ಗುಬ್ಬಿ: ಪಟ್ಟಣದ ತಾಲ್ಲೂಕು ಕಚೇರಿ ಸಮೀಪದ ಅಶ್ವಥಕಟ್ಟೆ ಪಕ್ಕದಲ್ಲಿ ನೂತನ ಪಂಚವಟಿ ಉದ್ಯಾನವನ, ನವಗ್ರಹ ಪ್ರತಿಷ್ಠಾಪನೆ ಹಾಗೂ ಶಿವಲಿಂಗ ದೇವಾಲಯ ನಿರ್ಮಾಣಕ್ಕೆ ಅಶ್ವಥಕಟ್ಟೆ ಗಣಪತಿ ಟ್ರಸ್ಟ್ ನೇತೃತ್ವದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್(MLA S R Srinivas) ಗುದ್ದಲಿಪೂಜೆ ನೆರವೇರಿಸಿದರು.
ಗುರುವಾರ ಬೆಳಿಗ್ಗೆ ಭೂಮಿ ಪೂಜೆ ಆಯೋಜನೆ ಮಾಡಲಾಗಿತ್ತು. ಕಳೆದ 25 ವರ್ಷದಿಂದ ಗಣಪತಿ ಪ್ರತಿಷ್ಠಾಪನೆ ಹಾಗೂ ಅದ್ದೂರಿ ವಿಸರ್ಜನಾ ಮೆರವಣಿಗೆ ನಡೆಸುವ ಟ್ರಸ್ಟ್ ಪ್ರತಿ ತಿಂಗಳು ಸಂಕಷ್ಟ ಚತುರ್ಥಿ ವಿಶೇಷ ಪೂಜೆಯನ್ನು ವಿಧಿವತ್ತಾಗಿ ನಡೆಸಿಕೊಂಡು ಬಂದಿದೆ. ಮುಂದುವರೆದ ಭಾಗವಾಗಿ ಪಂಚವಟಿ, ನವಗ್ರಹ ಹಾಗೂ ಶಿವಲಿಂಗ ಪ್ರತಿಷ್ಠಾಪನೆಗೆ ಮುನ್ನುಡಿ ಬರೆದಿದೆ.
ಇದನ್ನೂ ಓದಿ: Gubbi News: ಎಸ್ಐಆರ್ ಜಾರಿಗೆ ತಂದ ಬಿಜೆಪಿಯಿಂದಲೇ ವಿರೋಧ..! : ಎಸ್.ಆರ್.ಶ್ರೀನಿವಾಸ್
ಭೂಮಿಪೂಜೆ ನೆರವೇರಿಸಿ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಯುವಕರ ತಂಡ ಗಣಪತಿ ಪ್ರತಿಷ್ಠಾಪನೆ ಮಾಡಿ ತಿಂಗಳು ಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಅದ್ದೂರಿಯಾಗಿ ಗಣಪತಿ ಹಬ್ಬ ಮಾಡುತ್ತಿದ್ದ ಟ್ರಸ್ಟ್ ಈಗ ಆಸ್ತಿಕರ ಭಾವನೆಗೆ ತಕ್ಕಂತೆ ಹೊಸ ಯೋಜನೆ ರೂಪಿಸಿಕೊಂಡು ನೂತನ ದೇವಾಲಯ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅವರ ಈ ಸತ್ಕಾರ್ಯಕ್ಕೆ ಶುಭ ಹಾರೈಸುವುದಾಗಿ ತಿಳಿಸಿದರು.
ಅಶ್ವಥಕಟ್ಟೆ ಗಣಪತಿ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಭರತ್ ಗೌಡ ಮಾತನಾಡಿ ಕಳೆದ 25 ವರ್ಷದ ಹಿಂದೆ ಯುವಕರ ತಂಡ ಗಣಪತಿ ಹಬ್ಬ ಆಚರಣೆ ಮಾಡುತ್ತಾ ಪಟ್ಟಣದ ಭಕ್ತರ ಸೆಳೆದು ಪ್ರತಿ ತಿಂಗಳು ಸಂಕಷ್ಟ ಚತುರ್ಥಿ ವಿಶೇಷ ಪೂಜೆಯನ್ನು ಸಹ ನಡೆಸಿಕೊಂಡು ಬಂದಿದ್ದೇವೆ. ನೂರಾರು ವರ್ಷದ ಇತಿಹಾಸದ ಅಶ್ವಥಕಟ್ಟೆ ಸಾವಿರಾರು ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಅಶ್ವಥ್ ಮರದ ಆಶೀರ್ವಾದ ದಿಂದ ಟ್ರಸ್ಟ್ ದೊಡ್ಡ ಮಟ್ಟದ ದೇವಾಲಯ ನಿರ್ಮಾಣಕ್ಕೆ ಮುಂದಾಗಿದೆ ಎಂದರು.
ಈ ಸಂದರ್ಭದಲ್ಲಿ ಪಪಂ ಮಾಜಿ ಸದಸ್ಯರಾದ ಜಿ.ಆರ್.ಶಿವಕುಮಾರ್, ಬಿಲ್ಲೇಪಾಳ್ಯ ನರಸಿಂಹ ಮೂರ್ತಿ, ಹೇರೂರು ಗುರುಪ್ರಸಾದ್, ಕೆ.ಆರ್.ಅಶೋಕ್ ಕುಮಾರ್, ಟ್ರಸ್ಟ್ ಸದಸ್ಯರಾದ ಎಚ್.ಟಿ. ಭೈರಪ್ಪ, ಮಹದೇವಯ್ಯ, ರಾಜಕುಮಾರ್, ಸೋಮನಾಥ್, ಹನುಮಂತಯ್ಯ, ಎ.ನರಸಿಂಹಮೂರ್ತಿ, ಇಂಜಿನಿಯರ್ ಸವಿತಾ, ಸುಖೇಶ್, ಪರಮಣ್ಣ, ಶಶಿಧರ್, ಬಸವರಾಜು, ಅಪ್ಸರ್ ಷರೀಫ್ ಇತರರು ಇದ್ದರು.