿಳಿಸಿದ್ದರು. ಆದರೇ, ಅಂತಿಮವಾಗಿ ಜೈಲು ಅಧಿಕಾರಿಗಳು ಲೈಬ್ರರಿ ಕ್ಲರ್ಕ್ ಕೆಲಸವನ್ನು ಪ್ರಜ್ವಲ್ ರೇವಣ್ಣಗೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Actor Darshan: ಒಂದೇ ಜೈಲಿನಲ್ಲಿರುವ ಪ್ರಜ್ವಲ್, ದರ್ಶನ್ ಭೇಟಿಯಾಗ್ತಾರಾ? ಕಾನೂನು ಏನು ಹೇಳುತ್ತೆ?
ಪ್ರಜ್ವಲ್ ರೇವಣ್ಣ ವಿರುದ್ಧದ ಒಂದು ರೇಪ್ ಕೇಸ್ ನಲ್ಲಿ ಮಾತ್ರ ಜೀವಾವಧಿ ಶಿಕ್ಷೆ ವಿಧಿಸಿ ಕೆಳ ನ್ಯಾಯಾಲಯ ತೀರ್ಪು ನೀಡಿದೆ. ಇನ್ನೂ ಮೂರು ಕೇಸ್ ಗಳಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧದ ವಿಚಾರಣೆಯ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ನಡೆಯುತ್ತಿದೆ. ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಕೊಟ್ಟಿರುವ ತೀರ್ಪು ಪ್ರಶ್ನಿಸಿ, ಪ್ರಜ್ವಲ್ ರೇವಣ್ಣ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತಿದ್ದಾರೆ.