ಗುಬ್ಬಿ: ಜಿಲ್ಲೆಯ ಏಳು ತಾಲ್ಲೂಕಿಗೆ ಜೀವನದಿಯಾದ ಹೇಮಾವತಿ ಅವೈಜ್ಞಾನಿಕವಾಗಿ ಲಿಂಕ್ ಕೆನಾಲ್ ಮೂಲಕ ಕುಣಿಗಲ್ ಹೆಸರಲ್ಲಿ ಮಾಗಡಿ ರಾಮನಗರಕ್ಕೆ ಹರಿಸುವ ಕಾಮಗಾರಿಯನ್ನು ಸರ್ಕಾರ ಕೈ ಬಿಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ರೈತರಿಂದ ನಡೆಯಲಿದೆ. ಈ ಬಗ್ಗೆ ಪೂರ್ವ ಭಾವಿ ಸಭೆಯನ್ನು ಗುಬ್ಬಿಯಲ್ಲಿ ಜೂ.11ರಂದು ನಡೆಸಲಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅಕ್ರಮ ಕಾಮಗಾರಿ ಬಗ್ಗೆ ಒಂದೂವರೆ ವರ್ಷದ ಹಿಂದೆ ದೊಡ್ಡ ಮಟ್ಟದ ವಿರೋಧ ವ್ಯಕ್ತ ಪಡಿಸಿದ್ದ ಜಿಲ್ಲೆಯ ರೈತರು ಎಲ್ಲಾ ಪಕ್ಷದ ಮುಖಂಡರು, ಸಂಘ ಸಂಸ್ಥೆಗಳ ಜೊತೆ ಸೇರಿ ಲಿಂಕ್ ಕೆನಾಲ್ ವಿರೋಧಿ ವೇದಿಕೆ ನಿರ್ಮಿಸಿಕೊಂಡು ಬೃಹತ್ ಹೋರಾಟ ನಡೆಸಿ ಸರ್ಕಾರಕ್ಕೆ ಮನದಟ್ಟು ಮಾಡಲಾಗಿತ್ತು. ಕಾಮಗಾರಿ ಸ್ಥಗಿತಗೊಳಿಸಿದ ನಂತರ ದಲ್ಲಿ ಈಚೆಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಾಮಗಾರಿ ಮುಂದುವರೆಸುವ ಬಗ್ಗೆ ಹೇಳಿಕೆ ನೀಡಿದ್ದು ಜಿಲ್ಲೆಯ ರೈತರನ್ನು ಕೆಣಕಿದಂತಾಗಿದೆ. ಇದರ ಪ್ರತಿಫಲ ಸರ್ಕಾರ ಎದುರಿಸಬೇಕಿದೆ ಎಂದು ಗುಡುಗಿದರು.
ಇದನ್ನೂ ಓದಿ: Gubbi News: ಇಂದು ಅದ್ದೂರಿ ಬಸವ ಜಯಂತಿ: ಯಶಸ್ವಿಗೆ ಆಚರಣಾ ಸಮಿತಿ ಮನವಿ
ಜಿಲ್ಲೆಯ ಹಿತ ಕಾಯಬೇಕಾದ ಪರಮೇಶ್ವರ್ ಅವರು ಸರ್ಕಾರದ ಒಂದು ಭಾಗವಾಗಿ ಕಾಮಗಾರಿ ನಡೆಸಲು ಮುಂದಾಗಿರುವುದು ಸೋಜಿಗ ಸಂಗತಿ. ಅಧಿಕಾರದ ಮಾತುಗಳನ್ನು ಬಿಟ್ಟು ಮಾನವೀಯತೆಯಲ್ಲಿ ಜನರ ನೀರಿನ ವಿಚಾರದ ಸೂಕ್ಷ್ಮತೆ ಅರಿತು ಜನಪರ ನಿಲ್ಲಬೇಕು. ಅದನ್ನು ಬಿಟ್ಟು ಮುಖ್ಯಮಂತ್ರಿಗಳ ಅಣತಿಯಂತೆ ಅಧಿಕಾರಿಗಳ ಜೊತೆ ಕಾಮಗಾರಿ ಮುಂದುವರೆಸಲು ಬಯಸಿರುವುದು ಜಿಲ್ಲೆಗೆ ದ್ರೋಹ ಬಗೆದಂತೆ ಎಂದು ಕಿಡಿಕಾರಿದ ಅವರು ಸಾವಿರಾರು ಮಂದಿ ಜನರ ಹೋರಾಟಕ್ಕೆ ಕಿಂಚಿತ್ತೂ ಬೆಲೆ ಕೊಡದ ಸರ್ಕಾರ ಈಗ ಮತ್ತೊಮ್ಮೆ ರೈತರ ವಿರೋಧಿ ನೀತಿ ತೋರು ತ್ತಿದೆ. ಇದಕ್ಕೆ ತಕ್ಕಪಾಠ ಜನರೇ ನಿರ್ಧರಿಸುತ್ತಾರೆ ಎಂದರು.
ಕುಣಿಗಲ್ ತಾಲ್ಲೂಕಿನ ಹಂಚಿಕೆಯ 3 ಟಿಎಂಸಿ ನೀರು ಮುಖ್ಯನಾಲೆ ಮೂಲಕ ತೆಗೆದುಕೊಂಡು ಹೋಗಲು ಅಡ್ಡಿಯಿಲ್ಲ. ಅಗಲೀಕರಣ ಮಾಡಿ ಅಲೋಕೇಶನ್ ಮೂಲಕ ನೀರು ಪಡೆಯಲಿ ಅದನ್ನು ಬಿಟ್ಟು ನಮ್ಮ ಪಾಲಿನ ನೀರು ಕಿತ್ತುಕೊಳ್ಳುವುದು ಸಮಂಜಸವಲ್ಲ. ಕುಣಿಗಲ್ ತಾಲ್ಲೂಕಿನ ರೈತರನ್ನು ರೊಚ್ಚಿಗೆಬ್ಬಿಸುವ ಶಾಸಕ ಡಾ.ರಂಗನಾಥ್(MLA Dr Ranganath) ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕುಣಿಗಲ್ ರೈತರು ಅವರ ಪಾಲಿನ ನೀರು ಪಡೆಯಲು ಯಾವ ಅಡ್ಡಿಯಿಲ್ಲ ಎಂಬುದು ಅರಿಯ ಬೇಕು. ನಮ್ಮ ಭಾಗದ ನೀರು ಉಳಿಸಿಕೊಳ್ಳಲು ಹೋರಾಟ ಅನಿವಾರ್ಯ ವಾಗಿದೆ. ಈ ನಿಟ್ಟಿನಲ್ಲಿ ಗುಬ್ಬಿಯಲ್ಲಿ ನಡೆಯುವ ಲಿಂಕ್ ಕೆಣಲಾ ವಿರೋಧಿ ವೇದಿಕೆ ಸಭೆಯಲ್ಲಿ ಸರ್ವ ಪಕ್ಷದ ಮುಖಂಡರು, ರೈತ ಮುಖಂಡರು ಒಗ್ಗೂಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.