ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi News: ವ್ಯಕ್ತಿತ್ವ ವಿಕಸನಕ್ಕೆ ಧರ್ಮಸ್ಥಳ ಸಂಸ್ಥೆ : ಭಾರತಿ ಶ್ರೀನಿವಾಸ್

ಧರ್ಮಸ್ಥಳ ಶ್ರೀ ವೀರೇಂದ್ರ ಹೆಗಡೆ ಅವರ ಮುಂದಾಲೋಚನೆಯ ಫಲ ಮಹಿಳೆಯರ ಸ್ವಸಹಾಯ ಸಂಘ ಇಂದು ರಾಜ್ಯದಲ್ಲಿ ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಘನತೆಗೆ ಸಾಕ್ಷಿಯಾಗಿದೆ. ಗುಡಿ ಕೈಗಾರಿಕೆ ಜೊತೆ ಹೈನುಗಾರಿಕೆಯಲ್ಲಿ ಸಹ ಮಹಿಳೆಯರು ತಮ್ಮದೇ ಸ್ವಾಭಿಮಾನ ಬಿಂಬಿಸಿದ್ದಾರೆ ಎಂದ ಅವರು ಹಾಲು ಒಕ್ಕೂಟ, ಕೆಎಂಎಫ್ ನಂದಿನಿ ಮೂಲಕ ಮಹಿಳೆಯರಿಗೆ ಹೈನುಗಾರಿಕೆ ಬಗ್ಗೆ ವಿಶೇಷ ತರಬೇತಿ ಕಾರ್ಯಾಗಾರ ನಡೆಯುತ್ತಿದೆ

ಗುಬ್ಬಿ: ಕಳೆದ ನಾಲ್ಕು ದಶಕದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜದ ಅಭಿವೃದ್ದಿ ಜೊತೆ ಮಹಿಳೆಯರ ಸ್ವಾವಲಂಬಿ ಬದುಕು ಕಟ್ಟಿಕೊಡಲು ನಿರಂತರ ಕೆಲಸ ಮಾಡಿದೆ. ಆರ್ಥಿಕ ಸದೃಢತೆ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಅಡಿಪಾಯ ಹಾಕಿಕೊಟ್ಟಿದೆ. ಈ ಸಂಸ್ಥೆಯ ಕಾರ್ಯ ವೈಖರಿ ಶ್ಲಾಘನೀಯ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರಿಗೆ ಸ್ಪ ಉದ್ಯೋಗ ಇಡೀ ಕುಟುಂಬ ನಿರ್ವಹಣೆಗೆ ಮೂಲವಾಗಲಿದೆ. ತಮ್ಮ ಮಕ್ಕಳಿಗೂ ಸ್ಪ ಉದ್ಯೋಗ ವನ್ನು ಓದಿನ ಜೊತೆ ಕಲಿಸುವ ಮಹಿಳೆಗೆ ಆರ್ಥಿಕ ಸ್ವಾಂತಂತ್ರ್ಯ ದಕ್ಕಬೇಕು ಎಂದರು.

ಇದನ್ನೂ ಓದಿ: Dharmasthala Shivaratri: ಮಹಾಶಿವರಾತ್ರಿ ಸಡಗರ: ಧರ್ಮಸ್ಥಳದತ್ತ ಹರಿದುಬರುತ್ತಿರುವ ಪಾದಯಾತ್ರಿಗಳ ದಂಡು

