ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯಾರೋ ಕೆಲವೇ ಜನರಿಂದಲ್ಲ, ಸಮಾಜದಿಂದ ಮಠ ನಡೆಸಬೇಕು: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

Ramachandrapura Mutt: ಬೆಂಗಳೂರಿನ ಗಿರಿನಗರದಲ್ಲಿದ ಶ್ರೀರಾಮಚಂದ್ರಾಪುರ ಮಠದ ಶಾಖಾ ಮಠದಲ್ಲಿ ಭಾನುವಾರ 'ಶಾಸನತಂತ್ರ ಅಧಿವೇಶನ' ನೆರವೇರಿತು. ಚಕ್ರವರ್ತಿ ಸೂಲಿಬೆಲೆ, ಡಾ. ಸನತ್ ಕುಮಾರ್, ಪಳ್ಳತ್ತಡ್ಕ ಶಂಕರನಾರಾಯಣ ಘನಪಾಠಿಗಳು ಹಾಗೂ ನಾಡಿನ ವಿವಿಧ ಭಾಗಗಳ ಪದಾಧಿಕಾರಿಗಳ ಉಪಸ್ಥಿತರಿದ್ದರು.

ಕೆಲವೇ ಜನರಿಂದ ಮಠ ನಡೆಯುವಂತೆ ಆಗಬಾರದು: ರಾಘವೇಶ್ವರ ಭಾರತೀ ಶ್ರೀ

ಶ್ರೀರಾಮಚಂದ್ರಾಪುರ ಮಠದ ಶಾಸನತಂತ್ರ ಅಧಿವೇಶನದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ಚಕ್ರವರ್ತಿ ಸೂಲಿಬೆಲೆ. -

Prabhakara R
Prabhakara R Jan 4, 2026 9:59 PM

ಬೆಂಗಳೂರು: ನಮ್ಮನ್ನು ನಾವು ತಿಳಿದುಕೊಂಡಾಗ ಹಾಗೂ ನಮ್ಮೊಳಗೆ ನಾವೇ ಮಾತಾಡಿಕೊಂಡಾಗ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀಮಠದ ಶಾಖಾ ಮಠದಲ್ಲಿ ನಡೆದ 'ಶಾಸನತಂತ್ರ ಅಧಿವೇಶನ'ದಲ್ಲಿ ಸಾನ್ನಿಧ್ಯವಹಿಸಿ ಶ್ರೀಗಳು ಮಾತನಾಡಿದರು.

ಹಿಂದೆ ಮಠದ ವ್ಯವಸ್ಥೆಯಲ್ಲಿ ವ್ಯಕ್ತಿಗಳಿಗೆ ಜವಾಬ್ದಾರಿಯನ್ನು ನೀಡಲಾಗುತ್ತಿತ್ತು. ನಮ್ಮ ಕಾಲದಲ್ಲಿ ಅದಕ್ಕೆ ವ್ಯವಸ್ಥೆಯ ರೂಪವನ್ನು ನೀಡಿ, ಸಮಷ್ಟಿಗೆ ಅಥವಾ ಸಮಿತಿಗೆ ಜವಾಬ್ದಾರಿಯನ್ನು ಹಂಚಲಾಗಿದೆ. ಯಾರೋ ಕೆಲವೇ ಕೆಲವು ಜನರಿಂದ ಮಠ ನಡೆಯುವಂತೆ ಆಗಬಾರದು. ಸಮಾಜ ಮಠವನ್ನು ನಡೆಸಬೇಕು ಎಂಬುದು ನಮ್ಮ ಅಭಿಲಾಷೆ. ಈ ಹಿನ್ನೆಲೆಯಲ್ಲಿ ಬಹುತೇಕ ಸಮಾಜದ ಎಲ್ಲರಿಗೂ ಮಠದ ವಿವಿಧ ಜವಾಬ್ದಾರಿಗಳನ್ನು ಹಂಚಲಾಗಿದೆ ಎಂದರು.

