ಕೊರಟಗೆರೆ, ಮಾ. 11: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆ ಶ್ರೀ ವೀರನಾಗಮ್ಮ ದೇವಾಲಯದ ಗರ್ಭಗುಡಿ ಸೇರಿ 4 ಬಾಗಿಲನ್ನು ಗ್ಯಾಸ್ ಕಟರ್‌ನಿಂದ ತುಂಡರಿಸಿ 1 ಕೋಟಿ ರುಪಾಯಿಗೂ ಅಧಿಕ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಜತೆ ಸಿಸಿಟಿವಿಯ ಡಿವಿಆರ್ ಅನ್ನು ಕಳ್ಳರು ಹೊತ್ತೊಯ್ದ ಘಟನೆ ಮಂಗಳವಾರ (ಮಾರ್ಚ್ 10) ರಾತ್ರಿ ನಡೆದಿದೆ (Tumakuru News). ಸದ್ಯ ಈ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಭದ್ರತಾ ಲೋಪವೇ ಕೃತ್ಯಕ್ಕೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.
ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ವಡ್ಡಗೆರೆಯ ಶ್ರೀ ವೀರನಾಗಮ್ಮ ದೇವಾಲಯದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಗೇಟ್, ಬಾಗಿಲು, ದೇವಾಲಯದ ಕಬ್ಬಿಣ-ಮರದ ಬಾಗಿಲು ಮತ್ತು ಗರ್ಭಗುಡಿಯ ಭದ್ರತಾ ಬಾಗಿಲನ್ನು ಗ್ಯಾಸ್‌ಕಟರ್‌ನಿಂದ ತುಂಡಿಸಿ ಒಳಪ್ರವೇಶಿಸಿದ ಕಳ್ಳರು 35 ಕೆಜಿ ಬೆಳ್ಳಿ ಮತ್ತು 10 ಗ್ರಾಂ ಬಂಗಾರ ಸೇರಿ ಕೋಟಿ ರುಪಾಯಿಗೂ ಅಧಿಕ ಮೌಲ್ಯದ ಆಭರಣ ದೋಚಿದ್ದಾರೆ.
ರಾತ್ರಿ ಕಳ್ಳರ ಹೈಟೆಕ್ ಕೈ ಚಳಕ
ಇತಿಹಾಸ ಪ್ರಸಿದ್ಧ ವಡ್ಡಗೆರೆಯ ವೀರನಾಗಮ್ಮ ದೇವಾಲಯದ ಕಳ್ಳತನ ಇಡೀ ಕೊರಟಗೆರೆ ತಾಲೂಕನ್ನೇ ಬೆಚ್ಚಿಬಿಳಿಸಿದೆ. ಗ್ಯಾಸ್ ಕಟರ್‌ನಿಂದ ಬಾಗಿಲುಗಳನ್ನು ಕಟ್ ಮಾಡಿ ಆಭರಣಗಳನ್ನು ಸಿಸಿಟಿವಿ ಮತ್ತು ಡಿವಿಆರ್ ಸಮೇತ ಕಳವು ಮಾಡಲಾಗಿದೆ. ಕೊರಟಗೆರೆ ಪೊಲೀಸರಿಗೆ ಈ ಕಳ್ಳತನ ಸವಾಲಾಗಿದ್ದು, ಕಳ್ಳರ ಜಾಡಿ ಹಿಡಿದು ಹೊರಟಿದ್ದಾರೆ. ಈಗಾಗಲೇ ನಾಲ್ಕೈದು ತಂಡಗಳು ರಚನೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ವಡ್ಡಗೆರೆಗೆ ತುಮಕೂರು ಎಎಸ್‌ಪಿ ಪುರುಷೋತ್ತಮ್, ಮಧುಗಿರಿ ಡಿವೈಎಸ್‌ಪಿ ಮಂಜುನಾಥ, ಸಿಪಿಐ ಅನಿಲ್, ತಹಶೀಲ್ದಾರ್ ಮಂಜುನಾಥ ಸೇರಿ ಶ್ವಾನದಳ, ಬೆರಳಚ್ಚು ತಜ್ಞರತಂಡ, ಮುಜರಾಯಿ ಇಲಾಖೆ ಮತ್ತು ಪೊಲೀಸರ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
3 ಸಲ ಕಳ್ಳತನ; ಭದ್ರತೆ ಕೊರತೆ
ವಡ್ಡಗೆರೆಯ ಶ್ರೀ ವೀರನಾಗಮ್ಮ ದೇವಾಲಯದಲ್ಲಿ 15 ವರ್ಷಗಳ ಹಿಂದೆ 2 ಸಲ ಹುಂಡಿ ಕಳ್ಳತನ ಆಗಿತ್ತು. ಇದಾದ ನಂತರ ಈಗ ದೇವಾಲಯದ 4 ಬಾಗಿಲು ಮುರಿದು ದೇವಿಯ ಮೂಲ ವಿಗ್ರಹ ಬಿಟ್ಟು ಉಳಿದೆಲ್ಲ ಸೊತ್ತುಗಳನ್ನು ದೋಚಲಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಕ್ಕೆ ರಾತ್ರಿ ಕಾವಲುಗಾರನ ಜತೆ ಭದ್ರತೆಯು ಮರೀಚಿಕೆಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ವರ್ಗಾವಣೆಗಾಗಿ ಗಿಳಿಶಾಸ್ತ್ರದ ಮೊರೆ ಹೋದ ಐಟಿ ಅಧಿಕಾರಿ, 35 ಲಕ್ಷ ರೂಪಾಯಿ ಮಂಗಮಾಯ!
![]()
ತುಮಕೂರು ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಬಿ ಗ್ರೇಡ್ ದೇವಾಲಯಗಳಿದ್ದು, ಯಾವುದಕ್ಕೂ ರಾತ್ರಿ ಕಾವಲುಗಾರರ ವ್ಯವಸ್ಥೆ ಇಲ್ಲ. ಜಿಲ್ಲೆಯ ಅಧಿಕ ಕಡೆ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ. ತುರ್ತಾಗಿ ದೇವಾಲಯಗಳ ಕಮಿಟಿ ರಚನೆ ಮತ್ತು ಕಾವಲುಗಾರ ನೇಮಕ ಅತ್ಯವಶ್ಯಕ.
ರಂಗರಾಜು, ದಾರ್ಮಿಕ ದತ್ತಿ ಸದಸ್ಯ, ತುಮಕೂರು