Pralhad Joshi: ಈರುಳ್ಳಿ ರಫ್ತು ಮೇಲೆ ಶೇ.20 ರಷ್ಟು ಸುಂಕ ವಾಪಸ್: ಪ್ರಲ್ಹಾದ್ ಜೋಶಿ
Pralhad Joshi: ಕೇಂದ್ರ ಸರ್ಕಾರ ಏ.1ರಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿನ ಮೇಲಿನ ಶೇ.20ರಷ್ಟು ಸುಂಕವನ್ನು ಹಿಂತೆಗೆದುಕೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ನವದೆಹಲಿ: ಕೇಂದ್ರ ಸರ್ಕಾರ ಏ.1ರಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿನ ಮೇಲಿನ ಶೇ.20ರಷ್ಟು ಸುಂಕವನ್ನು ಹಿಂತೆಗೆದುಕೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದ್ದಾರೆ. ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆ ಸಂವಹನದ ಮೇರೆಗೆ ಕಂದಾಯ ಇಲಾಖೆ ಇಂದು ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. 2024ರ ಸೆ.13ರಿಂದ ರಫ್ತು ಸುಂಕ ಜಾರಿಯಲ್ಲಿತ್ತು. ಆದರೆ, ಈಗ ದೇಶೀಯವಾಗಿ ಈರುಳ್ಳಿ ಬೆಳೆ ಮತ್ತು ದಾಸ್ತಾನು ಲಭ್ಯತೆ ಆಧರಿಸಿ ಕೇಂದ್ರ ಈ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
2023 ಡಿಸೆಂಬರ್ 8 ರಿಂದ 2024ರ ಮೇ 3ರವರೆಗೆ ಸುಮಾರು ಐದು ತಿಂಗಳ ಕಾಲ ಈರುಳ್ಳಿಗೆ ಸುಂಕ, ಕನಿಷ್ಠ ರಫ್ತು ಬೆಲೆ (MEP) ಮತ್ತು ರಫ್ತು ನಿಷೇಧ ಹೇರಲಾಗಿತ್ತು. ರಫ್ತು ನಿರ್ಬಂಧದ ಹೊರತಾಗಿಯೂ 2023-24ರಲ್ಲಿ 17.17 ಲಕ್ಷ ಮೆಟ್ರಿಕ್ ಟನ್ ಮತ್ತು 2024-25ರಲ್ಲಿ (ಮಾರ್ಚ್ 18 ರವರೆಗೆ ) 11.65 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ರಫ್ತು ಮಾಡಲಾಗಿತ್ತು. ಮಾಸಿಕ ಈರುಳ್ಳಿ ರಫ್ತು ಪ್ರಮಾಣ 2024ರ ಸೆಪ್ಟೆಂಬರ್ ಅಲ್ಲಿ 0.72 ಲಕ್ಷ ಮೆಟ್ರಿಕ್ ಟನ್‌ನಿಂದ ಜನವರಿ 2025 ರಲ್ಲಿ 1.85 ಲಕ್ಷ ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ ಎಂದು ಜೋಶಿ ತಿಳಿಸಿದ್ದಾರೆ.
