ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹುಳಿಯಾರು, ಹಂದನಕೆರೆ ಠಾಣೆಗಳಿಗೆ ಬೇಕಿದೆ 'ಕಾಯಂ' ಸಾರಥಿ: ಪ್ರಭಾರ ಹೊರೆಯಿಂದ ತಿಪಟೂರು ಪಿಎಸ್‌ಐ ಯತೀಶ್ ಹೈರಾಣ!

Chikkanayakanahalli News: ಚಿಕ್ಕನಾಯಕನಹಳ್ಳಿ ತಾಲೂಕಿನ ಪ್ರಮುಖ ವ್ಯಾಪ್ತಿ ಹೊಂದಿರುವ ಹುಳಿಯಾರು ಮತ್ತು ಹಂದನಕೆರೆ ಪೊಲೀಸ್ ಠಾಣೆಗಳು ಈಗ ಪೂರ್ಣ ಪ್ರಮಾಣದ ಅಧಿಕಾರಿಯಿಲ್ಲದೆ ಅನಾಥವಾಗಿವೆ. ತಿಪಟೂರು ನಗರ ಪಿಎಸ್‌ಐ ಯತೀಶ್ ಅವರಿಗೆ ಈ ಎರಡೂ ಠಾಣೆಗಳ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಇದರಿಂದ ಅವರು ಹೈರಾಣಾಗುವಂತಾಗಿದೆ.

ಹುಳಿಯಾರು ಠಾಣೆಯಲ್ಲಿ ಎಸ್‌ಪಿ ಅಶೋಕ್ ಅವರಿಗೆ ಪ್ರಭಾರ ಪಿಎಸ್‌ಐ ಯತೀಶ್ ಮಾಹಿತಿ ನೀಡಿದರು.

| ಧನಂಜಯ್, ಚಿಕ್ಕನಾಯಕನಹಳ್ಳಿ

ಚಿಕ್ಕನಾಯಕನಹಳ್ಳಿ ತಾಲೂಕಿನ ಪ್ರಮುಖ ವ್ಯಾಪ್ತಿ ಹೊಂದಿರುವ ಹುಳಿಯಾರು ಮತ್ತು ಹಂದನಕೆರೆ ಪೊಲೀಸ್ ಠಾಣೆಗಳು ಈಗ ಪೂರ್ಣ ಪ್ರಮಾಣದ ಅಧಿಕಾರಿಯಿಲ್ಲದೆ ಅನಾಥವಾಗಿವೆ. ತಿಪಟೂರು ನಗರ ಪಿಎಸ್‌ಐ ಯತೀಶ್ ಅವರಿಗೆ ಈ ಎರಡೂ ಠಾಣೆಗಳ ಹೆಚ್ಚುವರಿ ಹೊಣೆಗಾರಿಕೆ ನೀಡಿರುವುದರಿಂದ, ಅವರು ಮೂರು ಠಾಣೆಗಳ ನಡುವೆ ಕಾರ್ಯನಿರ್ವಹಿಸಲು ಹೈರಾಣಾಗುತ್ತಿದ್ದಾರೆ. ಅತೀ ಹೆಚ್ಚು ವ್ಯಾಪ್ತಿ ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಹೊಂದಿರುವ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಹುದ್ದೆ ಕಳೆದ ಒಂದು ತಿಂಗಳಿನಿಂದ ಖಾಲಿಯಿದ್ದು, ಇಲ್ಲಿಗೆ ಬರಬೇಕಿದ್ದ ಅಧಿಕಾರಿಯ ನೇಮಕಾತಿ ವಿಳಂಬವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತ ಹಂದನಕೆರೆ ಪೊಲೀಸ್ ಠಾಣೆಯ ಪಿಎಸ್‌ಐ ಚಿತ್ತರಂಜನ್ ಅವರು ತಮ್ಮ ಮದುವೆಯ ನಿಮಿತ್ತ ದೀರ್ಘಕಾಲದ ರಜೆಯ ಮೇಲೆ ತೆರಳಿದ್ದಾರೆ. ಇದರಿಂದಾಗಿ ಹಂದನಕೆರೆ ಠಾಣೆಯ ಜವಾಬ್ದಾರಿಯೂ ಸಹ ತಿಪಟೂರು ಪಿಎಸ್‌ಐ ಯತೀಶ್ ಅವರ ಹೆಗಲಿಗೆ ಬಿದ್ದಿದೆ. ತಿಪಟೂರು ನಗರದ ಸದಾ ಒತ್ತಡದ ಕೆಲಸದ ನಡುವೆ, ಅಲ್ಲಿಂದ ಸರಿಸುಮಾರು 30-40 ಕಿ.ಮೀ ದೂರದ ಈ ಎರಡೂ ಠಾಣೆಗಳಿಗೆ ಅಲೆದಾಡುವುದು ಪಿಎಸ್‌ಐ ಯತೀಶ್ ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ಒತ್ತಡ ತರುತ್ತಿದೆ. ಒಬ್ಬರೇ ಅಧಿಕಾರಿ ಮೂರು ಕಡೆ ಇರುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದ್ದು, ಸಾರ್ವಜನಿಕರು ದೂರು ನೀಡಲು ಹಾಗೂ ಕಡತಗಳ ಸಹಿಗಾಗಿ ಗಂಟೆಗಟ್ಟಲೆ ಕಾಯುವಂತಾಗಿದೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರು, "ಆಡಳಿತಾತ್ಮಕ ಕಾರಣಗಳಿಂದ ಈ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಹುಳಿಯಾರು ಮತ್ತು ಹಂದನಕೆರೆ ಠಾಣೆಗಳಲ್ಲಿ ಅಧಿಕಾರಿಗಳ ಕೊರತೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಹುಳಿಯಾರು ಠಾಣೆಗೆ ಕಳೆದ ಒಂದು ತಿಂಗಳಿನಿಂದ ಅಧಿಕಾರಿಯ ನೇಮಕಾತಿ ಪ್ರಕ್ರಿಯೆ ಬಾಕಿ ಇರುವುದು ಮತ್ತು ಹಂದನಕೆರೆ ಅಧಿಕಾರಿ ರಜೆಯಲ್ಲಿರುವುದು ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ಅನಾನುಕೂಲ ಉಂಟುಮಾಡಿರುವುದು ನಿಜ. ತಿಪಟೂರು ನಗರ ಪಿಎಸ್‌ಐ ಅವರಿಗೆ ಸದ್ಯಕ್ಕೆ ಜವಾಬ್ದಾರಿ ನೀಡಲಾಗಿದ್ದು, ಶೀಘ್ರದಲ್ಲೇ ಈ ಎರಡೂ ಠಾಣೆಗಳಿಗೆ ನೂತನ ಅಧಿಕಾರಿಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟಕ್ಕೆ ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಕರೆ

ವರಿಷ್ಠಾಧಿಕಾರಿಗಳು ಭರವಸೆ ನೀಡಿದ್ದರೂ, ಕೂಡಲೇ ಹುಳಿಯಾರು ಮತ್ತು ಹಂದನಕೆರೆಗೆ ಪರ್ಯಾಯ ಅಧಿಕಾರಿಗಳನ್ನು ನೇಮಿಸಿ, ತಿಪಟೂರು ನಗರ ಪಿಎಸ್‌ಐ ಯತೀಶ್ ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಆತಂಕ ಎದುರಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.