ದೃಶ್ಯಂ ಸ್ಟೈಲ್ ಮರ್ಡರ್; ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಕೆಲಸದಾಳು ಕಥೆ ಮುಗಿಸಿದ ಮಗ!
Vijayapur News: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನ್ನಟ್ಟಿ ಪಿ.ಎ ಗ್ರಾಮದಲ್ಲಿ ಹತ್ಯೆ ನಡೆದಿತ್ತು. ಕೊಲೆ ಬಳಿಕ ಅಮಾಯಕರಂತೆ ಓಡಾಡುತ್ತಿದ್ದ ಹಂತಕರು ಕೊನೆಗೂ ಬಂಧನವಾಗಿದ್ದಾರೆ. ಪ್ರಕರಣ ನಡೆದ 6 ತಿಂಗಳ ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಯಾದ ಮಹಾದೇವಪ್ಪ ಮತ್ತು ಆರೋಪಿ ಅಪ್ಪುಗೌಡ. -
ವಿಜಯಪುರ: ವಿಜಯಪುರದಲ್ಲಿ ದೃಶ್ಯಂ ಸಿನಿಮಾ ಸ್ಟೈಲ್ನಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅನೈತಿಕ ಸಂಬಂಧಕ್ಕೆ ನಡೆದಿದ್ದ ಕೊಲೆ ರಹಸ್ಯ ಬರೋಬ್ಬರಿ ಆರು ತಿಂಗಳ ಬಳಿಕ ಬಯಲಾಗಿದೆ. ವಿಜಯಪುರ (Vijayapur News) ಜಿಲ್ಲೆಯ ಸಿಂದಗಿ ತಾಲೂಕಿನ ಬೆನ್ನಟ್ಟಿ ಪಿ.ಎ ಗ್ರಾಮದಲ್ಲಿ ಹತ್ಯೆ ನಡೆದಿತ್ತು. ಕೊಲೆ ಬಳಿಕ ಅಮಾಯಕರಂತೆ ಓಡಾಡುತ್ತಿದ್ದ ಹಂತಕರು ಕೊನೆಗೂ ಬಂಧನವಾಗಿದ್ದಾರೆ. ಸಿನಿಮೀಯ ರೀತಿಯಲ್ಲಿ ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಬ್ರೈನ್ ಮ್ಯಾಪಿಂಗ್ ಹಾಗೂ ಪಾಲಿಗ್ರಾಫ್ ಟೆಸ್ಟ್ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಜಮೀನು ಯಜಮಾನಿ ಮಲ್ಲಮ್ಮ, ಕೆಲಸದಾಳು ಮಹಾದೇವಪ್ಪ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎನ್ನುವ ಕಾರಣಕ್ಕೆ ಆಕೆಯ ಮಗ ಅಪ್ಪುಗೌಡ ಕಟ್ಟಿಗೆಯಿಂದ ಹೊಡೆದು ಮಹಾದೇವಪ್ಪನನ್ನು ಕೊಲೆ ಮಾಡಿದ್ದ. ಬಳಿಕ ಮಲ್ಲಮ್ಮ ಹಾಗೂ ತಂದೆ ಸಿದ್ದನಗೌಡನ ಸಹಾಯದೊಂದಿಗೆ ಶವವನ್ನು ಬೇರೆ ಜಮೀನೊಂದರ ಮುಳ್ಳು ಕಂಟಿಯಲ್ಲಿ ಬಿಸಾಕಿದ್ದ.
ಕೊಲೆ ಬಳಿಕ ಪೊಲೀಸರು ವಿಚಾರಣೆಗೆ ಬಂದಾಗ ಹೇಗೆ ವರ್ತಿಸಬೇಕು, ಹೇಗೆ ಪ್ರಕರಣದಲ್ಲಿ ಸಿಲುಕಿಕೊಳ್ಳದಂತೆ ಬಚಾವ್ ಆಗಬೇಕು ಎನ್ನುವ ಬಗ್ಗೆ ತಂದೆ-ತಾಯಿಗೆ ಮಗ ಅಪ್ಪುಗೌಡ ದೃಶ್ಯಂ ಸಿನಿಮಾ ಮಾದರಿಯಲ್ಲೇ ಟ್ರೈನಿಂಗ್ ನೀಡಿದ್ದ. ಯಾವುದೇ ಕಾರಣಕ್ಕೂ ಮೊಬೈಲ್ ಬಳಕೆ ಮಾಡದಂತೆ, ಊರು ಬಿಡದಂತೆ ಹಾಗೂ ತಾವೇ ಆ ಕೊಲೆ ಬಗ್ಗೆ ಊರಿನವರ ಜತೆ ದಿನವೂ ಮಾತನಾಡಬೇಕು ಎಂದು ಹೇಳಿದ್ದ. ಅದರಂತೆ ಮನೆಯವರು ಯಾರಿಗೂ ಅನುಮಾನ ಬಾರದಂತೆ ನಡೆದುಕೊಂಡಿದ್ದರು.
