Toll price hike: ರಾಜ್ಯದ ಜನತೆಗೆ ಶಾಕ್ ಮೇಲೆ ಶಾಕ್! ಟೋಲ್ ದರದಲ್ಲೂ ಏರಿಕೆ
Toll price hike: ಬೆಲೆ ಏರಿಕೆ ಹಾಗೂ ವಾರ್ಷಿಕ ಹಣದುಬ್ಬರ ಆಧರಿಸಿ ಟೋಲ್ ದರ ಹೆಚ್ಚಿಸಲಾಗಿದ್ದು, ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಇಂದಿನಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಟೋಲ್ ಗುತ್ತಿಗೆ ಅವಧಿ ಆಧರಿಸಿ ದರಗಳು ಬದಲಾಗಲಿದ್ದು, ಕನಿಷ್ಠ ಶೇಕಡಾ 3 ರಷ್ಟು ಮತ್ತು ಗರಿಷ್ಠ ಶೇ.5 ರಷ್ಟು ಹೆಚ್ಚಳ-ವಾಗಲಿದೆ.


ಬೆಂಗಳೂರು: ಬೆಲೆ ಏರಿಕೆಗಳಿಂದ ತತ್ತರಿಸಿರುವ ರಾಜ್ಯದ (Karnataka) ಜನತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತೊಂದು ಶಾಕ್ ನೀಡಿದೆ. ಇಂದಿನಿಂದ ರಾಜ್ಯಾದ್ಯಂತ ಟೋಲ್ (Toll price hike) ಸುಂಕ ಶೇ 3-5ರಷ್ಟು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಬೆಲೆ ಏರಿಕೆ, ಹಣದುಬ್ಬರಕ್ಕೆ ಅನುಗುಣವಾಗಿ ವಾರ್ಷಿಕವಾಗಿ ಮಾಡುವ ದರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಈಗ ಟೋಲ್ ಸುಂಕ ಹೆಚ್ಚಳಕ್ಕೆ ಎನ್‌ಎಚ್‌ಎಐ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಲೆ ಏರಿಕೆ ಹಾಗೂ ವಾರ್ಷಿಕ ಹಣದುಬ್ಬರ ಆಧರಿಸಿ ಟೋಲ್ ದರ ಹೆಚ್ಚಿಸಲಾಗಿದ್ದು, ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಇಂದಿನಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಟೋಲ್ ಗುತ್ತಿಗೆ ಅವಧಿ ಆಧರಿಸಿ ದರಗಳು ಬದಲಾಗಲಿದ್ದು, ಕನಿಷ್ಠ ಶೇಕಡಾ 3 ರಷ್ಟು ಮತ್ತು ಗರಿಷ್ಠ ಶೇ.5 ರಷ್ಟು ಹೆಚ್ಚಳ-ವಾಗಲಿದೆ. ಈ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಎನ್‌ಎಚ್‌ಎಐ ಯ ಬೆಂಗಳೂರಿನ ಯೋಜನಾ ನಿರ್ದೇಶಕ ಕೆಬಿ ಜಯಕುಮಾರ್ ಕೆಲವು ದಿನಗಳ ಹಿಂದೆಯೇ ಮಾಹಿತಿ ನೀಡಿದ್ದರು.
ಈ ಸುದ್ದಿಯನ್ನೂ ಓದಿ: Nandini milk price hike: ನಂದಿನಿ ಹಾಲಿನ ದರ ಹೆಚ್ಚಳ; ನಾಳೆಯಿಂದಲೇ ಪರಿಷ್ಕೃತ ದರ ಜಾರಿ!
ಟೋಲ್ ಸುಂಕ ಹೆಚ್ಚಾಗಲಿರುವ ಟೋಲ್ ಪ್ಲಾಜಾಗಳು
ಕರ್ನಾಟಕದಲ್ಲಿ ಸುಮಾರು 66 ಟೋಲ್ ಪ್ಲಾಜಾಗಳಿವೆ. ಟೋಲ್ ಸುಂಕ ಹೆಚ್ಚಾಗುವ ಟೋಲ್ ಪ್ಲಾಜಾಗಳಲ್ಲಿ ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (ಬೆಂಗಳೂರು-ಮೈಸೂರು), ನಂಗ್ಲಿ (ಬೆಂಗಳೂರು-ತಿರುಪತಿ), ಬಾಗೇಪಲ್ಲಿ (ಬೆಂಗಳೂರು-ಹೈದರಾಬಾದ್), ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ), ಮತ್ತು ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) ಟೋಲ್ ಪ್ಲಾಜಾಗಳು ಸೇರಿವೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳ ನಿರ್ಣಯ ಮತ್ತು ಸಂಗ್ರಹ) ನಿಯಮ-ಗಳು-2008ರ ಪ್ರಕಾರ ಸಗಟು ಬೆಲೆ ಸೂಚ್ಯಂಕದ ಆಧಾರದಲ್ಲಿ ಟೋಲ್ ಶುಲ್ಕ ಹೆಚ್ಚಿಸಲಾಗಿದೆ. ಈ ಹೆಚ್ಚುವರಿ ಟೋಲ್ ಶುಲ್ಕವನ್ನು ವಾಹನ ಮಾಲೀಕರಿಗೆ ವರ್ಗಾಯಿಸಲಾಗುತ್ತದೆ. ವಾಹನ ಮಾಲೀಕರು ಈ ಆರ್ಥಿಕ ಹೊರೆಯನ್ನು ಗ್ರಾಹಕರ ಮೇಲೆ ಹಾಕುತ್ತಾರೆ. ಸರಳವಾಗಿ ಹೇಳುವುದಾದರೆ ಟೋಲ್ ದರ ಏರಿಕೆಯ ಬಿಸಿ ನೇರವಾಗಿ ಗ್ರಾಹಕರಿಗೆ ತಟ್ಟಲಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾರ್ಚ್ 19ರಂದು ರಾಜ್ಯಸಭೆಗೆ ತಿಳಿಸಿರುವ ಪ್ರಕಾರ 2023-24 ರಲ್ಲಿ ಭಾರತದಲ್ಲಿ ಒಟ್ಟು ಟೋಲ್ ಸಂಗ್ರಹವು 64,809.86 ಕೋಟಿ ರೂ.ಗಳನ್ನು ತಲುಪಿದೆ. ಇದು ಹಿಂದಿನ ವರ್ಷಕ್ಕಿಂತ 35% ಹೆಚ್ಚಾಗಿದೆ. 2019-20 ರಲ್ಲಿ ಸಂಗ್ರಹವು 27,503 ಕೋಟಿ ರೂ.ಗಳಷ್ಟಿತ್ತು ಎಂದು ಹೇಳಿದ್ದಾರೆ.