ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರನ್ನು ನಿಯೋಜಿಸಿ: ಆಡಳಿತಾಧಿಕಾರಿಗೆ ಮನವಿ

ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರನ್ನು ನಿಯೋಜಿಸುವುದು, ರಕ್ತ ಪರೀಕ್ಷೆ ಕೇಂದ್ರವನ್ನು ಕೆಳ ಮಹಡಿಗೆ ಸ್ಥಳಾಂತರಿಸುವುದು ಹಾಗೂ ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ ಕೈಗೊಳ್ಳಲು ಆಸ್ಪತ್ರೆ ಆಡಳಿತ ಅಧಿಕಾರಿಗೆ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆಯಿಂದ ಮನವಿ ಸಲ್ಲಿಸಲಾಗಿದೆ.

ಪಾವಗಡ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರನ್ನು ನಿಯೋಜಿಸಿ: ಮನವಿ

ಪಾವಗಡ ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿಗೆ ಮಾನವ ಹಕ್ಕುಗಳ ಸಂರಕ್ಷಣೆ ಸಂಸ್ಥೆಯಿಂದ ಮನವಿ ಪತ್ರ ಸಲ್ಲಿಕೆ. -

Prabhakara R
Prabhakara R Jan 6, 2026 8:49 PM

ಪಾವಗಡ, ಡಿ.6: ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ (Pavagada Government Hospital) ರಾತ್ರಿ ಪಾಳಿಯಲ್ಲಿ ವೈದ್ಯರನ್ನು ನಿಯೋಜಿಸಬೇಕು ಹಾಗೂ ರಕ್ತ ಪರೀಕ್ಷೆ ಕೇಂದ್ರವನ್ನು ಮೊದಲ ಮಹಡಿಯಿಂದ ಕೆಳ ಮಹಡಿಗೆ ಸ್ಥಳಾಂತರಿಸಲು ಕೋರಿ ಆಸ್ಪತ್ರೆ ಆಡಳಿತಾಧಿಕಾರಿ ಗಣೇಶ್ ಬಾಬು ಅವರಿಗೆ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ಮನವಿ ಪತ್ರ ಸಲ್ಲಿಸಿದೆ.

ಆಸ್ಪತ್ರೆಗೆ ತಾಲೂಕು ಸೇರಿ ನೆರೆಯ ಆಂಧ್ರಪ್ರದೇಶದ ಭಾಗದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಾರೆ. ರಾತ್ರಿ ಪಾಳಿಯಲ್ಲಿ ವೈದ್ಯರು ಹಾಗೂ ಅರಿವಳಿಕೆ (ಅನಸ್ತೇಶಿಯಾ) ತಜ್ಞರು ಇರದಿರುವುದಿರಿಂದ ಹೆರಿಗೆಗೆ ಬರುವ ಗರ್ಭಿಣಿಯರಿಗೆ ಸಮಸ್ಯೆಯಾಗುತ್ತಿದೆ. ಹಾಗೆಯೇ ರಕ್ತ ಪರೀಕ್ಷೆ ಕೇಂದ್ರ ಮೊದಲನೇ ಮಹಡಿಯಲ್ಲಿದ್ದು, ಇದರಿಂದ ವಿಶೇಷಚೇತನರು, ವೃದ್ಧರು ಹಾಗೂ ಬಾಣಂತಿಯರಿಗೆ ಬಹಳ ತೊಂದರೆಯಾಗಿದ್ದು, ಇದನ್ನು ಕೆಳ ಮಹಡಿಗೆ ಸ್ಥಳಾಂತರ ಮಾಡಬೇಕು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ.

ಇನ್ನು ಸರ್ಕಾರಿ ಆಸ್ಪತ್ರೆ ಸುತ್ತಲೂ ಅಡ್ಡದಿಡ್ಡಿಯಾಗಿ ವಾಹನಗಳ ನಿಲುಗಡೆಯಿಂದ ತುರ್ತುವಾಹನಗಳಿಗೆ ತೊಂದರೆಯಾಗಿದೆ. ಈ ಸಮಸ್ಯೆ ಪರಿಹರಿಸಲು ತಕ್ಷಣ ಗಮನಹರಿಸಬೇಕು. ಹಾಗೆಯೇ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನಕಲಿ ವೈದ್ಯರ ಹಾವಳಿಯಿಂದ ಈಗಾಗಲೇ ಹಲವು ಅಮಾಯಕ ಜನರು ಮೃತಪಟ್ಟಿದ್ದು, ಇದರ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳಲು ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ನಕಲಿ ವೈದ್ಯದಿಂದ ರೋಗಿಗಳು ಮೃತಪಟ್ಟರೆ, ಅದಕ್ಕೆ ಜಿಲ್ಲಾ ವೈದ್ಯಾಧಿಕಾರಿಗಳು ಹಾಗೂ ತಾಲೂಕು ವೈದ್ಯಾಧಿಕಾರಿಗಳು ನೇರ ಹೊಣೆ. ತತ್‌ಕ್ಷಣವೇ ಈ ವಿಚಾರವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಹೀಗೊಂದು ಅಚ್ಚರಿ: ಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯಲು ತಾನೇ ಆಸ್ಪತ್ರೆಗೆ ಬಂದ ಬೀದಿನಾಯಿ!

ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮೈಕಲ್, ಝಬಿವುಲ್ಲಾ, ನಾಗರಾಜ್, ರಮ್ಯಾ. ನೇತ್ರಾವತಿ, ಶಶಿಕಲಾ ಮತ್ತಿತರರು ಇದ್ದರು.

image

ವಿವಿಧ ಪರೀಕ್ಷೆ ಕೇಂದ್ರ ಎಲ್ಲಾ ಒಂದೇ ಕಡೆ ಇರಲಿ ಎಂಬ ಉದ್ದೇಶದಿಂದ ಕೇಂದ್ರ ಯೋಜನೆ ಅಡಿಯಲ್ಲಿ ರಕ್ತ ಪರೀಕ್ಷೆ ಕೇಂದ್ರ ನಿರ್ಮಾಣ ಮಾಡಲಾಗಿದೆ. ಆದರೆ ಮೊದಲನೇ ಮಹಡಿಯಲ್ಲಿರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂಬುದಾಗಿ ದೂರುಗಳು ಬಂದಿವೆ. ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುತ್ತೇವೆ

ಗಣೇಶ್ ಬಾಬು, ಆಡಳಿತ ಅಧಿಕಾರಿ, ಪಾವಗಡ ಸಾರ್ವಜನಿಕ ಆಸ್ಪತ್ರೆ

(ವರದಿ: ಇಮ್ರಾನ್ ಉಲ್ಲಾ, ಪಾವಗಡ)