ರಾಮನಗರ, ಮಾ.25: ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸಲು ದೇವೇಗೌಡರು, ಕುಮಾರಸ್ವಾಮಿ ಬದ್ಧರಾಗಿದ್ದಾರೆ. ಆದರೆ ತಮಿಳುನಾಡು ಸಿಎಂ ಸ್ಟಾಲಿನ್ ಅವರಿಂದ ಡಿಸಿಎಂ ಡಿಕೆಶಿ ಅವರು ಎನ್‌ಒಸಿ (NOC) ತೆಗೆದುಕೊಂಡು ಬರಲಿ. ಮರುದಿನವೇ ಕೇಂದ್ರದ ಅನುಮತಿಗೆ ಎಚ್‌ಡಿಡಿ ಹಾಗೂ ಎಚ್‌ಡಿಕೆ ಹೋರಾಟ ಮಾಡುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕಿಡಿಕಾರಿದರು.
ರಾಮನಗರದ ಚಿಕ್ಕೇಗೌಡನದೊಡ್ಡಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನನೆಗುದಿಗೆ ಬಿದ್ದ ಎತ್ತಿನ ಹೊಳೆ ಯೋಜನೆಗೆ ಮರುಜೀವ ಪಡೆಯಲು ದೇವೇಗೌಡರು ಸದನದಲ್ಲಿ ಅಂಗಲಾಚಿ ಬೇಡಿದ್ದಾರೆ. ದೇವೇಗೌಡರ ಹಿರಿತನಕ್ಕೆ ಕೇಂದ್ರ ನಾಯಕರು ಕ್ಲಿಯರೆನ್ಸ್ ಕೊಟ್ಟಿದ್ದಾರೆ. ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸಲು ದೇವೇಗೌಡರು, ಕುಮಾರಸ್ವಾಮಿ ಬದ್ಧರಾಗಿದ್ದಾರೆ ಎಂದು ತಿಳಿಸಿದರು.
ಸಿದ್ರಾಮಣ್ಣ ಕೇರಳದ ಮುಖ್ಯಮಂತ್ರಿನಾ!? ಕರ್ನಾಟಕ ಮುಖ್ಯಮಂತ್ರಿನಾ?
ಸಿದ್ದರಾಮಯ್ಯ ಅವರು ಕೇರಳದ ಮುಖ್ಯಮಂತ್ರಿನಾ ಅಥವಾ ಕರ್ನಾಟಕ ಮುಖ್ಯಮಂತ್ರಿನಾ?. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಅತಿವೃಷ್ಟಿಯಾಗಿತ್ತು. ಆಗ ರೈತರು ಪರಿಹಾರ ಕೇಳಿದ್ರು ಅವರ ಕೂಗು ಸಿದ್ದರಾಮಯ್ಯ ಅವರಿಗೆ ಕೇಳಲಿಲ್ಲ ಎಂದು ಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಗುಡುಗಿದರು.
ರಾಜ್ಯ ಸರ್ಕಾರ 10 ಕೋಟಿ ಅನುದಾನ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೇರಳದಲ್ಲಿ ಭೂಕುಸಿತದಿಂದ ಜನರಿಗೆ ನೋವಾದ್ರೆ, ಅಲ್ಲಿನ ಸಿಎಂ ಪರಿಹಾರ ಘೋಷಣೆ ಮಾಡಬೇಕು. ಆದ್ರೆ ತಮ್ಮ ಕುರ್ಚಿ ಬಿಗಿ ಪಡಿಸಿಕೊಳ್ಳಲು, ಹೈಕಮಾಂಡ್ ವಿಶ್ವಾಸಗಳಿಸಲು ರಾಜ್ಯದ ತೆರಿಗೆ ಹಣ ವ್ಯರ್ಥ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
CM Siddaramaiah: ನಮ್ಮ ಬಜೆಟ್ ಖಾಲಿ ಚೊಂಬಲ್ಲ, ತುಂಬಿದ ಕೊಡ: ಸಿಎಂ ಸಿದ್ದರಾಮಯ್ಯ
ರಾಜ್ಯದ ಎರಡು ಬೈ ಎಲೆಕ್ಷನ್ ವಿಚಾರದ ಕುರಿತು ಮಾತನಾಡಿದ ಅವರು, ಎರಡೂ ಕ್ಷೇತ್ರದ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ನಾಯಕರು ಭಾಗಿಯಾಗಿದ್ರು. ದೆಹಲಿಯಲ್ಲಿ ಪಾರ್ಲಿಮೆಂಟ್ ನಡೆಯುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಅವರು ಸಹ ಪ್ರಚಾರ ಮಾಡುತ್ತಾರೆ. ಜೆಡಿಎಸ್ ನಾಯಕರು ಕೂಡ ಹೋಗಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು.
ರೈತರ ಅಹವಾಲು ಆಲಿಸಿದ ನಿಖಿಲ್
ರಾಮನಗರದ ಕಸಬಾ ಹೋಬಳಿಯ ಚಿಕ್ಕೇಗೌಡನದೊಡ್ಡಿ ಗ್ರಾಮದಲ್ಲಿ STRR -(ಸ್ಯಾಟಲೈಟ್ ಟೌನ್ ರಿಂಗ್ ರೋಡ್) ಯೋಜನೆಯ ರಸ್ತೆ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿಯನ್ನು ಕಳೆದುಕೊಂಡ ರೈತರನ್ನು ಭೇಟಿ ಮಾಡಿ, ಅವರ ಅಹವಾಲುಗಳನ್ನು ಆಲಿಸಿ, ಅವರ ಎಲ್ಲಾ ಮನವಿಗಳಿಗೆ ಸ್ಪಂದಿಸಿ 40 ಜನ ಸದಸ್ಯರನ್ನ ಒಳಗೊಂಡ ನಿಯೋಗವನ್ನು ರಚನೆ ಮಾಡಿ, ಖುದ್ದಾಗಿ ದೆಹಲಿಯಲ್ಲಿ ಕೇಂದ್ರ ಸಚಿವರಾದ ಎಚ್.ಡಿ ಕುಮಾರಣ್ಣ ಅವರನ್ನ ಭೇಟಿ ಮಾಡಿಸಿ, ಭೂಸ್ವಾಧೀನದ ಪರಿಹಾರದ ಹಣವನ್ನ ಶೀಘ್ರವಾಗಿ ಕೇಂದ್ರ ಸರ್ಕಾರದಿಂದ ರೈತರಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದರು.