ತುಮಕೂರು, ಸೆ.11: ನಗರದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ (Tumkur News) ಸೆ. 12ರಂದು ಬೆಳಗ್ಗೆ 11ಕ್ಕೆ 17ನೇ ಪದವಿ ಪ್ರದಾನ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ವಿವಿಧ ವಿಭಾಗಗಳ ಸುಮಾರು 1,400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಶ್ರೀ ಸಿದ್ಧಗಂಗಾ ಎಜ್ಯುಕೇಷನ್ ಸೊಸೈಟಿಯ ಜಂಟಿ ಕಾರ್ಯದರ್ಶಿ ಡಾ. ಶಿವಕುಮಾರಯ್ಯ ತಿಳಿಸಿದ್ದಾರೆ.
ಶುಕ್ರವಾರ ಎಸ್‌ಐಟಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ಶ್ರೀಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಈ ಸಮಾರಂಭದಲ್ಲಿ ಮಾರ್ವೆಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ ನವೀನ್ ಬಿಷೋಯಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದಕ ವಿತರಿಸಿ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದರು.
ಪದವಿ ಪಡೆಯುವ ವಿದ್ಯಾರ್ಥಿಗಳು: ಎಂಬಿಎ (175), ಎಂಸಿಎ (107), ಎಂಟೆಕ್ (48), ಬಿ.ಇ (1053) ಹಾಗೂ ಬಿ. ಆರ್ಕಿಟೆಕ್ಟ್ (17) ಅಭ್ಯರ್ಥಿಗಳು ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸಲಿದ್ದಾರೆ.
ಚಿನ್ನದ ಪದಕಗಳು: ಸಂಸ್ಥೆ ಹಾಗೂ ದಾನಿಗಳಿಂದ ಒಟ್ಟು 81 ಚಿನ್ನದ ಪದಕಗಳನ್ನು ಸ್ಥಾಪಿಸಲಾಗಿದೆ. ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದ ಲಕ್ಷ್ಮೀಪತಿ ಆರ್. 9.76 ಸಿ.ಜಿ.ಪಿ.ಎ ಗಳಿಸಿ ಅಗ್ರಸ್ಥಾನ ಪಡೆದಿದ್ದು, ಡಾ. ಶಿವಕುಮಾರ ಸ್ವಾಮೀಜಿ ಚಿನ್ನದ ಪದಕ ಸೇರಿ ಒಟ್ಟು 5 ಚಿನ್ನದ ಪದಕಗಳನ್ನು ಸ್ವೀಕರಿಸಲಿದ್ದಾರೆ. ಕಂಪ್ಯೂಟರ್ ಸೈನ್ಸ್ ವಿಭಾಗದ ಧನುಷ್ ಬಿ. ಅವರಿಗೆ ಅಮೆಜಾನ್ ಕಂಪನಿಯಿಂದ ವಾರ್ಷಿಕ 46.38 ಲಕ್ಷ ರೂಪಾಯಿ- ಅತ್ಯಧಿಕ ವೇತನ ಪ್ಯಾಕೇಜ್ ಲಭಿಸಿದೆ.
ಅಪೂರ್ವ ನೇಮಕಾತಿ (ಪ್ಲೇಸ್‌ಮೆಂಟ್): ಜಾಗತಿಕ ಆರ್ಥಿಕ ಮಂದಗತಿ ಹಾಗೂ ಕೃತಕ ಬುದ್ಧಿಮತ್ತೆಯ ಕ್ಷಿಪ್ರ ಬೆಳವಣಿಗೆಯ ಹೊರತಾಗಿಯೂ, ಎಸ್‌ಐಟಿ ಕ್ಯಾಂಪಸ್‌ನಲ್ಲಿ 230ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು, 2025-26ರ ಬ್ಯಾಚ್‌ನ ವಿದ್ಯಾರ್ಥಿಗಳಿಗೆ 1,200ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ದೊರೆತಿವೆ. 180ಕ್ಕೂ ಹೆಚ್ಚು ವಿದ್ಯಾರ್ಥಿಗಳು 10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ವೇತನ ಪ್ಯಾಕೇಜ್ ಪಡೆದಿದ್ದಾರೆ. ಅಮೆಜಾನ್, ವಿಸಾ, ಮೈಂಟ್ರಾ, ಸಿಸ್ಕೊ, ಇನ್ಫೋಸಿಸ್ ಮುಂತಾದ ಪ್ರತಿಷ್ಠಿತ ಕಂಪನಿಗಳು ಕ್ಯಾಂಪಸ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಂಡಿವೆ.
ಯುವ ಬಾಕ್ಸರ್ ಪ್ರಕುಲ್ ಸಾಯಿಗೆ ಐಸಿಎಸ್‍ಇ ಪ್ರಾದೇಶಿಕ ಕ್ರೀಡಾಕೂಟದಲ್ಲಿ ಚಿನ್ನ
ಸೆಮಿಕಂಡಕ್ಟರ್ ಫ್ಯಾಬ್ ಸೌಲಭ್ಯ: ಭಾರತ ಸರ್ಕಾರದ 1,27,500 ಕೋಟಿ ರೂಪಾಯಿ ಬಜೆಟ್ ವೆಚ್ಚದ ಸೆಮಿಕಾನ್ 2.0 ನೀತಿಯ ಪ್ರಚೋದನೆಯೊಂದಿಗೆ, ಎಸ್‌ಐಟಿಯು ಬೆಂಗಳೂರಿನ ಸೆಮ್ಯಾಂಟಿಕ್ ಸ್ಕಿಲ್ಸ್ ಜಂಕ್ಷನ್ ಹಾಗೂ ಆರ್ವೈ ಸ್ಕಿಲ್ಸ್ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಕೌಶಲ್ಯಪೂರ್ಣ ಕಾರ್ಯಪಡೆಗೆ ಒತ್ತು ನೀಡುತ್ತಿದೆ ಎಂದು ಕಾಲೇಜಿನ ಪ್ರಾಚಾರ್ಯ ಪ್ರೊ. ದಿನೇಶ್ ಎಸ್.ವಿ. ತಿಳಿಸಿದ್ದಾರೆ. ಕಾಲೇಜಿನ ಡೀನ್ ಡಾ. ಕಿಶೋರ್ ಚೌಧರಿ ಹಾಗೂ ಈ ಸಾಲಿನ ಕಾಲೇಜಿನ ಟಾಪರ್ ಲಕ್ಷ್ಮೀಪತಿ ಉಪಸ್ಥಿತರಿದ್ದರು.