ಅಂದು ʻಅಯ್ಯʼ ಸಿನಿಮಾಗೆ ಬಂದ ಸ್ಥಿತಿಯೇ ʻಕೆಡಿʼ ಚಿತ್ರಕ್ಕೂ ಬರಬಹುದೇ? ʻಸೆರಗು ಸರ್ಸೆʼ ಹಾಡನ್ನು ಮೂಲೆಗೆ ಸರಿಸಿದ ಸಿನಿಪ್ರಿಯರು!
ʻಕೆಡಿʼ ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡು ಈಗ ವಿವಾದದ ಸುಳಿಗೆ ಸಿಲುಕಿದೆ. 2005ರಲ್ಲಿ ದರ್ಶನ್ ನಟನೆಯ 'ಅಯ್ಯ' ಚಿತ್ರದ ಹಾಡಿಗೆ ಸೆನ್ಸಾರ್ ಕತ್ತರಿ ಬಿದ್ದಂತೆ, ಈಗ 'ಕೆಡಿ' ಚಿತ್ರದ ಹಾಡಿಗೂ ಅದೇ ಸ್ಥಿತಿ ಬರಬಹುದೇ ಎಂಬ ಚರ್ಚೆ ಶುರುವಾಗಿದೆ. ಕಳಪೆ ಸಾಹಿತ್ಯದ ವಿರುದ್ಧ ಗಾಯಕ ಅರ್ಮಾನ್ ಮಲಿಕ್ ಸೇರಿದಂತೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ.
-
ʻಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನುʼ, ʻಏಳುಮಲೆ ಮ್ಯಾಲೇರಿ ಕುಂತ ನಮ್ಮ ಮಾದೇವʼ ಇನ್ನೂ ಮುಂತಾದ ಸೂಪರ್ ಹಿಟ್ ಹಾಡುಗಳನ್ನು ಬರೆದವರು ನಮ್ಮ ʻಜೋಗಿʼ ಪ್ರೇಮ್. ಯಾವುದಾದರೂ ಹಾಡನ್ನು ಜೋಗಿ ಪ್ರೇಮ್ ಬರೆದು ಹಾಡಿದ್ರೆ, ಅದರಲ್ಲೊಂದು ದೇಸಿ ಫೀಲ್ ಇರತ್ತೆ ಅನ್ನೋದು ಸಿನಿಪ್ರಿಯರ ಅಂಬೋಣ. ಆದರೆ ಇದೇ ಪ್ರೇಮ್ ಈಗ ಬರೆದಿರುವ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡನ್ನು ಕೇಳಿದವರು ʻಅಯ್ಯೋ, ದೇವ್ರೇ.. ಈ ಹಾಡನ್ನ ನಮ್ ಪ್ರೇಮ್ ಬರೆದಿದ್ದ" ಅಂತ ಬಾಯಿಮೇಲೆ ಬೆರಳಿಟ್ಕೊಳ್ತಿದ್ದಾರೆ!
ʻಅಯ್ಯʼ ಸಿನಿಮಾವನ್ನು ನೆನಪಿಸಿದ ʻಸೆರಗ ಸರ್ಸೆ’ ಹಾಡು
2005ರಲ್ಲಿ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಅಯ್ಯ' ಚಿತ್ರದಲ್ಲೂ ಇಂತಹದ್ದೊಂದು ಹಾಡು ಇತ್ತು. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಬರೆದು, ಮ್ಯೂಸಿಕ್ ಕಂಪೋಸ್ ಮಾಡಿದ್ದ "ಕೆಟ್ಟೋದೇ ಕೆಟ್ಟೋದೇ ಯಾಕ್ಹಿಂಗೆ ಕೆಟ್ಟೋದೆ.." ಎಂಬ ಹಾಡನ್ನು ಕೇಳಿ ಅಂದಿನ ಸೆನ್ಸಾರ್ ಮಂಡಳಿ ಸದಸ್ಯರು ದಿಗಿಲುಬಿದ್ದಿದ್ದರು. ಸಿನಿಮಾ ಬಿಡುಗಡೆಗೆ ಕೇವಲ ಎರಡು-ಮೂರು ದಿನಗಳಿರುವಾಗ ಸೆನ್ಸಾರ್ ಮಂಡಳಿ ಆ ಹಾಡಿಗೆ ಆಕ್ಷೇಪ ವ್ಯತ್ತಪಡಿಸಿ, ಕತ್ತರಿ ಹಾಕಿತ್ತು.
