ಚಿಕ್ಕನಾಯಕನಹಳ್ಳಿ: ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 141ನೇ ಹಾಗೂ ಭಾರತೀಯ ಸೇವಾದಳದ 103ನೇ ಸಂಸ್ಥಾಪನಾ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.
ಮಾಜಿ ಶಾಸಕರಾದ ಕೆ. ಎಸ್. ಕಿರಣ್ ಕುಮಾರ್ ರವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರ ಮದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸಿ. ಡಿ. ಚಂದ್ರಶೇಖರ್ ವಹಿಸಿದ್ದರು. ಆರಂಭದಲ್ಲಿ ಕಾಂಗ್ರೆಸ್ ಧ್ವಜಾರೋಹಣ ನೆರವೇರಿಸಿದ ನಂತರ, ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರು ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ ಮಾಜಿ ಪ್ರಧಾನಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
ಇದನ್ನೂ ಓದಿ: Chikkanayakanahalli News: ಮಹಿಳೆಗೆ ಮಹಿಳೆಯೇ ಸ್ಫೂರ್ತಿ: ತಹಸೀಲ್ದಾರ್ ಮಮತಾ ಎಂ.
ದೇಶದ ಏಳಿಗೆಗೆ ಕಾಂಗ್ರೆಸ್ ಕೊಡುಗೆ ಅಪಾರ: ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, "ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷವು ಆರು ಜನ ಪ್ರಧಾನ ಮಂತ್ರಿಗಳ ಮೂಲಕ ದೇಶವನ್ನು ಸಮೃದ್ಧಿಯತ್ತ ಮುನ್ನಡೆಸಿದೆ. ನೆಹರು ರವರ ಪಂಚವಾರ್ಷಿಕ ಯೋಜನೆಗಳು ಮತ್ತು ಕೈಗಾರಿಕಾ ಕ್ರಾಂತಿ ದೇಶದ ಬಲಿಷ್ಠ ಅಡಿಪಾಯಕ್ಕೆ ಕಾರಣವಾದರೆ, ಲಾಲ್ ಬಹುದ್ದೂರ್ ಶಾಸ್ತ್ರಿ ಯವರ 'ಜೈ ಜವಾನ್ ಜೈ ಕಿಸಾನ್' ಘೋಷಣೆ ರೈತ ಮತ್ತು ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬಿತು," ಎಂದು ಸ್ಮರಿಸಿದರು.
ಇಂದಿರಾ ಗಾಂಧಿಯವರ ಹಸಿರು ಕ್ರಾಂತಿ, ಉಳುವವನಿಗೆ ಭೂಮಿ ಯೋಜನೆ, ಬಾಂಗ್ಲಾ ವಿಮೋಚನೆ ಮತ್ತು ರಾಜೀವ್ ಗಾಂಧಿಯವರ ಮಾಹಿತಿ ತಂತ್ರಜ್ಞಾನ ಕ್ರಾಂತಿ ಹಾಗೂ 18 ವರ್ಷಕ್ಕೆ ಮತದಾನದ ಹಕ್ಕು ನೀಡಿದ ಸುಧಾರಣೆಗಳನ್ನು ವರದಿಯಲ್ಲಿ ಶ್ಲಾಘಿಸಲಾಯಿತು. ಹಾಗೆಯೇ ಪಿ.ವಿ. ನರಸಿಂಹ ರಾವ್ ಮತ್ತು ಡಾ. ಮನಮೋಹನ್ ಸಿಂಗ್ ಅವರ ಆರ್ಥಿಕ ಸುಧಾರಣೆಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಸುಭದ್ರಗೊಳಿಸಿವೆ ಎಂದು ತಿಳಿಸಿದರು.
ಉಪಸ್ಥಿತರಿದ್ದ ಪ್ರಮುಖರು: ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಸೇವಾದಳ ಕಾರ್ಯದರ್ಶಿ ಕೃಷ್ಣೆ ಗೌಡರು, ಸೇವಾದಳ ಅಧ್ಯಕ್ಷರಾದ ಕಾತ್ರಿಕೆಹಾಳ್ ಗೋವಿಂದ ರಾಜು, ಪರಿಶಿಷ್ಟ ಘಟಕದ ಅಧ್ಯಕ್ಷ ಅಗಸರಹಳ್ಳಿ ನರಸಿಂಹಮೂರ್ತಿ, ಬೀದಿ ಬದಿ ವ್ಯಾಪಾರಿ ಘಟಕದ ಅಧ್ಯಕ್ಷ ಲಕ್ಷ್ಮಿಪುರ ಮಂಜುನಾಥ್, ಉಪಾಧ್ಯಕ್ಷ ಮೆಬುಬ್ ಬಾಬು, ಪುರಸಭೆ ಸದಸ್ಯರಾದ ಸುಗಂಧ ರಾಜ್, ಸಿ.ಜಿ. ಚಂದ್ರಶೇಖರ್, ಸೇವಾದಳದ ಕರಿಯಪ್ಪ, ಸಿಂಗದಹಳ್ಳಿ ನಾಗಣ್ಣ, ಸೋಮನಹಳ್ಳಿ ರಾಜು, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಮೊಹಮ್ಮದ್ ಜಾಕಿರ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.