ಶಿಕಾರಿಪುರ, ಅ.31: ಭಾರತೀಯ ಜನತಾ ಪಾರ್ಟಿ ವತಿಯಿಂದ (BJP) ಶುಕ್ರವಾರ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರ ನೇತೃತ್ವದಲ್ಲಿ ಶಿಕಾರಿಪುರದಲ್ಲಿ ಆತ್ಮನಿರ್ಭರ ಭಾರತಕ್ಕಾಗಿ ರಾಷ್ಟ್ರೀಯ ಏಕತಾ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ “ಒಂದೇ ಭಾರತ - ಆತ್ಮನಿರ್ಭರ ಭಾರತ” ಘೋಷವಾಕ್ಯದ ಅಡಿಯಲ್ಲಿ ದೇಶಾದ್ಯಂತ ನಡೆಯುತ್ತಿರುವ ಏಕತಾ ನಡಿಗೆಯ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು.
ಶಿಕಾರಿಪುರದ ಬಸವೇಶ್ವರ ಪಾರ್ಕ್‌ನ ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ದೇಶದ ಏಕತೆ, ಅಖಂಡತೆ ಮತ್ತು ಸಮಗ್ರತೆಗೆ ಅಮೂಲ್ಯ ಕೊಡುಗೆ ನೀಡಿದ ಭಾರತದ ಉಕ್ಕಿನ ಮನುಷ್ಯ ಹಾಗೂ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರುಮೂರ್ತಿ, ಜಿಲ್ಲಾಧ್ಯಕ್ಷ ಜಗದೀಶ್, ಮಾಜಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮಂಡಲ ಅಧ್ಯಕ್ಷ ಹನುಮಂತಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗಾಯತ್ರಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ನಿಂಬೆಗೊಂದಿ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ರೇಖಾ ರಾಜಶೇಖರ್, ಜಿಲ್ಲಾ ಕಾರ್ಯದರ್ಶಿ ನಿವೇದಿತಾ ರಾಜು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್, ಪುರಸಭಾ ಅಧ್ಯಕ್ಷರಾದ ಶ್ರೀಮತಿ ಸುನಂದಾ ಮಂಜುನಾಥ್, ಉಪಾಧ್ಯಕ್ಷೆ ರೂಪಾ ಮಂಜುನಾಥ್, ಪುರಸಭಾ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | Renewable Energy: ನವೀಕರಿಸಬಹುದಾದ ಇಂಧನದಲ್ಲಿ ಭಾರತ ಹೊಸ ಮೈಲಿಗಲ್ಲು; ಒಂದೇ ದಶಕದಲ್ಲಿ ಬರೋಬ್ಬರಿ 500.89 GWಗೆ ದಾಪುಗಾಲು
BY Vijayendra: ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸ ಸಿಎಂ ಮಾಡುತ್ತಿದ್ದಾರೆ: ವಿಜಯೇಂದ್ರ
ಬೆಂಗಳೂರು: ರಾಜ್ಯ ಹೈಕೋರ್ಟಿನ ತೀರ್ಪಿನಿಂದ ಸರ್ಕಾರಕ್ಕೆ ಹಿನ್ನಡೆ ಆಗಿದೆ. ಅವರ ಕುತಂತ್ರ, ಷಡ್ಯಂತ್ರಕ್ಕೆ ತಡೆ ಕೊಟ್ಟಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ (BY Vijayendra) ತಿಳಿಸಿದ್ದಾರೆ. ಮಾಧ್ಯಮಗಳ ಜತೆ ಮಂಗಳವಾರ ಮಾತನಾಡಿದ ಅವರು, ಮತ್ತೊಂದು ಕಡೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು (State Congress Government) ರಾಜ್ಯದಲ್ಲಿ ರೈತರಿಗೆ ಪರಿಹಾರ ಕೊಟ್ಟಿಲ್ಲ. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಪರಿಹಾರ ಕೊಡಿ ಎಂದರೆ ಕೇಂದ್ರ ಸರ್ಕಾರದ ಕಡೆ ಬೆಟ್ಟು ಮಾಡಿ ಕೂತಿದ್ದಾರೆಯೇ ವಿನಾಃ ರಾಜ್ಯ ಸರ್ಕಾರದಿಂದ ಈ ನಾಡಿನ ರೈತರಿಗೆ ಪರಿಹಾರ, ಅನುಕೂಲ ಸಿಗುತ್ತಿಲ್ಲ ಎಂದು ಟೀಕಿಸಿದರು.
ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳಿಗೆ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಗದೇ ಇದ್ದರೆ, ಈ ಸರ್ಕಾರ ರೈತರ ಪಾಲಿಗೆ ಬದುಕಿದ್ದೂ ಸತ್ತಂತೆ ಎಂದು ಆರೋಪಿಸಿದ ಅವರು, ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ; ಶಾಸಕರು ಪರದಾಡುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರು, ಸಚಿವರು ನವೆಂಬರ್ ಕ್ರಾಂತಿಯ ಹೇಳಿಕೆ ಕೊಡುತ್ತಿದ್ದಾರೆ ಎಂದು ದೂರಿದರು.
ರೈತರ ಸಮಸ್ಯೆಗೆ ಪರಿಹಾರ ಕೊಡಿ ಎಂದರೆ ಇವತ್ತು ಸಿಎಂ ಬದಲಾವಣೆ ಚರ್ಚೆ ನಡೆದಿದೆ. ಕಾಂಗ್ರೆಸ್ ಸರ್ಕಾರದ ಕಚ್ಚಾಟದಿಂದ ರಾಜ್ಯದ ಜನತೆ ಸರ್ಕಾರದ ಮೇಲಿನ ವಿಶ್ವಾಸ ಕಳಕೊಂಡಿದ್ದಾರೆ. ನಾನೇ 5 ವರ್ಷ ಸಿಎಂ ಎಂದು ಮುಖ್ಯಮಂತ್ರಿಗಳು ಹೇಳುವ ಪರಿಸ್ಥಿತಿ ಬಂದು ತಲುಪಿದೆ ಎಂದರೆ, ಆಡಳಿತ ಪಕ್ಷದಲ್ಲಿ ಮುಖ್ಯಮಂತ್ರಿಗಳ ಬಗ್ಗೆ ವಿಶ್ವಾಸ ಹೊರಟುಹೋಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಟೀಕಿಸಿದರು. ಹೇಳಿಕೆಗಳನ್ನು ನಿಲ್ಲಿಸದೇ ಹೋದರೆ ಇದರ ಪರಿಣಾಮ ಆಡಳಿತದ ಮೇಲೆ ಬೀಳಲಿದೆ ಎಂದು ಗೃಹ ಸಚಿವ ಪರಮೇಶ್ವರ್ ಒಪ್ಪಿಕೊಂಡಿದ್ದಾರೆ. ರಾಜ್ಯದ ಜನರಿಗೆ ಸಿಎಂ ಯಾರಾಗುತ್ತಾರೆ? ಬದಲಾಗುತ್ತಾರಾ ಎಂಬ ಬಗ್ಗೆ ಆಸಕ್ತಿ ಇಲ್ಲ. ಜನರು ಈ ಸರ್ಕಾರದ ಬಗ್ಗೆ ಸಂಪೂರ್ಣ ವಿಶ್ವಾಸ ಕಳಕೊಂಡಿದ್ದಾರೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಭಾರತದ ಪವನ ಶಕ್ತಿಗೆ ಕರ್ನಾಟಕ ಸೇರಿ 3 ರಾಜ್ಯಗಳ ಮಹತ್ವದ ಕೊಡುಗೆ: ಜೋಶಿ ಮೆಚ್ಚುಗೆ
ಇವರ ಒಳಜಗಳದಿಂದ ಕೆಪಿಸಿಸಿಗೆ ಬೀಗ ಹಾಕುವುದು ಇರಲಿ, ರಾಜ್ಯದ ಖಜಾನೆಗೆ ಬೀಗ ಹಾಕಿ ಕೂತಿದ್ದಾರೆ ಎಂದು ಹೇಳಿದ ಅವರು, ಸರ್ಕಾರಿ ನೌಕರರಿಗೆ ವೇತನ ಸಿಗುತ್ತಿಲ್ಲ. ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಆರೋಪಿಸಿದರು.