ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

V N Reddy: ಸರ್ಕಾರಿ ಗೌರವಗಳೊಂದಿಗೆ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್.ರೆಡ್ಡಿ ಅಂತ್ಯಸಂಸ್ಕಾರ

Pavagada News: ಗಡಿನಾಡು ಪಾವಗಡ ತಾಲೂಕಿನ ವೆಂಕಟಾಪುರದ ವಿ.ಎನ್.ರೆಡ್ಠಿ ಅವರಿಗೆ ಸುಮಾರು 103 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ಸೋಮವಾರ ಕೊನೆಯುಸಿರೆಳೆದಿದ್ದರು. ಇವರು ಚಿಕ್ಕ ವಯಸ್ಸಿಗೆ ಮಹಾತ್ಮ ಗಾಂಧಿ, ಲೋಕನಾಯಕ ಜಯಪ್ರಕಾಶ್ ನಾರಾಯಣ, ಡಾ.ರಾಮ್ ಮನೋಹರ್ ಲೋಹಿಯಾ ಮತ್ತಿತರರಿಂದ ಪ್ರಭಾವಿತರಾಗಿದ್ದರು.

ಸರ್ಕಾರಿ ಗೌರವಗಳೊಂದಿಗೆ ವಿ.ಎನ್.ರೆಡ್ಡಿ ಅಂತ್ಯಸಂಸ್ಕಾರ

-

Prabhakara R Prabhakara R Oct 28, 2025 6:49 PM

ಪಾವಗಡ, ಅ.28: ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ʼಪಾವಗಡ ಗಾಂಧಿʼ ಎಂದೇ ಹೆಸರುವಾಸಿಯಾದ ವಿ.ಎನ್.ರೆಡ್ಡಿ (V N Reddy) ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ನೆರವೇರಿತು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಭೇಟಿ ನೀಡಿ ಅಂತಿಮ ದರ್ಶನ ಪಡೆದು, ಜಿಲ್ಲಾಡಳಿತದ ಪರವಾಗಿ ಗೌರವ ಸಮರ್ಪಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಅವರು, ನಮ್ಮ ತುಮಕೂರು ಜಿಲ್ಲೆಯಲ್ಲಿ ಹಲವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಅಂತಹವರಲ್ಲಿ ಪಾವಗಡ ತಾಲೂಕಿನ ವಿ.ಎನ್.ರೆಡ್ಡಿ ಅವರು ಒಬ್ಬರಾಗಿದ್ದರು. ಅವರು ಸ್ವಾತಂತ್ರ್ಯ ನಂತರ ಸುಮಾರು ಮೂವತ್ತು ವರ್ಷಗಳ ಕಾಲ ಮಂಡಲ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಮ್ಮ ಜಿಲ್ಲಾಡಳಿತದ ವತಿಯಿಂದ ಗೌರವ ಸಮರ್ಪಣೆ ಮಾಡಲಾಗುತ್ತಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದರು.

ಇನ್ನು ಮಾಜಿ ಸಚಿವ ವೆಂಕಟರಮಣಪ್ಪ ಅವರು ಮಂಗಳವಾರ ಬೆಳಗ್ಗೆ ತಾಲೂಕಿನ ವೆಂಕಟಾಪುರ ಗ್ರಾಮದ ಮೃತರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ವಿ.ಎನ್.ರೆಡ್ಡಿಯವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ನಮಗೆಲ್ಲಾ ಮಾರ್ಗದರ್ಶಕರಾಗಿದ್ದರು. ಬಹಳ ಪ್ರಾಮಾಣಿಕರಾಗಿದ್ದ ಅವರು ಅಷ್ಟೇ ಹಠವಾದಿಯಾಗಿದ್ದರು. ಯಾವಾಗಲೂ ತಾಲೂಕಿನ ಅಭಿವೃದ್ಧಿಯ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಿದ್ದರು. ಅಂತಹ ಒಬ್ಬ ನಾಯಕರನ್ನು ಇಂದು ಕಳೆದುಕೊಂಡಿದ್ದೇವೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.

ಇದೇ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್.ರೆಡ್ಡಿ ಅವರ ನಿಧನಕ್ಕೆ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ರವಿ ಮತ್ತಿತರರು ಕೂಡ ಸಂತಾಪ ಸೂಚಿಸಿ, ಗೌರವ ಸಮರ್ಪಣೆ ಮಾಡಿದರು. ಈ ವೇಳೆ ಹಿರಿಯ ಅಧಿಕಾರಿಗಳು, ಇತರೆ ಸ್ಥಳೀಯ ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ.

image

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್ ರೆಡ್ಡಿ ಅವರು ನಮ್ಮ ಊರಿನವರು ಎಂಬುವುದು ನನಗೆ ಗೌರವದ ವಿಷಯ. ವಿ.ಎನ್ ರೆಡ್ಡಿ ಅವರ ನಿಧನದ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರಿ ಗೌರವದಿಂದ ಅವರ ಅಂತ್ಯ ಸಂಸ್ಕಾರ ನಡೆಸಲು ತಿಳಿಸಲಾಗಿತ್ತು. ಜಿಲ್ಲಾಡಳಿತವು ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ಅಂತ್ಯಸಂಸ್ಕಾರ ನಡೆಸಿಕೊಟ್ಟಿದೆ.

