ಬೆಂಗಳೂರು: ಕಾರ್ಮಿಕ ಇಲಾಖೆ ಹೊರಡಿಸಿರುವ ಕನಿಷ್ಠ ವೇತನ ಹೆಚ್ಚಳ ಮುಂದುವರಿಸುವುದು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಪಂಚ ನೌಕರರ ಸಮಿತಿಯು ಅ.12 ರಿಂದ ತುಮಕೂರಿನ ಸಿದ್ಧಗಂಗಾ ಮಠದಿಂದ ಬೆಂಗಳೂರು ಚಲೋ ಪಾದಯಾತ್ರೆ(Bangalore Chalo Padayatra) ಹಮ್ಮಿಕೊಂಡಿದೆ ಎಂದು ಕ್ಲರ್ಕ್ ಕಮ್ ಡೇಟಾ ಎಂಟ್ರಿ ಆಪರೇಟರ್ ನೌಕರರ ಹಾಗೂ ಪಂಚ ನೌಕರರ ಸಮಿತಿಯ ರಾಜ್ಯ ಅಧ್ಯಕ್ಷ ಭೀಮರೆಡ್ಡಿ ಪಾಟೀಲ್ ತಿಳಿಸಿದ್ದಾರೆ.
ಪ್ರಮುಖ ಮುಖ್ಯಾಂಶಗಳು: ಪಾದಯಾತ್ರೆ ವಿವರ: ಅಕ್ಟೋಬರ್ 12ರಂದು ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ಮೆಟ್ಟಿದ ಸಿದ್ಧಗಂಗಾ ಮಠದ ನೆಲದಿಂದ ಪಾದಯಾತ್ರೆ ಆರಂಭವಾಗಿ ಬೆಂಗಳೂರು ತಲುಪಲಿದೆ.
ಭಾಗಿಗಳು: ಈ ಹೋರಾಟದಲ್ಲಿ ರಾಜ್ಯದ ಸುಮಾರು 35 ಸಾವಿರಕ್ಕೂ ಅಧಿಕ ಗ್ರಾಮ ಪಂಚಾಯತಿ ನೌಕರರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: BJP Padayatra: ವಂದೇ ಮಾತರಂ ಗೀತೆ ಮೊಟಕು; ರಾಜ್ಯ ಸರ್ಕಾರದ ವಿರುದ್ಧ ಸೆ.15ರಿಂದ ಬಿಜೆಪಿ ಪಾದಯಾತ್ರೆ
ಮುಂದಿನ ಹಂತದ ಎಚ್ಚರಿಕೆ: ಸರ್ಕಾರದ ಕಡೆಯಿಂದ ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದರೆ, ಅಕ್ಟೋಬರ್ 14, 15 ಮತ್ತು 16 ರಂದು ನೌಕರರ ಕುಟುಂಬ ವರ್ಗದವರೊಂದಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.
ಗ್ರಾ.ಪಂ ನೌಕರರ ಪ್ರಮುಖ ಬೇಡಿಕೆಗಳು: ಕಾರ್ಮಿಕ ಇಲಾಖೆ ಹೊರಡಿಸಿರುವ ಕನಿಷ್ಠ ವೇತನ ಹೆಚ್ಚಳ ಆದೇಶವನ್ನು ಮುಂದುವರಿಸಿ, ಕೂಡಲೇ ವೇತನ ಜಾರಿಗೊಳಿಸಬೇಕು.
ಮಾತೃ ಇಲಾಖೆಯಿಂದಲೇ ಪ್ರತಿ ವರ್ಷ ವೇತನ ಪರಿಷ್ಕರಣೆ ಹಾಗೂ ವೇತನ ಶ್ರೇಣಿ ನಿಗದಿಪಡಿಸಲು ಸಮಿತಿ ರಚಿಸಬೇಕು. ಪಂಚ ವೃಂದದ ನೌಕರರಿಗೆ ಇಲಾಖೆಯಿಂದಲೇ ನೇರ ವೇತನ ಜಾರಿಗೊಳಿಸ ಬೇಕು ಹಾಗೂ ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ಕಲ್ಪಿಸಬೇಕು.
ನೌಕರರ ಸಂಕಷ್ಟ ಮತ್ತು ಸರ್ಕಾರದ ನಿರ್ಲಕ್ಷ್ಯ: ಗ್ರಾಮ ಪಂಚಾಯತಿಗಳಲ್ಲಿ ಕರ ವಸೂಲಿ ಗಾರರು, ಕ್ಲರ್ಕ್ ಕಮ್ ಡೇಟಾ ಎಂಟ್ರಿ ಆಪರೇಟರ್, ನೀರುಗಂಟಿ, ಜವಾನ ಹಾಗೂ ಸ್ವಚ್ಛತಾಗಾರರು ಹಗಲುರಾತ್ರಿ ಶ್ರಮಿಸಿ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು, ಸ್ವಚ್ಛತೆ ಮತ್ತು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಆದರೆ ಯಾವುದೇ ಜೀವಭದ್ರತೆ ಇಲ್ಲದೆ, ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಇವರ ಬದುಕು ಇಂದು ಸಂಕಷ್ಟದಲ್ಲಿದೆ. ಸರ್ಕಾರ ನೌಕರರ ವೇತನ ಪರಿಷ್ಕರಣೆ ಆದೇಶವನ್ನು ಹಿಂಪಡೆದಿರುವುದು ಖಂಡನೀಯವಾಗಿದ್ದು, ಈ ಅನಿವಾರ್ಯ ಹೋರಾಟಕ್ಕೆ ಶ್ರೀಗಳ ಆಶೀರ್ವಾದದೊಂದಿಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನೀರುಗಂಟಿ ಸಂಘದ ರಾಜ್ಯ ಅಧ್ಯಕ್ಷ ರಾಮಕೃಷ್ಣಪ್ಪ, ಜವಾನರ ಸಂಘದ ರಾಜಶೇಖರ್, ಸ್ವಚ್ಛತಾಗಾರ ಸಂಘದ ನಿತಿನ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.