ಮಠದಲ್ಲಿ ಪದಾಧಿಕಾರಿಗಳು ಎಂಬ ಜವಾಬ್ದಾರಿಯನ್ನು ನೀಡಿದರೂ, ಇದು ಅಧಿಕಾರದ ಗದ್ದುಗೆಯಲ್ಲ. ಅಲ್ಲಿ ಕರ್ತವ್ಯದ ಹೊಣೆಗಾರಿಕೆ ಮಾತ್ರವಿದೆ. ಇದನ್ನು ಕಾರ್ಯಕರ್ತರು ಮನಗಾಣಬೇಕು ಎಂಬ ಕಿವಿಮಾತನ್ನು ಹೇಳಿದ ಶ್ರೀಗಳು, ಶ್ರೀಮಠದಲ್ಲಿ ಗುರು ಶಿಷ್ಯರ ಮಧ್ಯೆ ತಂದೆ ಹಾಗೂ ಮಕ್ಕಳ ಸಂಬಂಧವಿದ್ದು, ಇಲ್ಲಿ ಕಾರ್ಯಕರ್ತರು ಅವರಿಗೆ ಸಿಕ್ಕಿದ ಪ್ರೀತಿಯನ್ನು ಇತರ ಕಾರ್ಯಕರ್ತರಿಗೆ ಹಂಚಿದಾಗ ಸಂಘಟನೆ ಬೆಳೆಯಲು ಸಾಧ್ಯ ಎಂದರು.

ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಕೊಟ್ಟ ಕೊನೆಯ ಕಾರ್ಯಕರ್ತನವರೆಗೂ ಗರಿಷ್ಠವಾದ ಬಾಂಧವ್ಯವನ್ನು ಇಟ್ಟುಕೊಂಡಾಗ ಸಮರ್ಥ ಸಂಘಟನೆ ಸಾಧ್ಯ. ರಾಘವೇಶ್ವರ ಶ್ರೀಗಳ ಪ್ರೀತಿಯ ಭಾವ ರಾಮಚಂದ್ರಾಪುರ ಮಠದ ಸಂಘಟನೆಯನ್ನು ಘಟ್ಟಿಗೊಳಿಸಿದೆ ಹಾಗೂ ರಾಮಚಂದ್ರಾಪುರ ಮಠದ ಸಂಘಟನೆಯನ್ನು ಮಾದರಿಯಾಗಿಸಿದೆ ಎಂದರು.

Dharma Bharati

ಸೇವೆಯ ಹಿಂದಿರುವ ತತ್ತ್ವಶಾಸ್ತ್ರ ಅನುಪಮವಾಗಿದ್ದು, ಅದು ಅರ್ಥವಾದಾಗ ಸೇವೆಯಿಂದಲೇ ಮುಕ್ತಿ ಸಾಧ್ಯ. ಇದೇ ಭಗವಂತ ಹೇಳಿದ ಕರ್ಮಯೋಗವಾಗಿದೆ. ಸೇವೆ ಹಾಗೂ ತ್ಯಾಗಗಳಿಂದ ಹೊಸ ಭಾರತವನ್ನು ಕಟ್ಟಲು ಸಾಧ್ಯ. ವ್ಯಕ್ತಿಯೊಬ್ಬ ಸಂಘಟನೆಯ ಭಾಗವಾಗದೇ ಇದ್ದರೆ ಅದು ಆ ವ್ಯಕ್ತಿಗೆ ನಷ್ಟವಾಗುತ್ತದೆ ವಿನಃ, ಸಂಘಟನೆಗೆ ನಷ್ಟವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಹಿರಿಯ ವಿದ್ವಾಂಸ ಡಾ. ಎಂ.ಎಸ್. ಸನತ್ ಕುಮಾರ್ ಸೋಮಯಾಜಿ ಮಾತನಾಡಿ, ಕಾರ್ಯಕರ್ತರಾಗಿ ಸೇವೆ ಮಾಡುವಾಗ ನಾನೇನು ಮಾಡಿದೆ ಎಂಬುದಷ್ಟೇ ಮುಖ್ಯವಾಗಬೇಕು ಹೊರತು, ನನಗೇನು ಸಿಕ್ಕಿತು ಎಂಬ ಪ್ರಶ್ನೆ ಬರಬಾರದು. ಎನಗಿಂತ ಕಿರಿಯರಿಲ್ಲ ಎಂಬ ಭಾವ ಪ್ರತಿಯೊಬ್ಬ ಕಾರ್ಯಕರ್ತನಲ್ಲಿ ಇದ್ದಾಗ ಬಲಿಷ್ಠ ಸಂಘಟನೆ ಸಾಧ್ಯ ಎಂದರು.

