ಮಧುಗಿರಿ, ಮಾ.5: ಸರ್ವ ಜನಾಂಗದವರನ್ನು ಒಳಗೊಂಡು ನಡೆಸುವ ಮಧುಗಿರಿಯ ದಂಡಿನ ಮಾರಮ್ಮ ಜಾತ್ರೆಯು (Sri Dandina Maramma Jatra) ವೈಶಿಷ್ಟ್ಯದಿಂದ ಕೂಡಿದೆ ಎಂದು ದೇವಸ್ಥಾನದ ಆಡಳಿತ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದರು. ಪಟ್ಟಣದ (Madhugiri News) ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮನವರ-2026ನೇ ಸಾಲಿನ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರನ್ನೂ ಒಗ್ಗೂಡಿಸಿ ಸಡಗರ- ಸಂಭ್ರಮದಿಂದ ನಡೆಯುವ ಈ ಜಾತ್ರೆಯಲ್ಲಿ ಭಾಗವಹಿಸಿ, ತಾಯಿಯ ಆಶೀರ್ವಾದ ಪಡೆಯುವುದೇ ನಮ್ಮ ಸೌಭಾಗ್ಯವಾಗಿದೆ ಎಂದ ಅವರು, ಪ್ರತಿಯೊಬ್ಬರೂ ಶಾಂತ ಮನೋಭಾವದಿಂದ ಜಾತ್ರೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದರು. ತಾಯಿಯ ಕೃಪೆಯಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗಿ ಬೆಳೆಯು ಸಮೃದ್ಧಿಯಾಗಿ ರೈತರ ಜೀವನ ಹಸನಾಗಲಿ ಎಂದು ತಾಯಿಯಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಹಿರಿಯ. ಸಾಹಿತಿ ಪ್ರೊ. ಮ. ಲ. ನ. ಮೂರ್ತಿ ಮಾತನಾಡಿ, ನಮ್ಮ ಹಿರಿಯರು ಊರಿನ ಒಳಗಡೆ ಯಾವುದೇ ಕೆಟ್ಟ ಶಕ್ತಿಗಳು ಪ್ರವೇಶಿಸದಿರಲಿ, ತಾಯಿಯು ಜನರ ಹಿತ ರಕ್ಷಿಸಲಿ ಎಂಬ ಕಾರಣದಿಂದ ಪಟ್ಟಣ ಪ್ರವೇಶಿಸುವಲ್ಲಿಯೇ ಗ್ರಾಮ ದೇವತೆ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ರಾಜ್ಯದಲ್ಲಿ ಶ್ರೀ ದಂಡಿನ ಮಾರಮ್ಮನ ಜಾತ್ರೆಯು 11 ದಿನಗಳ ಕಾಲ ನಡೆಯುತ್ತದೆ. ದಂಡಿನ ಮಾರಮ್ಮ ಯುದ್ಧದ ಸಂದರ್ಭದಲ್ಲಿ ದಂಡಿನೊಡನೆ ಬಂದ ದೇವತೆ. ಊರ ಹೊರಗೆ ನೆಲೆಸಿ ಯಾವುದೇ ಕೆಡುಕು ಒಳನುಗ್ಗದಂತೆ ರಕ್ಷಿಸುತ್ತಿದ್ದಾಳೆ. ಸಂಸ್ಕೃತಿ ಪರಂಪರೆ ಜಾತ್ರೆಯಲ್ಲಿ ಬೆರೆತು ಸಂಬಂಧಗಳನ್ನು ಗಟ್ಟಿಗೊಳಿಸುವುದು. ಸಂಜೆ ಮನರಂಜನೆಯ ಕಾರ್ಯಕ್ರಮದಲ್ಲಿ ಉಪಯುಕ್ತ ವಿಚಾರ ವಿನಿಮಯವಾಗುವುದು ಎಂದು ಹೇಳಿದರು.
ದೇವರ ಕೋಣೆಯ ವಸ್ತುಗಳನ್ನು ಹೇಗೆ ಇಡಬೇಕು? ಈ ಬಗ್ಗೆ ವಾಸ್ತು ಶಾಸ್ತ್ರ ನೀಡೋ ಸಲಹೆ ಏನು?
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಜಿ. ಮಂಜುನಾಥ್, ತುಮಕೂರು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಡಾ. ಎಂ.ಜಿ. ಶ್ರೀನಿವಾಸ ಮೂರ್ತಿ, ಪುರಸಭೆ ಮಾಜಿ ಸದಸ್ಯ ಎಂ.ವಿ. ಮಂಜುನಾಥ, ಮುಖಂಡರುಗಳಾದ ಹರಿನಾಥ್ ಗೌಡ, ರಾಮೇಗೌಡ, ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಶ್ರೀನಿವಾಸ್, ಪ್ರಧಾನ ಅರ್ಚಕರಾದ ಎಂ.ಎನ್. ಅರುಣ್ ಕುಮಾರ್, ಲಕ್ಷ್ಮಿಕಾಂತ ಆಚಾರ್, ಮುರುಳಿ, ಚಂದನ್ ಶರ್ಮ ಮತ್ತು ರೈತ ಮುಖಂಡರು, ಇತರರು ಉಪಸ್ಥಿತರಿದ್ದರು.