ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಮಚಂದ್ರಾಪುರ ಮಠಕ್ಕೆ ಶಿಷ್ಯರೇ ಸಂಪತ್ತು; ಪ್ರಧಾನ ಮಠದ ಪುನರ್ನಿರ್ಮಾಣ ಸಹಸ್ರಮಾನದ ಕಾರ್ಯ: ರಾಘವೇಶ್ವರ ಶ್ರೀ

ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಶರಾವತಿ ತೀರದಲ್ಲಿ ಪ್ರಧಾನಮಠ ಪುನ ನಿರ್ಮಾಣ ಸಮಿತಿಯವರು ಏರ್ಪಡಿಸಿದ್ದ ನವ ನಿರ್ಮಾಣದ ರಾಮಸಾನ್ನಿಧ್ಯದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಶಿಲಾನ್ಯಾಸ ನೆರವೇರಿಸಿದರು.

ಶ್ರೀ ರಾಮಚಂದ್ರಾಪುರ ಮಠದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಿವಮೊಗ್ಗ, ಫೆ.27: ಶ್ರೀ ರಾಮಚಂದ್ರಾಪುರ ಮಠಕ್ಕೆ ಶಿಷ್ಯರೇ ಸಂಪತ್ತಾಗಿದ್ದು, ಪ್ರಧಾನ ಮಠದ ಶಿಲಾನ್ಯಾಸದ ಮೂಲಕ ಶರಾವತಿ ನದಿ ತೀರದಲ್ಲಿ ಸಹಸ್ರಮಾನದ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Sri Raghaveshwara Bharati swamiji) ಹೇಳಿದರು. ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶರಾವತಿ ತೀರದಲ್ಲಿ ಪ್ರಧಾನಮಠ ಪುನ ನಿರ್ಮಾಣ ಸಮಿತಿಯವರು ಏರ್ಪಡಿಸಿದ್ದ ನವ ನಿರ್ಮಾಣದ ರಾಮಸಾನ್ನಿಧ್ಯದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿ, ಧರ್ಮಸಭೆಯ ದಿವ್ಯಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ರಾಮಚಂದ್ರಾಪುರಮಠದ ಕುರಿತು ಹೊರ ಜಗತ್ತಿನಲ್ಲಿ ಇರುವ ಕಲ್ಪನೆಯೇ ಬೇರೆ. ಅದು ಹಣವಿರುವ ಅತ್ಯಂತ ಸಂಪದ್ಬರಿತ ಮಠ, ಇಲ್ಲಿ ಹಣದ ಕೊಪ್ಪರಿಗೆಯೇ ಇದೆ ಎಂದು ಹಲವಾರು ಭಾವಿಸಿದ್ದಾರೆ. ಆದರೆ ನಿಜವಾಗಿಯೂ ನಮ್ಮಲ್ಲಿ ಹಣದ ಕೊಪ್ಪರಿಗೆ ಇಲ್ಲ. ಎಲ್ಲ ಯೋಜನೆಗಳು ಶೂನ್ಯದಿಂದಲೇ ಆರಂಭಗೊಳ್ಳುತ್ತದೆ. ಆದರೆ ನಮಗೆ ಶಿಷ್ಯರೇ ಸಂಪತ್ತಾಗಿದ್ದು, ನಮ್ಮ ಶಿಷ್ಯರು ಗುರುವಿನ ಯಾವ ಆದೇಶವನ್ನು ಮೀರಿ ನಡೆದವರಲ್ಲ. ಸಂಕಷ್ಟವಿದ್ದಾಗಲೂ ಸಂಭ್ರಮವಿರುವಾಗಲೂ ಮಠದೊಂದಿಗೆ ಅವರ ಭಾವನಾತ್ಮಕವಾದ ಸಂಬಂಧವಿದೆ, ಹಾಗಾಗಿಯೇ ಗುರುಗಳು ಎಂತಹ ಯೋಜನೆಗಳನ್ನು ಮುಂದಿಟ್ಟರೂ ನಮ್ಮ ಮಠ ಎಂಬ ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂದರು.‌