ಧರ್ಮಸ್ಥಳ ಶ್ರೀ ವೀರೇಂದ್ರ ಹೆಗಡೆ ಅವರ ಮುಂದಾಲೋಚನೆಯ ಫಲ ಮಹಿಳೆಯರ ಸ್ವಸಹಾಯ ಸಂಘ ಇಂದು ರಾಜ್ಯದಲ್ಲಿ ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಘನತೆಗೆ ಸಾಕ್ಷಿಯಾಗಿದೆ. ಗುಡಿ ಕೈಗಾರಿಕೆ ಜೊತೆ ಹೈನುಗಾರಿಕೆಯಲ್ಲಿ ಸಹ ಮಹಿಳೆಯರು ತಮ್ಮದೇ ಸ್ವಾಭಿಮಾನ ಬಿಂಬಿಸಿದ್ದಾರೆ ಎಂದ ಅವರು ಹಾಲು ಒಕ್ಕೂಟ, ಕೆಎಂಎಫ್ ನಂದಿನಿ ಮೂಲಕ ಮಹಿಳೆಯರಿಗೆ ಹೈನುಗಾರಿಕೆ ಬಗ್ಗೆ ವಿಶೇಷ ತರಬೇತಿ ಕಾರ್ಯಾಗಾರ ನಡೆಯುತ್ತಿದೆ. ಈ ಕಾರ್ಯಕ್ರಮ ತಾಲ್ಲೂಕಿನ ಮಹಿಳೆಯರು ಪಡೆದು ತಮ್ಮ ಬದುಕಿನ ಸ್ಥಿತಿ ಸುಧಾರಿಸಿಕೊಳ್ಳಿ. ಸ್ವಯಂ ಉದ್ಯೋಗ ಕೌಶಲ್ಯವನ್ನು ಕಲಿತು ಮನೆಯಲ್ಲೇ ಗಳಿಕೆ ಮಾಡುವ ಕೆಲಸವನ್ನು ಮಾಡುವಂತೆ ಕರೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೆಶಕ ಸತೀಶ್ ಸುವರ್ಣ ಮಾತ ನಾಡಿ, ರಾಜ್ಯದಲ್ಲಿ ಮೂರು ಕೋಟಿ ಜನರನ್ನು ತಲುಪಿರುವ ನಮ್ಮ ಸಂಸ್ಥೆ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸಿ ಬದುಕು ಕಟ್ಟಿಕೊಡುತ್ತವೆ. ಆರ್ಥಿಕ ಚಟುವಟಿಕೆ ಜೊತೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ ಸಹ ನಡೆಸುತ್ತೇವೆ. ಕೆರೆಗಳ ಅಭಿವೃದ್ಧಿ, ವಾತ್ಸಲ್ಯ ಮನೆ, ಪುರಾತನ ದೇವಾಲಯ ಅಭಿವೃದ್ದಿ, ಅಶಕ್ತರಿಗೆ ಮಾಸಾಶನ ಹೀಗೆ ಅನೇಕ 50 ಲಕ್ಷ ಕಾರ್ಯ ಕ್ರಮ ನಿರಂತರ ಮಾಡಿದ್ದೇವೆ. ಗುಬ್ಬಿ ತಾಲ್ಲೂಕಿಗೆ ಈವರೆವಿಗೂ 85 ಕೋಟಿ ಹಣ ವಿನಿಯೋಗ ವಾಗಿದೆ. ಕ್ಷೀರ ಕ್ರಾಂತಿಗೆ ರಾಜ್ಯದಲ್ಲಿ 5700 ಡೈರಿಗೆ ಸಹಾಯ ಮಾಡಿದ್ದು, ಗುಬ್ಬಿ ತಾಲ್ಲೂಕಿನಲ್ಲಿ 72 ಡೈರಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದರು.

ಅನಿಕೇತನ ಟ್ರಸ್ಟ್ ಸಮುದಾಯ ವೈದ್ಯಕೀಯ ತಜ್ಞೆ ಡಾ.ಯಮುನಾ ಮಾತನಾಡಿ ಮಹಿಳೆಯರ ಆರೋಗ್ಯ ಕುಟುಂಬದ ಆರೋಗ್ಯವಿದ್ದಂತೆ. ಬದಲಾಗುವ ಜೀವನ ಶೈಲಿಯಿಂದ ನಮ್ಮಲ್ಲಿ ಅನಾರೋಗ್ಯ ಹೆಚ್ಚಾಗಿದೆ. ಈ ಪೈಕಿ ಕ್ಯಾನ್ಸರ್ ಅಂತಹ ಮಾರಕಗಳ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಆಹಾರ, ವಿಹಾರ, ಆಚಾರ ಹಾಗೂ ವಿಚಾರ ಬದಲಾಯಿಸಿಕೊಂಡು ಆರೋಗ್ಯವಂತ ಸಮಾಜ ಕಟ್ಟಬೇಕಿದೆ ಎಂದು ಆರೋಗ್ಯ ಸಲಹೆ ನೀಡಿದರು.

ಪ್ರೊ.ಕೆ.ಪುನೀತ್ ಮಾತನಾಡಿ ಮೈ ಮುರಿದು ದುಡಿಯುತ್ತೇನೆ ಎನ್ನುತ್ತಲೇ ಕೆಲವರು ಆರೋಗ್ಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ನನ್ನನ್ನು ನಾನೇ ತಿಳಿದುಕೊಳ್ಳುವುದು ಯೋಗ ಎನ್ನಲಾಗುವುದು. ಆಹಾರ ವ್ಯಾಯಾಮ ಜೊತೆ ಪತಂಜಲಿಯ ಅಷ್ಟಾಂಗ ಯೋಗ ಕಲಿಕೆ ಎಲ್ಲರಿಗೂ ಅತ್ಯಗತ್ಯ ಎಂದು ಯೋಗ ಧ್ಯಾನ ಬಗ್ಗೆ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಸಾಧನೆಗೈದ ಮಹಿಳಾ ಸಂಘಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯ ಕ್ರಮದಲ್ಲಿ ಸ್ಪ ಉದ್ಯೋಗ ಮಳಿಗೆಗಳು, ವಿಶೇಷ ಆರತಿ ತಟ್ಟೆ, ಪುಷ್ಪ ಗುಚ್ಛ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮನಸೆಳೆದವು.

ವೇದಿಕೆಯಲ್ಲಿ ಎಸ್ ಎಲ್ ಆರ್ ಹಾಸ್ಪಿಟಲ್ ವ್ಯವಸ್ಥಾಪಕ ನಿರ್ದೇಶಕಿ ಎಚ್.ಎಸ್.ಮಹಾಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಯೋಜನಾಧಿಕಾರಿ ಜಯಂತಿ, ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿ ಜಯಲಕ್ಷ್ಮಿ ಇನ್ನಿತರರು ಇದ್ದರು.