ರಾಯಚೂರು, ಡಿ. 12: ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿ ನಂತರ ಮದುವೆಯ ನಾಟಕವಾಡಿ ಬೇರೊಬ್ಬ ಯುವತಿಯನ್ನು ವರಿಸಲು ಮುಂದಾದ ಯುವಕನೊಬ್ಬನ ಮೋಸದ ಕಥೆ ಇದು. ಸಮಯಕ್ಕೆ ಸರಿಯಾಗಿ ಪ್ರೇಯಸಿ ಆಗಮಿಸಿ ಮದುವೆಯನ್ನು ನಿಲ್ಲಿಸಿದ್ದಾಳೆ. ರಾಯಚೂರು (Raichur News) ನಗರದಲ್ಲಿ ಈ ಘಟನೆ ನಡೆದಿದೆ. ಹೀಗೆ ಪ್ರೀತಿಸಿದ ಯುವತಿಗೆ ಕೈಕೊಟ್ಟು ಬೇರೊಂದು ಮದುವೆಯಾಗಲು ಹೊರಟ ಯುವಕನ್ನು ರಿಷಬ್ ಎಂದು ಗುರುತಿಸಲಾಗಿದೆ.
ಬಳ್ಳಾರಿಯಲ್ಲಿ ಓದುತ್ತಿದ್ದ ವೇಳೆ ರಿಷಬ್, ಕೊಪ್ಪಳದ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಗರ್ಭಪಾತ ಮಾಡಿಸಿ ಬೇರೆ ಯುವತಿ ಜತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ. ಈ ವಿಚಾರ ತಿಳಿಯುತ್ತಿದ್ದಂತೆಯೇ ಪ್ರೇಯಿಸಿ ಸ್ಥಳಕ್ಕೆ ಬಂದು ಡಿಸೆಂಬರ್ 12ರಂದು ನಡೆಯಬೇಕಿದ್ದ ಮದುವೆ ನಿಲ್ಲಿಸಿದ್ದಾಳೆ. ಸದ್ಯ ರಿಷಬ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ರಾಯಚೂರು ಮೂಲದ ರಿಷಬ್ ಮತ್ತು ಸಂತ್ರಸ್ತೆ ಪದವಿ ಓದುತ್ತಿದ್ದಾಗ ಪರಿಚಿತರಾಗಿದ್ದರು. ಬಳಿಕ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಮದುವೆಯಾಗುವುದಾಗಿ ನಂಬಿಸಿ ರಿಷಬ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಆಕೆ ಗರ್ಭಿಣಿಯಾದಾಗ ಬಲವಂತವಾಗಿ ಗರ್ಭಪಾತ ಮಾಡಿಸಿದ್ದ. ಜತೆಗೆ ದೇವಸ್ಥಾನವೊಂದರಲ್ಲಿ ಆಕೆಯನ್ನು ಸರಳವಾಗಿ ಮದುವೆಯಾಗಿದ್ದ. ಬಳಿಕ ಊರಿಗೆ ಬಂದವರು ಬೇರೊಂದು ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ.
ಇನ್‌ಸ್ಟಾಗ್ರಾಂನಲ್ಲಿ ಗುಟ್ಟು ರಟ್ಟು
ರಿಷಬ್ ತನ್ನ ಮದುವೆಯ ಸಿದ್ಧತೆಯನ್ನು ಬಹಳ ಗುಟ್ಟಾಗಿ ನಡೆಸಿದ್ದ. ಆದರೆ ಇನ್‌ಸ್ಟಾಗ್ರಾಂನಿಂದಾಗಿ ಆತ ಪ್ರೇಯಸಿಗೆ ಈ ವಿಚಾರ ಗೊತ್ತಾಯಿತು. ರಿಷಬ್ ರಾಯಚೂರು ನಗರದಲ್ಲಿ ಮದುವೆಯಾಗಲು ಸಕಲ ಸಿದ್ಧತೆ ಮಾಡಿಕೊಂಡಿದ್ದ. ಆತ ತನ್ನ ಮದುವೆ ಆಮಂತ್ರಣ ಪತ್ರಿಕೆಯನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದು, ಪ್ರಕರಣಕ್ಕೆ ತಿರುವು ನೀಡಿತು. ಅದನ್ನು ನೋಡಿದ ಕೂಡಲೇ ಪ್ರೇಯಸಿ ಕೊಪ್ಪಳದಿಂದ ನೇರವಾಗಿ ರಾಯಚೂರಿಗೆ ಬಂದು ಮದುವೆ ನಿಲ್ಲಿಸಿದ್ದಾಳೆ.
ಜಸ್ಟ್ 20 ನಿಮಿಷಕ್ಕೆ ಮುರಿದು ಬಿತ್ತು ಮದುವೆ!
ಮದುವೆಗೆ ನಿರಾಕರಿಸಿದ ಪ್ರೇಯಸಿ: ಟವರ್ ಏರಿದ ಪಾಗಲ್ ಪ್ರೇಮಿ
ಭೋಪಾಲ್: 19 ವರ್ಷದ ಯುವಕನೊಬ್ಬ ಪ್ರೇಯಸಿ ತನ್ನನ್ನು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಸಾಯಲು ನಿರ್ಧರಿಸಿದ ಘಟನೆ ಇತ್ತೀಚೆಗೆ ಮಧ್ಯ ಪ್ರದೇಶದ ಶಹದೋಲ್‌ನಲ್ಲಿ ನಡೆದಿತ್ತು. ಪ್ರೇಯಸಿಯು ತನ್ನನ್ನು ನಿರ್ಲಕ್ಷ್ಯದಿಂದ ನೋಡಿಕೊಳ್ಳುತ್ತಿದ್ದಾಳೆ, ತನ್ನಿಂದ ಬೇರ್ಪಡಲು ನಿರ್ಧರಿಸಿದ್ದಾಳೆ ಎಂದು ಮನನೊಂದು ಆ ಯುವಕನು ಹೈ ವೋಲ್ಟೇಜ್ ಇರುವ ವಿದ್ಯುತ್ ಟವರ್ ಅನ್ನು ಏರಿದ್ದ.
ಡಿಸೆಂಬರ್ 3ರಂದು ಮಧ್ಯ ಪ್ರದೇಶದ ಶಹದೋಲ್‌ನ ಡೆವೊಲ್ಯಾಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಿಮ್ಹಿಹಾ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಯುವಕನನ್ನು ಸಂತೋಷ್ ಸಾಕೇತ್ ಎಂದು ಗುರುತಿಸಲಾಗಿದೆ. ಪ್ರೇಯಸಿ ನಡುವೆ ವೈಮನಸ್ಸು ಮೂಡಿದ್ದು ಇತ್ತೀಚೆಗೆ ಆಕೆಯು ಬ್ರೇಕಪ್ ಮಾಡಿಕೊಳ್ಳಲು ಒತ್ತಾಯಿಸಿದ್ದಳು. ಹೀಗಾಗಿ ಆತ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ 33 ಕೆವಿ ಹೈ ವೋಲ್ಟೆಜ್ ವಿದ್ಯುತ್ ಟವರ್ ಹತ್ತಿದ್ದ. ಕೊನೆಗೆ ಆತನನ್ನು ರಕ್ಷಿಸಲಾಯಿತು.