ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಲೆನಾಡಿನ ಅಡಿಕೆ ಬೆಳೆಗಾರರ ಸಂಕಷ್ಟದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ ಬಿ.ವೈ.ರಾಘವೇಂದ್ರ

Parliament Winter Session 2025: ಅಡಿಕೆಗೆ ಹಳದಿ ಎಲೆ ರೋಗ ಹಾಗೂ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ತಕ್ಷಣದ ಕ್ರಮ ಕೈಗೊಳ್ಳುವಂತೆ ಹಾಗೂ ಅಡಿಕೆ ಬೆಳೆ ನಷ್ಟಕ್ಕೆ ವಿಶೇಷ ಪರಿಹಾರ ಪ್ಯಾಕೇಜ್‌ ನೀಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರವನ್ನು ನಾನು ಮನವಿ ಮಾಡಿದ್ದೇನೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಸಂಸದ ಬಿ.ವೈ.ರಾಘವೇಂದ್ರ

ನವದೆಹಲಿ, ಡಿ.4: ಮಲೆನಾಡಿನ ಅಡಿಕೆ ಬೆಳೆಗಾರರ ಸಂಕಷ್ಟ ಪರಿಹರಿಸಲು ಕೇಂದ್ರ ಸರ್ಕಾರ ತಕ್ಷಣದ ಹಸ್ತಕ್ಷೇಪ ಮಾಡಬೇಕು ಎಂದು ಸಂಸತ್‌ ಚಳಿಗಾಲದ ಅಧಿವೇಶನದಲ್ಲಿ (Parliament Winter Session 2025) ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ. ಇಂದು ಸಂಸತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಮಲೆನಾಡು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಡಿಕೆ ರೈತರು ಎದುರಿಸುತ್ತಿರುವ ಗಂಭೀರ ಸಂಕಷ್ಟವನ್ನು ನಾನು ಪ್ರಸ್ತಾಪಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ (BY Raghavendra) ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಹಳದಿ ಎಲೆ ರೋಗ (YLD) ಹಾಗೂ ಎಲೆ ಚುಕ್ಕೆ ರೋಗ (LSD) ಎಂಬ ಭೀಕರ ರೋಗಗಳು, ಜತೆಗೆ ಸತತವಾಗಿ ನಾಲ್ಕು ತಿಂಗಳು ಸುರಿದ ಭಾರೀ ಮಳೆಯಿಂದಾಗಿ ಅಡಿಕೆ ತೋಟಗಳಲ್ಲಿ ಭಾರೀ ನಷ್ಟವಾಗಿದೆ. ಪರಿಣಾಮವಾಗಿ, ಅನೇಕ ರೈತರು ಈ ವರ್ಷ ನಿರೀಕ್ಷಿಸಿದ್ದ ಫಸಲಿನ ಕೇವಲ ನಾಲ್ಕನೇ ಭಾಗವಷ್ಟೇ ದೊರೆಯುವ ಸ್ಥಿತಿ ಎದುರಿಸುತ್ತಿದ್ದಾರೆ.

ಇದೇ ವೇಳೆ, ಬೆಳೆ ವಿಮೆ ಯೋಜನೆಯಾದ WBCIS ಅನುಷ್ಠಾನದಲ್ಲಿ ಕಂಡುಬರುವ ಗಂಭೀರ ತೊಂದರೆಗಳನ್ನು ಸಹ ನಾನು ಉಲ್ಲೇಖಿಸಿದೆ. ಅನೇಕ ಮಳೆಮಾಪನ ಕೇಂದ್ರಗಳು ಕಾರ್ಯನಿರ್ವಹಿಸದೇ ಇರುವುದು, ಮೂರು ವರ್ಷಕ್ಕೊಮ್ಮೆ ಮಾತ್ರ ಪರಿಷ್ಕಾರಗೊಳ್ಳುವ ತಾಂತ್ರಿಕ ಮಾನದಂಡಗಳು, ಮತ್ತು 20 ರಿಂದ 45 ಕಿಮೀ ದೂರದಲ್ಲಿರುವ ಬ್ಯಾಕಪ್ ಮಳೆಮಾಪನ ಕೇಂದ್ರಗಳ ತಡವಾದ ಅಧಿಸೂಚನೆ–ಇವುಗಳ ಪರಿಣಾಮವಾಗಿ ಹಲವಾರು ಅರ್ಹ ರೈತರು ಯೋಗ್ಯ ಪರಿಹಾರವನ್ನೇ ಪಡೆಯದ ಸ್ಥಿತಿ ಉಂಟಾಗಿದೆ.

ಅಡಿಕೆ ಎಲೆ ಚುಕ್ಕಿ ರೋಗ ಕೋವಿಡ್‌ನಂತೆ ಹರಡುತ್ತಿದ್ದರೂ ಯಾರೂ ಮಾತಾಡ್ತಾ ಇಲ್ಲ ಯಾಕೆ!?

ಈ ಹಿನ್ನೆಲೆಯಲ್ಲಿ, ಸಮೀಪದ ಹಾಗೂ ಹವಾಮಾನಕ್ಕೆ ತಕ್ಕಂತೆ ನಿಖರ ಮಾಹಿತಿಯನ್ನು ಹೊಂದಿರುವ ಕೇಂದ್ರಗಳ ಆಧಾರದ ಮೇಲೆ ರೈತರಿಗೆ 2024–25ರ ಪರಿಹಾರವನ್ನು ಮರು ಲೆಕ್ಕ ಹಾಕುವಂತೆ, ಮಳೆ SMS ಸೇವೆಯನ್ನು ಪುನರ್‌ಸ್ಥಾಪಿಸುವಂತೆ, ರೋಗ ನಿಯಂತ್ರಣಕ್ಕೆ ತಕ್ಷಣದ ಕ್ರಮ ಕೈಗೊಳ್ಳುವಂತೆ ಹಾಗೂ ಅಡಿಕೆ ಬೆಳೆ ನಷ್ಟಕ್ಕೆ ವಿಶೇಷ ಪರಿಹಾರ ಪ್ಯಾಕೇಜ್‌ ನೀಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರವನ್ನು ನಾನು ಮನವಿ ಮಾಡಿದ್ದೇನೆ. ನಮ್ಮ ಅನ್ನದಾತರಿಗೆ ನ್ಯಾಯ, ರಕ್ಷಣೆ ಮತ್ತು ಸಮಯೋಚಿತ ಸಹಾಯ ದೊರೆಯುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.