ಚಿಕ್ಕನಾಯಕನಹಳ್ಳಿ ಪಟ್ಟಣ ಠಾಣೆಯ ಕಾರ್ಯವೈಖರಿಗೆ ಐಜಿಪಿ ಲಾಬೂ ರಾಮ್ ಮೆಚ್ಚುಗೆ
Chikkanayakanahalli News: ಚಿಕ್ಕನಾಯಕನಹಳ್ಳಿ ಪಟ್ಟಣದ ಪೊಲೀಸ್ ಠಾಣೆಗೆ ವಾರ್ಷಿಕ ತಪಾಸಣೆಗಾಗಿ ಶನಿವಾರ ಭೇಟಿ ನೀಡಿದ್ದ ಕೇಂದ್ರ ವಲಯ ಐಜಿಪಿ ಲಾಬು ರಾಮ್, ಪಟ್ಟಣದ ಪೊಲೀಸ್ ಠಾಣೆಯ ಆಡಳಿತಾತ್ಮಕ ನಿರ್ವಹಣೆ ಹಾಗೂ ಸಿಬ್ಬಂದಿಯ ಕಾರ್ಯ ವೈಖರಿ ಅತ್ಯಂತ ತೃಪ್ತಿದಾಯಕವಾಗಿದೆ ಎಂದು ಶ್ಲಾಘಿಸಿದ್ದಾರೆ.
ಚಿಕ್ಕನಾಯಕನಹಳ್ಳಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಐಜಿಪಿ ಲಾಬೂ ರಾಮ್‌ಗೆ ಮನವಿ. -
ಚಿಕ್ಕನಾಯಕನಹಳ್ಳಿ, ಡಿ.13: ಪಟ್ಟಣದ ಪೊಲೀಸ್ ಠಾಣೆಯ ಆಡಳಿತಾತ್ಮಕ ನಿರ್ವಹಣೆ ಹಾಗೂ ಸಿಬ್ಬಂದಿಯ ಕಾರ್ಯ ವೈಖರಿ ಅತ್ಯಂತ ತೃಪ್ತಿದಾಯಕವಾಗಿದೆ ಎಂದು ಕೇಂದ್ರ ವಲಯ ಐಜಿಪಿ ಲಾಬೂ ರಾಮ್ ಶ್ಲಾಘಿಸಿದರು. ಶನಿವಾರ ಪಟ್ಟಣದ (Chikkanayakanahalli News) ಪೊಲೀಸ್ ಠಾಣೆಗೆ ವಾರ್ಷಿಕ ತಪಾಸಣೆಗಾಗಿ ಭೇಟಿ ನೀಡಿದ್ದ ಅವರು, ಸುಮಾರು ಮೂರು ಗಂಟೆಗಳ ಕಾಲ ಠಾಣೆಯ ಪ್ರತಿಯೊಂದು ವಿಭಾಗವನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಠಾಣೆಯಲ್ಲಿನ ಅಪರಾಧ ದಾಖಲೆಗಳು, ಪ್ರಕರಣಗಳ ಪಟ್ಟಿಗಳ ವಿವರವನ್ನು ಪರಿಶೀಲಿಸಲಾಗಿದೆ. ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಸ್ಥಳೀಯ ಅಧಿಕಾರಿಗಳು ತೋರಿರುವ ಆಸಕ್ತಿ ಶ್ಲಾಘನೀಯ ಎಂದು ತಿಳಿಸಿದ ಅವರು, ಇದೇ ಶಿಸ್ತನ್ನು ಮುಂದೆಯೂ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಠಾಣೆಗೆ ಬರುವ ಜನಸಾಮಾನ್ಯರ ದೂರುಗಳಿಗೆ ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸಬೇಕು. ಸಾರ್ವಜನಿಕರು ಸಂಕಷ್ಟದಲ್ಲಿದ್ದಾಗ ಪೊಲೀಸ್ ಠಾಣೆಗಳು ಭರವಸೆ ಕೇಂದ್ರಗಳಾಗಿ ಕೆಲಸ ಮಾಡಬೇಕು. ಈ ಮೂಲಕ ಇಲಾಖೆಯ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಮದ್ಯ ಅಕ್ರಮ ಮಾರಾಟ ಸೇರಿದಂತೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ದ ಶೂನ್ಯ ಸಹನೆ ಹೊಂದಿರಬೇಕು. ಅಂತಹವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ಗಣಿ ಬಾಧಿತ ಅನುದಾನದಲ್ಲಿ ಸಿಸಿಟಿವಿ ಅಳವಡಿಕೆಗೆ ಮನವಿ
ಪಟ್ಟಣದ ಪ್ರಮುಖ ರಸ್ತೆಗಳು ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಗಣಿ ಬಾಧಿತ ಪ್ರದೇಶದ ಅನುದಾನ ಬಳಸಿಕೊಳ್ಳುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಇದೇ ವೇಳೆ ಐಜಿಪಿ ಅವರಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಲಾಬೂ ರಾಮ್ ಅವರು, ಸಿಸಿಟಿವಿ ಅಳವಡಿಕೆಯಿಂದ ಅಪರಾಧ ತಡೆಗೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಹಕಾರಿಯಾಗಲಿದೆ. ಈ ಪ್ರಸ್ತಾವನೆಯನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ವಿಶ್ವೇಶ್ವರ ಭಟ್ ಕರೆ
ಠಾಣೆಗೆ ಆಗಮಿಸಿದ ಐಜಿಪಿ ಅವರಿಗೆ ಪೋಲೀಸರು ಸಾಂಪ್ರಾದಾಯಿಕ ಗೌರವ ವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೋಲೀಸ್ ಅಧೀಕ್ಷಕ ಪುರುಷೋತ್ತಮ್, ತಿಪಟೂರು ಡಿವೈಎಸ್ಪಿ ಜಯಲಕ್ಷ್ಮಮ್ಮ, ಸಿಪಿಐ ಜನಾರ್ಧನ್, ಪಿಎಸ್‌ಐಗಳಾದ ಹೇಮಂತ್, ದ್ರಾಕ್ಷಾಯಿಣಿ ಹಾಗು ಠಾಣಾ ಸಿಬ್ಬಂದಿ ಇದ್ದರು. ಈ ವೇಳೆ ದಲಿತ ಸಂಘಟನೆಗಳ ಮುಖಂಡರಾದ ಯರೇಕಟ್ಟೆ ರಮೇಶ್, ಬೇವಿನಹಳ್ಳಿ ಚನ್ನಬಸವಯ್ಯ ಉಪಸ್ಥಿತರಿದ್ದರು.