ಬೆಲೆ ಸ್ಥಿರತೆಗೆ ಕೇಂದ್ರ ಬದ್ಧ
ರಬಿ ಬೆಳೆ ಉತ್ತಮವಾಗಿದ್ದರಿಂದ ಮಂಡಿ ಮತ್ತು ಚಿಲ್ಲರೆ ಮಾರಾಟದ ಬೆಲೆ ಕಡಿಮೆಯಾಗಿದೆ. ಈ ಹಂತದಲ್ಲಿ ರೈತರಿಗೆ ಲಾಭದಾಯಕ ಬೆಲೆ ಖಾತರಿಪಡಿಸುವ ಮತ್ತು ಗ್ರಾಹಕರಿಗೆ ಕೈಗೆಟುಕುವಂತೆ ಈರುಳ್ಳಿ ಬೆಲೆ ಕಾಯ್ದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ಬದ್ಧತೆ ತೋರಿದೆ. ಪ್ರಸ್ತುತ ಮಂಡಿ ಬೆಲೆ ಹಿಂದಿನ ವರ್ಷಕ್ಕಿಂತ ಹೆಚ್ಚಿದ್ದರೂ, ಅಖಿಲ ಭಾರತ ಸರಾಸರಿ ಮಾದರಿ ಬೆಲೆ ಶೇ.39ರಷ್ಟು ಕುಸಿತ ಕಂಡುಬಂದಿದೆ. ಅದೇ ರೀತಿ, ಕಳೆದೊಂದು ತಿಂಗಳಿನಿಂದ ಸರಾಸರಿ ಚಿಲ್ಲರೆ ಬೆಲೆ ಶೇ. 10ರಷ್ಟು ಕುಸಿತ ದಾಖಲಿಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಈ ತಿಂಗಳಿನಿಂದ ಮಹಾರಾಷ್ಟ್ರದ ಲಸಲ್ಗಾಂವ್ ಮತ್ತು ಪಿಂಪಾಲ್ಗಾಂವ್ ಮಾರುಕಟ್ಟೆಗಳಲ್ಲಿ ಈರುಳ್ಳಿ ಹೆಚ್ಚು ಹೆಚ್ಚು ಬರುತ್ತಿರುವುದು ಬೆಲೆ ಇಳಿಕೆಗೆ ಕಾರಣವಾಗಿದೆ. ಮಾರ್ಚ್ 21ರಂದು ಲಸಲ್ಗಾಂವ್ ಮತ್ತು ಪಿಂಪಾಲ್ಗಾಂವ್‌ನಲ್ಲಿ ಈರುಳ್ಳಿಯ ಮಾದರಿ ಬೆಲೆ ಕ್ರಮವಾಗಿ 1330 ಕ್ವಿಂಟಲ್ ಮತ್ತು 1325 ಕ್ವಿಂಟಲ್ ಇತ್ತು.
ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಅಂದಾಜಿನ ಪ್ರಕಾರ ಈ ವರ್ಷದ ರಬಿ ಉತ್ಪಾದನೆ 227 ಲಕ್ಷ ಮೆಟ್ರಿಕ್ ಟನ್‌ಗಳಷ್ಟಿದ್ದು, ಕಳೆದ ವರ್ಷ 192 ಲಕ್ಷ ಮೆ.ಟನ್‌ಗಳಿಗಿಂತ ಶೇ.18ಕ್ಕಿಂತ ಹೆಚ್ಚಾಗಿದೆ. ಭಾರತದ ಒಟ್ಟು ಈರುಳ್ಳಿ ಉತ್ಪಾದನೆಯ ಶೇ.70-75 ರಷ್ಟಿರುವ ರಬಿ ಈರುಳ್ಳಿ, ಅಕ್ಟೋಬರ್/ನವೆಂಬರ್‌ನಿಂದ ಖಾರಿಫ್ ಬೆಳೆ ಬರುವವರೆಗೆ ಒಟ್ಟಾರೆ ಲಭ್ಯತೆ ಮತ್ತು ಬೆಲೆಗಳಲ್ಲಿ ಸ್ಥಿರತೆಗೆ ನಿರ್ಣಾಯಕವಾಗಿದೆ. ಈ ಋತುವಿನಲ್ಲಿ ಹೆಚ್ಚಿನ ಉತ್ಪಾದನೆ ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ.
ಈ ಸುದ್ದಿಯನ್ನೂ ಓದಿ | Job Guide: ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್‌ನಲ್ಲಿದೆ 52 ಹುದ್ದೆ; ಪದವಿ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಿ
ದೇಶದಲ್ಲಿ 2023ರ ಆಗಸ್ಟ್‌ನಿಂದ ಕಡಿಮೆ ಈರುಳ್ಳಿ ಉತ್ಪಾದನೆ ಮತ್ತು ಹೆಚ್ಚಿನ ಅಂತಾರಾಷ್ಟ್ರೀಯ ಬೆಲೆ ಸಮಸ್ಯೆ ಎದುರಿಸಬೇಕಾಗಿತ್ತು. ಈಗ ಹೆಚ್ಚು ಉತ್ಪಾದನೆ ಮತ್ತು ಬೆಲೆ ಇಳಿಕೆ ಸ್ವಾಗತಾರ್ಹವಾಗಿದೆ. ಆದರೆ ಯಾವುದೇ ಕಾರಣಕ್ಕೂ ರೈತರಿಗೆ ನಷ್ಟ ಉಂಟಾಗಲು ಬಿಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.