ಕೊಲೆ ನಡೆದ ನಾಲ್ಕು ದಿನಗಳ ಬಳಿಕ ಮಹಾದೇವಪ್ಪ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಸಹಜ ಸಾವು ಎನ್ನಲಾಗಿತ್ತು. ಆದರೆ, ಶವ ಪರೀಕ್ಷೆ ಬಳಿಕ ಇದೊಂದು ಹಲ್ಲೆ ನಡೆಸಿ ಮಾಡಿರುವ ಕೊಲೆ ಎನ್ನುವುದು ಬಯಲಿಗೆ ಬಂದಿತ್ತು. ಸರ್ವೇಯರ್ ಹುದ್ದೆಯಲ್ಲಿರುವ ಆರೋಪಿ ಅಪ್ಪುಗೌಡ ತನ್ನ ಚಾಣಾಕ್ಷತನದಿಂದ ಸಾಕ್ಷ್ಯಗಳನ್ನು ನಾಶ ಮಾಡಿದ್ದ, ಯಾವುದೇ ಸಾಕ್ಷಿಗಳು ಸಿಗದಂತೆ ತನ್ನ ಬುದ್ಧಿವಂತಿಕೆ ಪ್ರದರ್ಶಿಸಿದ್ದ.
ಆರೋಪಿಗಳು ಸಿಕ್ಕಿಬಿದ್ದದ್ದು ಹೇಗೆ?
ಒಂದು ಹಂತದಲ್ಲಿ ಮಹಾದೇವಪ್ಪ ತನ್ನದೆ ಮಗನಿಂದಲೇ ಕೊಲೆಯಾಗಿದ್ದಾನೆ ಎಂದು ಪೊಲೀಸರಿಗೆ ಸಂಶಯ ಮೂಡುವಂತೆಯೂ ಅಪ್ಪುಗೌಡ ವರ್ತಿಸಿದ್ದ. ಹೀಗಾಗಿ ಜಟಿಲವಾಗಿದ್ದ ಕೇಸ್ ತಮ್ಮ ಸುಪರ್ದಿಗೆ ಪಡೆದ ಎಸ್ಪಿ ಲಕ್ಷ್ಮಣ ನಿಂಬರಗಿ ಕೊಲೆಯಾದ ಮಹಾದೇವಪ್ಪ ಕುಟುಂಬ ಹಾಗೂ ಮಹಾದೇವಪ್ಪ ಕೆಲಸ ಮಾಡುತ್ತಿದ್ದ ಯಜಮಾನಿ ಮಲ್ಲಮ್ಮ, ಆಕೆ ಪುತ್ರ ಅಪ್ಪುಗೌಡ, ಹಾಗೂ ಆಕೆ ಗಂಡ ಸಿದ್ದನಗೌಡ ಬ್ರೇನ್ ಮ್ಯಾಪಿಂಗ್ ಹಾಗೂ ಪಾಲಿಗ್ರಾಫ್ ಟೆಸ್ಟ್ ಮಾಡಿಸುವ ಮೂಲಕ ಪ್ರಕರಣ ಬಯಲಿಗೆ ಎಳೆದಿದ್ದಾರೆ.
ಬ್ರೇನ್ ಮ್ಯಾಪಿಂಗ್ ವೇಳೆ ಅಪ್ಪುಗೌಡ, ಜಮೀನು ಯಜಮಾನಿ ಮಲ್ಲಮ್ಮ, ಆಕೆ ಗಂಡ ಸಿದ್ದನಗೌಡ ಆರೋಪಿಗಳು ಅನ್ನೋದು ಪತ್ತೆಯಾಗಿದೆ. ಕಳೆದ ಮೇ 31 ರಂದು ಮಹಾದೇವಪ್ಪ ಮಲ್ಲಮ್ಮಳ ಜತೆಗೆ ಸಿಕ್ಕಿ ಬಿದ್ದಿದ್ದನು. ಆಗ ಸಿಟ್ಟಿನಲ್ಲಿ ಅಪ್ಪುಗೌಡ ಕಟ್ಟಿಗೆಯಿಂದ ಮಹಾದೇವಪ್ಪ ಮೇಲೆ ತಲೆ ಹಲ್ಲೆ ನಡೆಸಿದಾಗ ಆತ ಸ್ಥಳದಲ್ಲೆ ಪ್ರಾಣ ಬಿಟ್ಟಿದ್ದ, ಈ ಕೊಲೆ ಮುಚ್ಚಿ ಹಾಕೋದಕ್ಕೆ ಅಪ್ಪುಗೌಡ ಸಿನಿಮಾ ಸ್ಟೈಲ್ ನಲ್ಲಿ ಸ್ಕೆಚ್ ಹಾಕಿದ್ದ. ಆದರೆ ಇದೀಗ ಕೊನೆಗೂ ಹಂತಕ ಅಪ್ಪುಗೌಡ , ತಾಯಿ ಮಲ್ಲಮ್ಮ ಹಾಗೂ ಶವ ಸಾಗಾಟ ಮಾಡಲು ನೆರವಾಗಿದ್ದ ತಂದೆ ಸಿದ್ದನಗೌಡನನ್ನು ಪೊಲೀಸರು ಬಂಧಿಸಿದ್ದಾರೆ.