KSRTC Bus: ಕೆಎಸ್‌ಆರ್‌ಟಿಸಿಯಲ್ಲಿ ನೂತನ ಲಗೇಜ್ ನಿಯಮ ಜಾರಿಯಾಗಿಲ್ಲ: ನಿಗಮ ಸ್ಪಷ್ಟನೆ
Luggage Guidelines: ಕೆಎಸ್‌ಆರ್‌ಟಿಸಿಯಲ್ಲಿ ನೂತನ ಲಗೇಜ್ ನಿಯಮ ಜಾರಿ ಎಂದು ಸಾಮಾಜಿಕ ಜಾಲತಾಣ ಮತ್ತು ಕೆಲವೊಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಹೀಗಾಗಿ ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. 2022ರ ಅ. 28 ನಂತರ ಯಾವುದೇ ಹೊಸ ಲಗೇಜ್ ನಿಯಮ / ಸುತ್ತೋಲೆಯನ್ನು ನಿಗಮದಲ್ಲಿ ಜಾರಿಗೆ ತಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಬೆಂಗಳೂರು: ಕೆಎಸ್‌ಆರ್‌ಟಿಸಿಯಲ್ಲಿ ನೂತನ ಲಗೇಜ್ ನಿಯಮ ಜಾರಿ ಎಂದು ಸಾಮಾಜಿಕ ಜಾಲತಾಣ ಮತ್ತು ಕೆಲವೊಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು ಸತ್ಯಕ್ಕೆ ದೂರವಾಗಿರುತ್ತದೆ. ನಿಗಮದ ಬಸ್‌ಗಳಲ್ಲಿ (KSRTC Bus) ಪ್ರಯಾಣಿಕರ ಲಗೇಜ್ / ಸರಕುಗಳನ್ನು ಸಾಗಿಸಲು ಹಿಂದಿನಿಂದಲೂ ವ್ಯವಸ್ಥೆ ಜಾರಿಯಿದ್ದು, ಅಂದರೆ ವಾಷಿಂಗ್ ಮಷಿನ್, ಫ್ರಿಡ್ಜ್, ಟ್ರಕ್ ಟಯರ್, ಅಲ್ಯೂಮಿನಿಯಂ ಪೈಪ್, ಕಬ್ಬಿಣದ ಪೈಪ್, ಪಾತ್ರೆ, ಬೆಕ್ಕು, ನಾಯಿ, ಮೊಲಗಳನ್ನು ಸಾಗಿಸಲು ಅವಕಾಶವನ್ನು 1999ರ ನವೆಂಬರ್ 5ರಿಂದಲೇ (ಬಸ್ಸಿನಲ್ಲಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ) ನಿಗಮದಲ್ಲಿ ಜಾರಿಯಲ್ಲಿರುತ್ತದೆ. ಹೊಸದಾಗಿ ಲಗೇಜ್ ನಿಯಮ ಜಾರಿಯಾಗಿಲ್ಲ ಎಂದು ನಿಗಮದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಈ ವ್ಯವಸ್ಥೆಯ ಅನುಷ್ಠಾನದಲ್ಲಿ ಕಾಲದಿಂದ ಕಾಲಕ್ಕೆ ದರಗಳ ಪರಿಷ್ಕರಣೆ, 30 ಕೆಜಿ ವರೆಗೆ ಲಗೇಜ್ ಕೊಂಡೊಯ್ಯಲು ಉಚಿತ ಅವಕಾಶ, ಸಾಗಿಸಬಹುದಾದ ವಸ್ತುಗಳ ಪ್ರಯಾಣ ಇತ್ಯಾದಿಗಳನ್ನು ಉಲ್ಲೇಖಿಸಿ ಪ್ರಸ್ತುತ 2022ರ ಅ. 28ರಿಂದ ಲಗೇಜ್ ನಿಯಮ / ಸುತ್ತೋಲೆ ಜಾರಿಯಲ್ಲಿದೆ.
ಈ ಸುದ್ದಿಯನ್ನೂ ಓದಿ | CM Siddaramaiah: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು 5 ವರ್ಷಕ್ಕೆ: ಬಸವರಾಜ ರಾಯರೆಡ್ಡಿ
2022ರ ಅ. 28 ನಂತರ ಯಾವುದೇ ಹೊಸ ಲಗೇಜ್ ನಿಯಮ / ಸುತ್ತೋಲೆಯನ್ನು ನಿಗಮದಲ್ಲಿ ಜಾರಿಗೆ ತಂದಿರುವುದಿಲ್ಲ ಎಂಬುದನ್ನು ತಮ್ಮ ಆದ್ಯ ಗಮನಕ್ಕೆ ತರಲಾಗಿದೆ.