ವಿ.ಎಸ್ ಉಗ್ರಪ್ಪ, ಮಾಜಿ ಸಂಸದ

ಪಾವಗಡ ತಾಲೂಕಿನ ‘ಗಾಂಧಿ’ ವಿ.ಎನ್.ರೆಡ್ಡಿ

ಗಡಿನಾಡು ವೆಂಕಟಾಪುರದ ವಿ.ಎನ್.ರೆಡ್ಠಿ ಅವರಿಗೆ ಸುಮಾರು 103 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ಸೋಮವಾರ ಕೊನೆಯುಸಿರೆಳೆದಿದ್ದರು.

ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ್ದ ತಾಲೂಕಿನ ಗಾಂಧಿವಾದಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರಾದ ಅವರು, ವಿದ್ಯಾರ್ಥಿ ಜೀವನದಲ್ಲಿ ಒಂದಲ್ಲ ಒಂದು ಕ್ರಿಯಾತ್ಮಕ ಹಾಗೂ ಸಂಘಟಿತ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅನೇಕ ದೇಶ ಭಕ್ತರು, ರಾಷ್ಟ್ರನಾಯಕರ ಸಂಪರ್ಕ ಪಡೆದಿದ್ದರು. ಚಿಕ್ಕ ವಯಸ್ಸಿಗೆ ಮಹಾತ್ಮ ಗಾಂಧಿ, ಲೋಕನಾಯಕ ಜಯಪ್ರಕಾಶ್ ನಾರಾಯಣ, ಡಾ.ರಾಮ್ ಮನೋಹರ್ ಲೋಹಿಯಾ ಮತ್ತಿತರರಿಂದ ಪ್ರಭಾವಿತರಾಗಿದ್ದರು. ಹಲವು ಮಂದಿ ಗಾಂಧಿವಾದಿಗಳಲ್ಲಿ ಇವರು ಸಹ ಪ್ರಮುಖರು.

1923ರಲ್ಲಿ ವೆಂಕಟಾಪುರದಲ್ಲಿ ಯರಪ್ಪರೆಡ್ಡಿ–ಲಕ್ಷಮ್ಮ ದಂಪತಿಗೆ ಜನಿಸಿದ ವಿ.ಎನ್. ರೆಡ್ಡಿಯವರು ಮಹಾತ್ಮ ಗಾಂಧಿ ಅವರ ಜೀವನವನ್ನೇ ಅಳವಡಿಸಿಕೊಂಡು ಪಾವಗಡ ತಾಲೂಕಿನ ‘ಗಾಂಧಿ’ ಎಂದು ಖ್ಯಾತರಾಗಿದ್ದರು. 1942ರ ಸ್ವಾತಂತ್ರ್ಯ ಹೋರಾಟದ ವೇಳೆ ಮಹಾತ್ಮ ಗಾಂಧಿಜಿಗೆ ಪತ್ರ ಬರೆದಾಗ, ಅವರ ಕಾರ್ಯದರ್ಶಿ ಮಹಾದೇವದೇಶಾಯಿ ಅವರಿಂದ ಉತ್ತರ ಬಂದಿತ್ತು ಎಂದು ತಿಳಿದುಬಂದಿದೆ. ನಂತರ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಟ್ರೇಜರಿ ಕಚೇರಿಯನ್ನು ಧ್ವಂಸ ಮಾಡುವ ವೇಳೆ ಬಂಧಿತರಾಗಿ ತುಮಕೂರು, ಬಳಿಕ ಬೆಂಗಳೂರು ಸೆಂಟ್ರಲ್‌ ಜೈಲು ಮತ್ತು ವೈಟ್‌ಫೀಲ್ಡ್‌ ಕಾರಾಗೃಹಗಳಲ್ಲಿ 32 ದಿನಗಳ ಕಾಲ ಶಿಕ್ಷೆ ಅನುಭವಿಸಿದರು.

ಈ ಸುದ್ದಿಯನ್ನೂ ಓದಿ | V N Reddy: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ವಿ.ಎನ್. ರೆಡ್ಡಿ ನಿಧನ

ಗಾಂಧೀಜಿ ಅವರ “Go Back to Villages” ಕರೆಗೆ ಸ್ಪಂದಿಸಿದ ವಿ.ಎನ್. ರೆಡ್ಡಿ ಅವರು, ಹಳ್ಳಿಗೆ ಮರಳಿ 1946ರಿಂದ 30 ವರ್ಷಗಳ ಕಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಂತರ 10 ವರ್ಷಗಳ ಕಾಲ ತಾಲೂಕು ಮಂಡಲ ಬೋರ್ಡ್ ಅಧ್ಯಕ್ಷ ಮತ್ತು ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಬರಗಾಲ ನಿರ್ವಹಣೆ ಸೇರಿದಂತೆ ವಿವಿಧ ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು.