ಚಿಕ್ಕನಾಯಕನಹಳ್ಳಿ, ಜ.17: ಪಾವಗಡದ ಖ್ಯಾತ ಶ್ರೀ ರಾಮಕೃಷ್ಣ ಸೇವಾಶ್ರಮದ ವತಿಯಿಂದ ಚಿಕ್ಕನಾಯಕನಹಳ್ಳಿ ಪಟ್ಟಣ (Chikkanayakanahalli News) ಹಾಗೂ ತಾಲೂಕಿನ ಪತ್ರಿಕಾ ವಿತರಕರಿಗೆ ಉಚಿತವಾಗಿ ಜರ್ಕಿನ್ ವಿತರಿಸುವ ಕಾರ್ಯಕ್ರಮವನ್ನು ಜ. 18ರಂದು ಭಾನುವಾರ ಹಮ್ಮಿಕೊಳ್ಳಲಾಗಿದೆ. ಸುದ್ದಿ ಲೋಕದ ಕೊಂಡಿಯಾಗಿರುವ ಪತ್ರಿಕಾ ವಿತರಕರು ಪ್ರತಿದಿನ ಮುಂಜಾನೆ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಮನೆಮನೆಗೆ ಪತ್ರಿಕೆ ತಲುಪಿಸುವ ಕಾಯಕದಲ್ಲಿ ತೊಡಗಿದ್ದಾರೆ. ಅವರ ನಿಸ್ವಾರ್ಥ ಸೇವೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಶ್ರೀ ರಾಮಕೃಷ್ಣ ಸೇವಾಶ್ರಮವು ಈ ಜನಪರ ಕಾರ್ಯಕ್ಕೆ ಮುಂದಾಗಿದೆ.
ಭಾನುವಾರ ಬೆಳಿಗ್ಗೆ 11:30 ಗಂಟೆಗೆ ಪಟ್ಟಣದ ರೊಟರಿ ಬಾಲಭವನದಲ್ಲಿ ಕಾರ್ಯಕ್ರಮ ಜರುಗಲಿದೆ. ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಜಪಾನಂದ ಮಹಾರಾಜ್ ಅವರು ದಿವ್ಯ ಸಾನಿಧ್ಯ ವಹಿಸಿ ವಿತರಕರಿಗೆ ಜರ್ಕಿನ್ ವಿತರಿಸಲಿದ್ದಾರೆ.
ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಯುಡಬ್ಲೂಜೆ ರಾಜ್ಯ ಸಮಿತಿ ಸದಸ್ಯ ಪುರುಷೋತ್ತಮ್, ಪತ್ರಿಕಾ ವಿತರಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗ, ಜಿಲ್ಲಾಧ್ಯಕ್ಷ ಚೆಲುವರಾಜು ಹಾಗೂ ಜಿಲ್ಲಾ ಕಾರ್ಯದರ್ಶಿ ನಾದೂರು ವಾಸುದೇವ್ ಭಾಗವಹಿಸಲಿದ್ದಾರೆ.
ಚಿಕ್ಕನಾಯಕನಹಳ್ಳಿ ಪಟ್ಟಣ ಠಾಣೆಯ ಕಾರ್ಯವೈಖರಿಗೆ ಐಜಿಪಿ ಲಾಬೂ ರಾಮ್ ಮೆಚ್ಚುಗೆ
ವಿಶೇಷ ಆಹ್ವಾನಿತರಾಗಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೇತನ್ ಪ್ರಸಾದ್, ಕಸಾಪ ತಾಲೂಕು ಅಧ್ಯಕ್ಷ ರವಿಕುಮಾರ್ ಕಟ್ಟೆಮನೆ, ರೂಪಾಂತರ ಮಹಿಳಾ ಸಶಕ್ತೀಕರಣ ಸಂಸ್ಥೆಯ ರೂಪಾಶ್ರೀ ಹಾಗೂ ರೋಟರಿ ಸಂಸ್ಥೆ ಅಧ್ಯಕ್ಷ ಮಹಾಲಿಂಗಯ್ಯ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.