ಮಧುಗಿರಿ, ಜ.17: ತಾಲೂಕಿನ ತಿಮ್ಲಾಪುರ ಅಭಯಾರಣ್ಯ ಪ್ರದೇಶದಲ್ಲಿ (Madhugiri News) ಅರಣ್ಯ ಇಲಾಖೆ ವತಿಯಿಂದ ಡಿ.ವಿ.ಹಳ್ಳಿ ಮತ್ತು ಸೋದೇನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶನಿವಾರ ಬೆಂಕಿ ನಂದಿಸುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿ ಸುರೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾಡಿಗೆ ಬೆಂಕಿ ಬಿದ್ದರೆ ಅದನ್ನು ನಂದಿಸುವ ಕೆಲಸವನ್ನು ಯಾವ ರೀತಿ ಮಾಡಬೇಕೆಂದು ಶಾಲೆಯ ಮಕ್ಕಳಿಗೆ ಅರಿವು ಮೂಡಿಸುವ ಕೆಲಸವನ್ನು ಅರಣ್ಯ ಇಲಾಖೆ ನಿರಂತರವಾಗಿ ಮಾಡುತ್ತಿದೆ. ಕಾಡು ಎಲ್ಲರ ಜೀವಾಳವಾಗಿದ್ದು, ಅದನ್ನು ರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬರದ್ದಾಗಿದೆ. ಪ್ರಕೃತಿಯನ್ನು ಉಳಿಸಿದರೆ ನಮಗೆ ಶುದ್ಧ ಗಾಳಿ, ಸಮರ್ಪಕ ಮಳೆ ಮತ್ತು ಆರೋಗ್ಯಕರ ಜೀವನ ದೊರೆಯುತ್ತದೆ. ಕಾಡು ನಾಶವಾದರೆ ಪರಿಸರ ಅಸಮತೋಲನ ಉಂಟಾಗಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಕಾಡು ಮತ್ತು ಪ್ರಕೃತಿಯನ್ನು ಕಾಪಾಡುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಬೆಂಕಿಯಿಂದ ಉಂಟಾಗುವ ಅಪಾಯಗಳು ಹಾಗೂ ಅದನ್ನು ತಡೆಯುವ ಅಗತ್ಯತೆ ಕುರಿತು ಮಾಹಿತಿ ನೀಡಿದರು. ಕಾಡಿಗೆ ಬೆಂಕಿ ತಗುಲಿದರೆ ಹಿಂದಿನ ದಿನಗಳಲ್ಲಿ ಸೊಪ್ಪಿನಿಂದ ಬಡಿದು ಬೆಂಕಿಯನ್ನು ಆರಿಸಲಾಗುತ್ತಿತ್ತು. ಆದರೆ ದಿನಗಳಲ್ಲಿ ಏರ್ ಮಿಷನ್ ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಮೂಲಕ ವೇಗವಾಗಿ ಉರಿಯುವ ಬೆಂಕಿಯನ್ನು ತಕ್ಷಣವೇ ನಂದಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಮಧುಗಿರಿಯ ಶ್ರೀ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ; ಜ.22 ರಿಂದ ಫೆ. 4 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಯಲ್ಲಪ್ಪ ಹಂಚಿನಾಳ್, ಚಿದಾನಂದ, ಪರಶುರಾಮ್, ರಂಗನಾಥ, ಪುಟ್ಟರಾಜು, ರಮೇಶ್, ಸೋದೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಗೋವಿಂದರಾಜು, ಶಿಕ್ಷಕರಾದ ಮಂಜುನಾಥ್, ಪವನ್ ಕುಮಾರ್, ನಿರಂಜನ್, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.