ತುಮಕೂರು: ಈ ಬಾರಿಯ ಮೈಸೂರು ದಸರಾ ಉತ್ಸವದಲ್ಲಿ ಜಿಲ್ಲೆಯ ಸಂಸ್ಕೃತಿ, ಪರಂಪರೆ ಮತ್ತು ಕಲೆ ಬಿಂಬಿಸುವ ಸ್ತಬ್ಧಚಿತ್ರವನ್ನು ಆಯ್ಕೆ ಸಮಿತಿಯು ತಿರಸ್ಕರಿಸಿರುವುದಕ್ಕೆ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಡಾ. ಧನಿಯಾಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ತುಮಕೂರಿನ ಹಿರಿಯ 60ಕ್ಕೂ ಹೆಚ್ಚು ಕಲಾವಿದರ ತಂಡ ದಸರಾ ಉತ್ಸವಕ್ಕಾಗಿಯೇ 'ಕಲ್ಪತರು ನಾಡಿನ ಪರಂಪರೆ' ಸಾರುವ ಸುಂದರ ಸ್ತಬ್ಧಚಿತ್ರವನ್ನು ಸಿದ್ಧಪಡಿಸಿತ್ತು. ಆದರೆ ಸಮಿತಿಯು ಇದನ್ನು ತಿರಸ್ಕರಿಸಿರುವುದು ಜಿಲ್ಲೆಗೆ ಹಾಗೂ ಕಲಾವಿದರಿಗೆ ಮಾಡಿರುವ ಅವಮಾನ ಎಂದು ಆಕ್ಷೇಪಿಸಿದ್ದಾರೆ.
ಇದನ್ನೂ ಓದಿ: Tumkur News: ತೋಟದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದು ಸಿಕ್ಕಿಬಿದ್ದ ಪೊಲೀಸ್ ಸಿಬ್ಬಂದಿಯ ಪುತ್ರ!
ಪ್ರಮುಖ ಆಕ್ಷೇಪಗಳು ಹಾಗೂ ಮುಖ್ಯಾಂಶಗಳು:
ಕಲ್ಪತರು ನಾಡಿಗೆ ಅವಮಾನ: ಅಕ್ಷರ ಮತ್ತು ಅನ್ನ ದಾಸೋಹಕ್ಕೆ ಹೆಸರಾದ ಸಿದ್ಧಗಂಗಾ ಕ್ಷೇತ್ರ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಗಳ ಸೇವಾ ಸಾಧನೆ ಹಾಗೂ ಸಾಹಿತ್ಯ-ಶೈಕ್ಷಣಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿರುವ ರಾಜ್ಯದ ಎರಡನೇ ದೊಡ್ಡ ಜಿಲ್ಲೆಯ ಹೆಮ್ಮೆಯನ್ನು ತಳ್ಳಿ ಹಾಕಿರುವುದು ದಸರಾ ಆಯ್ಕೆ ಸಮಿತಿಯ ತಾತ್ಸಾರ ಧೋರಣೆಯನ್ನು ತೋರಿಸುತ್ತದೆ ಎಂದು ಡಾ.ಧನಿಯಾ ಕುಮಾರ್ ಟೀಕಿಸಿದ್ದಾರೆ.
ರಾಜಕೀಯ ಹಸ್ತಕ್ಷೇಪ ಶಂಕೆ: ಕಲಾವಿದರ ಹೆಸರಿನಲ್ಲಿ ಕೆಲ ರಾಜಕೀಯ ವ್ಯಕ್ತಿಗಳ ಶಿಫಾರಸು ಮತ್ತು ಅಧಿಕಾರಿಗಳ ಬೆಂಬಲದಿಂದ ಕಾನೂನು-ನಿಯಮ ಮೀರಿ ಹಣ ಮಾಡುವ ದುರ್ಉದ್ದೇಶ ಹಾಗೂ ದೊಡ್ಡ ಲಬಿಯ ಕುತಂತ್ರಗಳು ಇದರ ಹಿಂದೆ ನಡೆಯುತ್ತಿವೆಯೇ ಎಂಬ ಅನುಮಾನ ಮೂಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮರುಪರಿಶೀಲನೆಗೆ ಆಗ್ರಹ: ಕೂಡಲೇ ದಸರಾ ಆಯ್ಕೆ ಸಮಿತಿಯು ಈ ನಿರ್ಧಾರವನ್ನು ಮರು ಪರಿಶೀಲಿಸಿ, ತುಮಕೂರು ಜಿಲ್ಲೆಯ ಸ್ತಬ್ಧಚಿತ್ರವು ದಸರಾದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.