KD The Devil: ಕೆಡಿ ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಸಾಂಗ್ ರಿಲೀಸ್! ನೋರಾ ಫತೇಹಿ ಭರ್ಜರಿ ಡ್ಯಾನ್ಸ್
ಸಂಕಷ್ಟಕ್ಕೆ ಸಿಲುಕಿದ ಚಿತ್ರತಂಡ ತಕ್ಷಣವೇ ಕೆ. ಕಲ್ಯಾಣ್ ಅವರ ಮೊರೆ ಹೋಯಿತು. ರಾತ್ರೋರಾತ್ರಿ "ಕೆಟ್ಟೋದೇ ಕೆಟ್ಟೋದೇ.." ಸಾಲಿಗೆ ಬದಲಾಗಿ "ರಕ್ಷಿತಾ ರಕ್ಷಿತಾ ನನ್ ಕಿಸ್ಸು ಸಿಕ್ಕಿತಾ.. ದರ್ಶನ್ನು ದರ್ಶನ್ನು ನಿನ್ ಮಾತೇ ಚಿಕನ್ನು.." ಎಂದು ಸಾಹಿತ್ಯ ಬದಲಿಸಿ ರೆಕಾರ್ಡ್ ಮಾಡಲಾಯ್ತು. ಇಂದಿಗೂ ಆ ಹಾಡನ್ನು ಸೂಕ್ಷ್ಮವಾಗಿ ಗಮನಿಸಿದರೆ ದರ್ಶನ್ ಮತ್ತು ರಕ್ಷಿತಾ ಅವರ ಲಿಪ್ ಸಿಂಕ್ ಬದಲಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.
ಈಗ ಕೆಡಿಗೂ ಅಂಥದ್ದೇ ಸನ್ನಿವೇಶ ಎದುರಾಗಲಿದೆಯಾ?
ಈಗ ದಶಕಗಳ ನಂತರ ಅಂತಹದ್ದೇ ಒಂದು ಸನ್ನಿವೇಶ ಸೃಷ್ಟಿಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. 'ಕೆಡಿ' ಚಿತ್ರಕ್ಕಾಗಿ ಈಗ ಪ್ರೇಮ್ ಬರೆದಿರುವ 'ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ' ಹಾಡು ದೇಶಾದ್ಯಂತ ಸಿನಿಪ್ರಿಯರೆ ಕೆಂಗಣ್ಣಿಗೆ ಗುರಿಯಾಗಿದೆ. ಅಂದು 'ಅಯ್ಯ' ಚಿತ್ರದ ಹಾಡನ್ನು ಕತ್ತರಿಸಿದಂತೆ. ಈ ಬಾರಿ 'ಸರ್ಸೆ' ಹಾಡಿಗೂ ಸೆನ್ಸಾರ್ ಬ್ರೇಕ್ ಬೀಳುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಈಗಾಗಲೇ ಇಷ್ಟೊಂದು ದ್ವಂದ್ವರ್ಥ ಇರುವ ಹಾಡನ್ನು ಸೆನ್ಸಾರ್ ಮಂಡಳಿ ಕತ್ತರಿಸೋದಿಲ್ವಾ ಎಂದೆಲ್ಲಾ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಹಾಡು ಕೇಳಿ ಗರಂ ಆದ ಸಿನಿಪ್ರಿಯರು
"ಇಷ್ಟು ಕಳಪೆ ಲಿರಿಕ್ಸ್ ಇರುವ ಸಾಂಗ್ ಪ್ರೇಮ್ ಸಿನಿಮಾದಲ್ಲಿ ಇರುತ್ತದೆ ಅಂದುಕೊಂಡಿರಲಿಲ್ಲ. ಬೇಡುವನು ವರವನ್ನು ಕೊಡೆ ತಾಯಿ ಜನ್ಮವನು ಎಂಬಂತಹ ಉತ್ತಮ ಹಾಡು ಬರೆದ ಪ್ರೇಮ್ ಅವರಿಂದ ಇಷ್ಟು ಕೀಳು ಮಟ್ಟದ ಸಾಹಿತ್ಯ ಬಂದಿರುವುದು ಇದೇ ಮೊದಲು.." ಎಂದೆಲ್ಲಾ ಕಾಮೆಂಟ್‌ಗಳು ಬರುತ್ತಿವೆ. ಹಿಂದಿಯಲ್ಲಿ ಹಾಡು ಕೇಳಿದ ಪ್ರೇಕ್ಷಕರು ಕೂಡ ಗರಂ ಆಗಿದ್ದಾರೆ. ಹಿಂದಿಯಲ್ಲೂ ಹಾಡು ಕೇಳಿದ ಪ್ರೇಕ್ಷಕರು ಕೂಡ ಗರಂ ಆಗಿದ್ದಾರೆ.
ಅರ್ಮಾನ್ ಮಲಿಕ್ ಬೇಸರ
This showed up on my timeline and I had to replay it just to make sure I heard it right. Sad to see commercial songwriting hit a new low.. https://t.co/BMMABqblnW
— ARMAAN ✦ (@ArmaanMalik22) March 16, 2026
ಖ್ಯಾತ ಗಾಯಕ ಅರ್ಮಾನ್ ಮಲಿಕ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. "ಇದು ನನ್ನ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಂಡಿತು. ನಾನು ಅದನ್ನು ಸರಿಯಾಗಿ ಕೇಳಿದ್ದೇನೆ ಎಂದು ಖಚಿತಪಡಿಸಿಕೊಳ್ಳಲು ಅದನ್ನು ಮತ್ತೆ ಪ್ಲೇ ಮಾಡಬೇಕಾಯಿತು. ಕಮರ್ಷಿಯಲ್ ಲಿರಿಕ್ಸ್ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿರುವುದನ್ನು ನೋಡಲು ದುಃಖವಾಗುತ್ತಿದೆ" ಎಂದು ಹೇಳಿದ್ಧಾರೆ.