ಇಂದಿನ ಮಕ್ಕಳ ಸಂಸ್ಕಾರದ ಕುರಿತಾಗಿ ಹಲವಾರು ಮಾತುಗಳು ಕೇಳಿಬರುತ್ತಿವೆ. ಆದರೆ ಮದುವೆಯಿಂದ ಆರಂಭಿಸಿ, ಗರ್ಭಸಂಸ್ಕಾರ, ಪುಂಸವನ ಮುಂತಾದ ಸೂಕ್ಷ್ಮ ಸಂಸ್ಕಾರಗಳನ್ನು ನಾವು ಬಿಡುತ್ತಿದ್ದೇವೆ. ಸರಿಯಾದ ಸಂಸ್ಕಾರ ಕ್ರಮಗಳಿಂದ ಮಾತ್ರ ಉತ್ತಮ ಸಂತಾನವನ್ನು ಪಡೆಯಲು ಸಾಧ್ಯ. ವೇದೋಕ್ತವಾದ ಎಂಟು ವರ್ಷಕ್ಕೆ ಮಾಡಬೇಕಾದ ವಿವಾಹದ ಕುರಿತಾಗಿ ಅನೇಕ ಆಕ್ಷೇಪಣೆಗಳಿದೆ. ಆದರೆ ಇಂದು ಇಪ್ಪತ್ತೈದು - ಮೂವತ್ತು ವರ್ಷಗಳ ನಂತರ ಮಾಡುತ್ತಿರುವ ವಿವಾಹದಲ್ಲಿ ಲೋಪಗಳಿಲ್ಲವೇ? ಹಿಂದೆ ಎಂಟು ವರ್ಷಕ್ಕೆ ವಿವಾಹ ಮಾಡಿದರೂ, ಪ್ರಾಪ್ತ ವಯಸ್ಕರಾಗುವವರೆಗೂ ತಂದೆಯ ಮನೆಯಲ್ಲಿಯೇ ವಿದ್ಯಾಭ್ಯಾಸವನ್ನು ಹೆಣ್ಣುಮಕ್ಕಳಿಗೆ ನೀಡಲಾಗುತ್ತಿತ್ತು. ಇಂದಿನ ಕಾನೂನಿನ ಪ್ರಕಾರ 18 ವರ್ಷಕ್ಕೆ ಹೆಣ್ಣುಮಕ್ಕಳಿಗೆ ವಿವಾಹ ಮಾಡಬಹುದು. ಸರಿಯಾದ ಸಮಯದಲ್ಲಿ ವಿವಾಹವನ್ನು ಮಾಡುವ ಮೂಲಕ ಉತ್ತಮ ಪ್ರಜೆಗಳನ್ನು ದೇಶಕ್ಕೆ ಕೊಡುವ ಕಾರ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.

Shasanatantra Adhiveshana

ಘನಪಾಠಿ ಶಂಕರನಾರಾಯಣ ಭಟ್ಟ ಪಳ್ಳತ್ತಡ್ಕ ಜ್ಯೋತಿ ಬೆಳಗಿ ಮಾತನಾಡಿ, ಮನುಷ್ಯ ಜನ್ಮ ಶ್ರೇಷ್ಠವಾಗಿದ್ದು, ಜ್ಞಾನ ಎಂಬುದು ಮನುಷ್ಯರಿಗಿರುವ ಹೆಚ್ಚುಗಾರಿಕೆಯಾಗಿದೆ. ಸನಾತನ ಧರ್ಮದಲ್ಲಿ ಅನೇಕ ನಿತ್ಯ ನೈಮಿತ್ತಿಕ ಕರ್ಮಗಳನ್ನು ಹೇಳಲಾಗಿದೆ. ಅವುಗಳು ಇಂದು ಒಂದೊಂದಾಗಿಯೇ ನಷ್ಟವಾಗುತ್ತಿದೆ. ಅವುಗಳನ್ನು ಉಳಿಸಿಕೊಳ್ಳಬೇಕಾದ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದರು.

