ಶಿವಮೊಗ್ಗ: ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ರಸ್ತೆ ಪಕ್ಕದ ಗುಡ್ಡಕ್ಕೆ ಖಾಸಗಿ ಬಸ್ ಡಿಕ್ಕಿಯಾಗಿ ಮಗು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ನಿದ್ದೆಯ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ದುರ್ಘಟನೆ ನಡೆದಿದೆ. ಗಂಭೀರ ಗಾಯಗೊಂಡವರಲ್ಲಿ ಶರೀಫಾಬಿ (57), ಇಮಾಮ್ ಸಾಬ್ (73), ಸಫಾನ (28) ಎಂಬುವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾವಣಗೆರೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ದುರ್ಗಾಂಬ ಬಸ್ ಅಪಘಾತಕ್ಕೀಡಾಗಿದ್ದು, ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆ ನಡೆಯುತ್ತಿದ್ದಂತೆ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿದ್ದಾರೆ. ಮಂಗಳವಾರ ಮುಂಜಾನೆ ಪೊಲೀಸ್ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಲಾರಿ ಪಲ್ಟಿಯಾಗಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿ ಸಾವು
ಬೆಳಗಾವಿ: ಸಿಮೆಂಟ್ ತುಂಬಿದ ಲಾರಿ ಪಲ್ಟಿಯಾಗಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾಲಶಿರಗೂರು ಬಳಿ ನಡೆದಿದೆ. 5ನೇ ತರಗತಿಯ ವಿದ್ಯಾರ್ಥಿ ಅಮಿತ್ ಕಾಂಬಳೆ (11) ಮೃತ ಬಾಲಕ ಎಂದು ತಿಳಿದುಬಂದಿದೆ.
ಮಸಾಜ್ ಪಾರ್ಲರ್ ಕೆಲಸ ಬಿಡಲ್ಲ ಎಂದಿದ್ದಕ್ಕೆ ಪತ್ನಿಯ ಕತ್ತು ಸೀಳಿ ಕೊಲೆಗೈದ 3ನೇ ಗಂಡ!
ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅಂಜಲಿ ಕಾಂಬಳೆ (15) ಅವಿನಾಶ್ ಕಾಂಬಳೆ (14) ಸ್ಥಿತಿ ಗಂಭೀರವಾಗಿದೆ. ಹಾರೂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಡಚಿಯಿಂದ ಹಾರೂಗೇರಿ ಕಡೆಗೆ ಸಿಮೆಂಟ್ ಲಾರಿ ತೆರಳುತ್ತಿದ್ದಾಗ ತಿರುವಿನಲ್ಲಿ ಲಾರಿ ಪಲ್ಟಿಯಾಗಿದೆ. ಈ ವೇಳೆ ಲಾರಿಯ ಅಡಿ ಸಿಲುಕಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾರಿ ಪಲ್ಟಿಯಾಗಿ ದುರಂತ ನಡೆದಿದೆ. ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.