ಬೆಂಗಳೂರು: ಗ್ಯಾರಂಟಿಗಳ ಘೋಷಣೆ ಮಾಡಿ ಬಳಿಕ ಯೋಜನೆ ಜಾರಿಗೆ ತಂದು ನುಡಿದಂತೆ ನಡೆದ ಸರ್ಕಾರ ಎನಿಸಿಕೊಂಡ ಕಾಂಗ್ರೆಸ್ ಸರ್ಕಾರದ ಯೋಜನೆ ಕುರಿತು ಸ್ವತಃ ಸಚಿವರೇ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಬೇಕೋ, ಬೇಡವೋ ರಾಜ್ಯದಲ್ಲಿ ನಾವು ಗ್ಯಾರಂಟಿ ಕೊಟ್ಟಿದ್ದೇವೆ. ಗ್ಯಾರಂಟಿ (Guarantee Scheme) ಇಲ್ಲದಿದ್ದರೆ ಅಷ್ಟು ಸಮಸ್ಯೆ ಆಗುತ್ತಿರಲಿಲ್ಲ ಎಂದು ಸಚಿವ ಹೆಚ್‌ಸಿ ಬಾಲಕೃಷ್ಣ ( H. C. Balakrishna) ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ರಾಮನಗರದ ಡಿಸಿ ಕಚೇರಿ ಬಳಿ ವಿಶೇಷ ಚೇತನರ ಅಹವಾಲು ಸ್ವೀಕರಿಸುವ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ, ರೈತರಿಗೂ ಪರಿಹಾರ ಕೊಡಬೇಕು, ಅವರೂ ಗಲಾಟೆ ಮಾಡುತ್ತಿದ್ದಾರೆ. ಗ್ಯಾರಂಟಿ ನಿಲ್ಲಿಸಿದರೆ ಅವರೂ ಗಲಾಟೆ ಮಾಡುತ್ತಾರೆ. ಈ ಸಮಸ್ಯೆಯಲ್ಲಿ ಸಿಲುಕಿ ನಾವೆಲ್ಲ ಒದ್ದಾಡುತ್ತಿದ್ದೇವೆ. ಗ್ಯಾರಂಟಿ ಇಲ್ಲದಿದ್ದರೆ ಇದೆಲ್ಲ ಅಷ್ಟು ಸಮಸ್ಯೆ ಆಗುತ್ತಿರಲಿಲ್ಲ ಎಂದು ಹೇಳಿದರು.
ಸರ್ಕಾರ ನಡೆಸಬೇಕಲ್ಲ, ವ್ಯವಸ್ಥೆಯಲ್ಲಿ ಹಣಕಾಸು ಸರಿದೂಗಿಸಬೇಕಲ್ಲ. ಬಜೆಟ್ ಒಳಗಡೆ ಎಲ್ಲವನ್ನೂ ಮಾಡಬೇಕು. ವಿಶೇಷ ಚೇತನರ ಬೇಡಿಕೆಗಳನ್ನ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಚಿವ ಹೇಳಿದ್ದಾರೆ. ಹೆಚ್‌ಸಿ ಬಾಲಕೃಷ್ಣ ಹೇಳಿಕೆಗೆ ಅಚ್ಚರಿ ವ್ಯಕ್ತವಾಗಿದ್ದು, ಗ್ಯಾರಂಟಿ ಯೋಜನೆಗೆ ಪಕ್ಷದಲ್ಲಿಯೇ ಅಸಮಾಧನವಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ: ಸ್ಪಷ್ಟನೆ ನೀಡಿದ ಸಿಎಂ
ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಮತ್ತು ಅನುಷ್ಠಾನದ ಕುರಿತು ಹರಡಿರುವ ವದಂತಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೆರೆ ಎಳೆದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ಇವು ಶೇಕಡಾ 100 ರಷ್ಟು ಮುಂದುವರಿಯಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿಯಂತಹ ಯೋಜನೆಗಳಲ್ಲಿ ಕೆಲವು ತಾಂತ್ರಿಕ ಸೋರಿಕೆಗಳು ಹಾಗೂ ನಕಲಿ ದಾಖಲೆಗಳ ಸೃಷ್ಟಿ ಸರ್ಕಾರದ ಗಮನಕ್ಕೆ ಬಂದಿದೆ. ಮೃತರ ಹೆಸರಿನಲ್ಲಿ ಹಣ ಪಡೆಯುವುದು ಅಥವಾ ಒಂದಕ್ಕಿಂತ ಹೆಚ್ಚು ಖಾತೆಗಳಿಗೆ ಸೌಲಭ್ಯ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಮಾತ್ರ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸಲಾಗುತ್ತಿದೆ. ಅರ್ಹರಿಗೆ ಯಾವುದೇ ತೊಂದರೆಯಾಗದಂತೆ, ಕೇವಲ ಅನರ್ಹರನ್ನು ಮತ್ತು ದುರುಪಯೋಗವನ್ನು ಪತ್ತೆಹಚ್ಚಲು ಇ-ಕೆವೈಸಿ (e-KYC) ಹಾಗೂ ಮಾಹಿತಿ ದೃಢೀಕರಣ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.