ವಿದ್ವಾನ್ ಜಗದೀಶ ಶರ್ಮಾ ಸಂಪ ಮಾತನಾಡಿ, ಶಂಕರ ಸಿದ್ಧಾಂತ ಇರುವುದು ಮನಸ್ಸಿಗಾಗಿ. ಹೃದಯದ ಶುದ್ಧಿಗಾಗಿ. ಶಂಕರ ಸಿದ್ಧಾಂತ ಹೃದಯದ ವಿಸ್ತಾರವನ್ನು ಬೋಧಿಸುತ್ತದೆ. ಆ ತತ್ತ್ವವನ್ನು ಅಳವಡಿಸಿಕೊಂಡಾಗ ಮನೆಗೆ ಹಾಗೂ ಜಗತ್ತಿಗೆ ಶ್ರೇಯಸ್ಸು ಎಂದು ಅಭಿಪ್ರಾಯಪಟ್ಟರು.

ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ ಮಾತನಾಡಿ, ಶ್ರೀಮಠದ ಶಾಸನತಂತ್ರ ವ್ಯವಸ್ಥೆಯು ಶಿಸ್ತು , ಪಾರದರ್ಶಕತೆ, ಸಮರ್ಥ ಆಡಳಿತ ಪ್ರತೀಕವಾಗಿದ್ದು, ಇಲ್ಲಿಯ ಪದಾಧಿಕಾರ ಅಧಿಕಾರವಲ್ಲ, ಅದು ಸೇವೆಯ ಅವಕಾಶ ಎಂದರು.

ಇದೇ ಸಂದರ್ಭದಲ್ಲಿ ಶ್ರೀಮಠದ ಧಾರ್ಮಿಕ ಮಾಸಪತ್ರಿಕೆ ಧರ್ಮಭಾರತಿಯ ಅಂತರ್ಜಾಲ ಆವೃತ್ತಿಯನ್ನು (https://sribharatiprakashana.org/subscribe/) ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್‌ ಹಾಗೂ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಲೋಕಾರ್ಪಣೆ ಮಾಡಿದರು.

ಶ್ರೀಮಠದ ಸಮ್ಮುಖಸರ್ವಾಧಿಕಾರಿ ತಿಮ್ಮಪ್ಪಯ್ಯ ಮಡಿಯಾಳ್ (ನಿವೃತ್ತ IPS) ಶ್ರೀಮಠದ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸನತಂತ್ರದ ಅಧ್ಯಕ್ಷರಾದ ಮೋಹನ ಭಾಸ್ಕರ ಹೆಗಡೆ ಸಮಾರೋಪದ ನುಡಿಗಳನ್ನಾಡಿ, ಅಧಿವೇಶನದ ನಿರ್ಣಯಗಳನ್ನು ಮಂಡಿಸಿದರು. ಶಾಸನತಂತ್ರದ ಕಾರ್ಯದರ್ಶಿ ಕೃಷ್ಣಪ್ರಸಾದ್ ಎಡಪ್ಪಾಡಿ ಪ್ರಸ್ತಾವಿಕ ಮಾತನಾಡಿದರು.

ʼಕುರುಕ್ಷೇತ್ರʼವಾಗಿದ್ದ ನವ ವೃಂದಾವನ ಇನ್ನು ʼಧರ್ಮಕ್ಷೇತ್ರʼ

ಪ್ರದೀಪ್ ಬಡೆಕ್ಕಿಲ ಹಾಗೂ ಪ್ರಮೋದ್ ಮೋಹನ್ ಹೆಗಡೆ, ಶ್ರೀಗಳ ಜತೆ ಹಾಗೂ 14 ಖಂಡಗಳ ಶ್ರೀಸಂಯೋಜಕರ ಜತೆಗೆ ಸಂವಾದವನ್ನು ನಡೆಸಿಕೊಟ್ಟರು. ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳ ಪದಾಧಿಕಾರಿಗಳು ಉಪಸ್ಥಿತಿಯರಿದ್ದು ಚಿಂತನ ಮಂಥನದಲ್ಲಿ ಭಾಗಿಗಳಾದರು.