ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Tumkur News: ಶೌಚಾಲಯದಲ್ಲಿ ಸಿರಿಂಜ್ ಪತ್ತೆ; ತುಮಕೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಡೋಪಿಂಗ್‌ ಶಂಕೆ

National Junior Athletics in Tumkur: ತುಮಕೂರಿನ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಜೂನಿಯರ್ ಅಂಡರ್-20 ಅಥ್ಲೆಟಿಕ್ಸ್ ಫೆಡರೇಶನ್ ಕ್ರೀಡಾಕೂಟ ಆಯೋಜಿಸಲಾಗಿದೆ.ಕ್ರೀಡಾಂಗಣದ ಶೌಚಾಲಯದಲ್ಲಿ ಬಳಸಿದ ಸ್ಥಿತಿಯಲ್ಲಿ ಸಿರಿಂಜ್ ಹಾಗೂ ಸೂಜಿಗಳು ಪತ್ತೆಯಾಗಿರುವುದರಿಂದ ಡೋಪಿಂಗ್ ಶಂಕೆ ವ್ಯಕ್ತವಾಗಿದೆ.

ತುಮಕೂರು ಕ್ರೀಡಾಂಗಣದಲ್ಲಿ ಪತ್ತೆಯಾದ ಸಿರಿಂಜ್‌ಗಳು.

ತುಮಕೂರು: ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ 24ನೇ ರಾಷ್ಟ್ರೀಯ ಜೂನಿಯರ್ ಅಂಡರ್-20 ಅಥ್ಲೆಟಿಕ್ಸ್ ಫೆಡರೇಶನ್ ಕ್ರೀಡಾಕೂಟದ (24th National Junior (U20) Athletics Federation Competition 2026) ಮೊದಲ ದಿನವೇ ಡೋಪಿಂಗ್ (Doping) ಭೂತದ (ಉದ್ದೀಪನ ಮದ್ದು) ಆತಂಕ ಎದುರಾಗಿದೆ. ಕ್ರೀಡಾಂಗಣದ ಶೌಚಾಲಯದಲ್ಲಿ ಬಳಸಿದ ಸ್ಥಿತಿಯಲ್ಲಿ ಸಿರಿಂಜ್ ಹಾಗೂ ಸೂಜಿಗಳು ಪತ್ತೆಯಾಗಿರುವುದು ಕ್ರೀಡಾ ವಲಯದಲ್ಲಿ ತಲ್ಲಣ ಮೂಡಿಸಿದ್ದು, ಕ್ರೀಡಾಕೂಟದ ಪಾರದರ್ಶಕತೆಯ ಬಗ್ಗೆ ಅನುಮಾನ ಮೂಡಿದೆ.

ಗೃಹ ಸಚಿವ ಪರಮೇಶ್ವರ್ ಅವರಿಂದ ಶುಕ್ರವಾರ ಅದ್ಧೂರಿಯಾಗಿ ಚಾಲನೆ ಪಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ, ದೇಶದ ವಿವಿಧ ರಾಜ್ಯಗಳ ನೂರಾರು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಆದರೆ, ಪಂದ್ಯಾವಳಿ ಆರಂಭವಾದ ಕೆಲವೇ ಗಂಟೆಗಳಲ್ಲಿ ಕ್ರೀಡಾಂಗಣದ ಶೌಚಾಲಯದಲ್ಲಿ 5ಕ್ಕೂ ಹೆಚ್ಚು ಸಿರಿಂಜ್‌ಗಳು ಪತ್ತೆಯಾಗಿವೆ. ಶೌಚಾಲಯದ ಒಳಭಾಗದಲ್ಲಿ 3 ಸಿರಿಂಜ್‌ಗಳು ಪತ್ತೆಯಾಗಿದ್ದರೆ, ಶೌಚಾಲಯದ ಹೊರಭಾಗದ ಆವರಣದಲ್ಲಿ 2 ಸಿರಿಂಜ್‌ಗಳು ಬಿದ್ದಿರುವುದು ಕಂಡುಬಂದಿದೆ.