Ramchandrapura Math

ಗೋಕರ್ಣದಲ್ಲಿ ಶಂಕರಾಚಾರ್ಯರು ಸಂಸ್ಥಾಪಿಸಿದ ಮಠವನ್ನು ಹೊಸನಗರದ ರಾಮಚಂದ್ರಾಪುರ ಮಠ ಶತಮಾನಗಳ ಮೊದಲು ತನ್ನತ್ತ ಎಳೆದುಕೊಂಡಿದೆ. ರಾಮನ ಬಾಣದಿಂದ ಹೊರಹೊಮ್ಮಿದ ಶರಾವತಿ ನದಿಯ ತೀರದಲ್ಲಿ ನಮ್ಮ ಪ್ರಧಾನ ಮಠ ನೆಲನಿಂತಿರುವುದು ವಿಶೇಷವಾಗಿದೆ. ಈ ಪುಣ್ಯ ನೆಲಕ್ಕೆ ವಿಶೇಷ ಮಹತ್ವವಿದೆ. ಹಾಗಾಗಿ ಸುಮ್ಮನೆ ಕಟ್ಟುವ ಕಟ್ಟಡವೂ ಗಟ್ಟಿಯಾಗುವುದು ಇಲ್ಲಿಯ ವಾಡಿಕೆ ಎಂದ ಅವರು ಇಂದಿನ ಶಿಲಾನ್ಯಾಸ ಸಹಸ್ರಮಾನದ ಇತಿಹಾಸಕ್ಕೆ ನಾಂದಿಯಾಗಲಿದೆ ಎಂದರು.

ಈಗಿರುವ ಮಠವನ್ನು ಗಮನಿಸಿದರೆ ಹಿಂದೆ ಯಾವುದೋ ಆಪತ್ಕಾಲದಲ್ಲಿ ಅದನ್ನು ನಿರ್ಮಿಸಿದಂತಿದೆ. ಅದನ್ನು ಸರಿಪಡಿಸುವ ಕಾರ್ಯಕ್ಕೆ ಇದೀಗ ಚಾಲನೆ ದೊರಕಿದ್ದು, ಅಯೋಧ್ಯೆಯ ಪುಣ್ಯ ಮಣ್ಣನ್ನು ಇಲ್ಲಿ ಶಿಲಾನ್ಯಾಸದ ಸಂದರ್ಭದಲ್ಲಿ ನಿಕ್ಷೇಪ ಮಾಡಲಾಗಿದೆ ಎಂದರು. ಪ್ರಧಾನ ಮಠದ ಪುನರ್ನಿರ್ಮಾಣಕ್ಕೆ 1008 ದಿನಗಳ ಗುರಿಯನ್ನು ನೀಡಲಾಗಿದ್ದು, ಆನಂತರ 8 ದಿನಗಳ ವೈಭವದ ಕಾರ್ಯಕ್ರಮದ ಮೂಲಕ ಪ್ರಧಾನ ಮಠದ ಲೋಕಾರ್ಪಣೆ ನೆರವೇರಲಿದೆ. ಇದು ಈ ಹಿಂದೆ ಇಲ್ಲಿ ನಡೆದ ರಾಮಾಯಣ ಮಹಾಸತ್ರ ಹಾಗೂ ವಿಶ್ವ ಗೋಸಮ್ಮೇಳನದ ವೈಭವವನ್ನು ನೆನಪಿಸುವಂತಿರಲಿದೆ ಎಂದು ತಿಳಿಸಿದರು.

Ramchandrapura Matha

ಮಾಜಿ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ನಮ್ಮ ಜೀವನದಲ್ಲಿ ನಿಜವಾದ ಪವಾಡಗಳನ್ನು ನೋಡುವಂತೆ ಮಾಡಿದ ಸ್ಥಳ ರಾಮಚಂದ್ರಾಪುರ ಮಠ ಹಾಗೂ ಇಲ್ಲಿನ ಗುರುಗಳು ಎಂದರು.

ಸಾಗರ ಹಾಗೂ ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಗೋಸಂರರಕ್ಷಣೆಯಿಂದಲೇ ಹೆಸರು ಪಡೆದಿರುವ ನಮ್ಮ ಮಠ ಅಭಿವೃದ್ದಿಯಾಗಬೇಕು ಎನ್ನುವುದು ನಮ್ಮ ಕನಸು ಮನಸ್ಸು ಎಲ್ಲವೂ ಹೌದು. ಆ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಹಕಾರಕ್ಕೆ ನಾನು ಬದ್ದನಿದ್ದೇನೆ ಎಂದರು.

ಮಲೆನಾಡ ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ 2007-08ರಲ್ಲಿ ಶ್ರೀಮಠದಲ್ಲಿ ನಡೆದಿದ್ದ, ದೇಶ-ವಿದೇಶಗಳ ಲಕ್ಷಾಂತರ ಜನರು ಬಂದಿದ್ದ ರಾಮಾಯಣ ಮಹಾಸತ್ರ ಹಾಗೂ ವಿಶ್ವ ಗೋಸಮ್ಮೇಳನದ ನೆನಪನ್ನು ಹಂಚಿಕೊಂಡರು.

ಶಿಮುಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ ಮಾತನಾಡಿ, ಈ ಮಹಾನ್ ಕಾರ್ಯಕ್ಕೆ ತಮ್ಮ ಬೆಂಬಲವನ್ನು ತಿಳಿಸಿದರು. ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಪ್ರಧಾನಮಠದ ಪುನ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಪ್ರಭಾಕರ್‍ರಾವ್ ಕಾರಣಗಿರಿ, ಸಮಿತಿಯ ಕಾರ್ಯಾಧ್ಯಕ್ಷ ಗಣಪತಿ ಭಟ್ ಜಟ್ಟಿಮನೆ, ಶಾಸನ ತಂತ್ರದ ಅಧ್ಯಕ್ಷ ಮೋಹನಭಾಸ್ಕರ ಹೆಗಡೆ ಹಾಗೂ ಇತರರು ಉಪಸ್ಥಿತರಿದ್ದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಶಿಷ್ಯ - ಭಕ್ತರು ಕಾರ್ಯಕ್ರಮಗಳಿಗೆ ಸಾಕ್ಷಿಯಾದರು.

ಯಾರೋ ಕೆಲವೇ ಜನರಿಂದಲ್ಲ, ಸಮಾಜದಿಂದ ಮಠ ನಡೆಸಬೇಕು: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

ಇದಕ್ಕೂ ಮುನ್ನ ಬೆಳಗ್ಗೆ 9 ಗಂಟೆಗೆ ಶಿಲಾನ್ಯಾಸದ ಶಿಲೆಯ ಮೆರವಣಿಗೆ, ಗುರುನಿವಾಸ ನಿರ್ಮಾಣದ ಸ್ಥಳದಲ್ಲಿ ಶ್ರೀಗುರುಪಾದುಕಾ ಸ್ತೋತ್ರ ಸಮರ್ಪಣೆ, ಶ್ರೀರಾಮತಾರಕ ಜಪ, ಸಹಸ್ರಾಧಿಕ ಕುಂಕುಮಾರ್ಚನೆ, ಶತಾಧಿಕ ರುದ್ರಪಠಣಪೂರ್ವಕ ಅಭಿಷೇಕ, ಶಾರದಾಷ್ಟಕ ಪಠಣ, ಹಾಗೂ ವಿಶೇಷವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು, ಸಾಗರ, ಕಾಸರಗೋಡು ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಶಿಷ್ಯರಿಂದ ಮುಷ್ಟದ್ರವ್ಯ ಸಮರ್ಪಣೆ ನಡೆಯಿತು.