1,380 ಯುವ ಕ್ರೀಡಾಪಟುಗಳು ಭಾಗಿ

ದೇಶದ 28 ರಾಜ್ಯಗಳಿಂದ 1,380 ಯುವ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದು, 40 ವಿವಿಧ ಸ್ಪರ್ಧೆಗಳು ನಡೆಯಲಿದೆ. ಕರ್ನಾಟಕ ರಾಜ್ಯದ 110 ಕ್ರೀಡಾಪಟುಗಳಲ್ಲಿ ತುಮಕೂರು ಜಿಲ್ಲೆಯ 10 ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಮೇ 28ರಿಂದ 31ರವರೆಗೆ ಚೀನಾದ ಹಾಂಕಾಂಗ್‌ನಲ್ಲಿ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್, ಆ. 5ರಿಂದ 9ರವರೆಗೆ ಅಮೆರಿಕದ ಒರೆಗಾನ್‌ನಲ್ಲಿ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಜರುಗಲಿದ್ದು, ಈ ಎರಡು ಕ್ರೀಡಾಕೂಟಗಳಿಗೆ ಭಾರತ ಜೂನಿಯರ್ ತಂಡವನ್ನು ಆಯ್ಕೆ ಮಾನದಂಡವೇ ಈ ಕ್ರೀಡಾಕೂಟವಾಗಿದೆ. ಬೆಳಗ್ಗೆ 6ರಿಂದ 10.30ರವರೆಗೆ, ಮಧ್ಯಾಹ್ನ 3.30ರಿಂದ ಆರಂಭವಾಗುವ ಸ್ಪರ್ಧೆಗಳು ರಾತ್ರಿ 8ಕ್ಕೆ ಮುಕ್ತಾಯವಾಗಲಿವೆ.

ಬೆಂಗಳೂರಿನಲ್ಲಿ ಕಟ್ಟಡಗಳ ಎತ್ತರದ ನಿರ್ಬಂಧ ಸಡಿಲಿಸಿ; ಕೇಂದ್ರ ರಕ್ಷಣಾ ಸಚಿವರಿಗೆ ಡಿ.ಕೆ.ಶಿವಕುಮಾರ್‌ ಮನವಿ

ಅಧಿಕಾರಿಗಳಲ್ಲಿ ಹೆಚ್ಚಿದ ಆತಂಕ

ಸಿರಿಂಜ್‌ಗಳು ಪತ್ತೆಯಾದ ಬೆನ್ನಲ್ಲೇ ಕ್ರೀಡಾ ಸಂಘಟಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಆತಂಕ ಮನೆಮಾಡಿದೆ. ರಾಷ್ಟ್ರೀಯ ಮಟ್ಟದ ಕೂಟವೊಂದರಲ್ಲಿ ಇಂತಹ ಗಂಭೀರ ಲೋಪ ಕಂಡುಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

image

ಸಿರಿಂಜ್‌ಗಳು ಪತ್ತೆಯಾದ ಬಗ್ಗೆ ಎನ್‌ಎಡಿಎಗೆ ಮಾಹಿತಿ ನೀಡಲಾಗುವುದು ಅವರು ಪರಿಶೀಲಿಸಿ, ತನಿಖೆ ನಡೆಸಲಿದ್ದಾರೆ. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಎನ್‌ಎಡಿಎದಿಂದ ಟೆಸ್ಟ್ ಮಾಡಲಾಗುತ್ತದೆ. ಒಂದು ಟೆಸ್ಟ್ 30 ರಿಂದ 40 ಸಾವಿರ ರೂ. ವೆಚ್ಚದ್ದಾಗಿರುತ್ತದೆ. ಅವರು ಬಾತ್ ರೂಂನಲ್ಲಿ ತೆಗೆದುಕೊಂಡಾಗ ಗೊತ್ತಾಗುವುದಿಲ್ಲ. ಖಂಡಿತ ಇದನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಕಾನೂನು ಬಾಹಿರವಾರವಾಗಿ ಚುಚ್ಚು ಮದ್ದು ಪಡೆದಿದ್ದರೇ ಎನ್‌ಎಡಿಎ ಕ್ರಮಕೈಗೊಳ್ಳಲಿದೆ. ಯಾರೇ ಸಿರಿಂಜ್ ತೆಗೆದುಕೊಂಡಿರುವುದು ಪತ್ತೆಯಾದರೆ ಅವರಿಗೆ ನಾಲ್ಕು ವರ್ಷ ಕ್ರೀಡೆಯಿಂದ ಬ್ಯಾನ್ ಮಾಡಲಾಗುವುದು.

| ಸತ್ಯನಾರಾಯಣ, ಕ್ರೀಡಾಕೂಟದ ನಿರ್ದೇಶಕ