ಚಿಕ್ಕನಾಯಕನಹಳ್ಳಿ, ಫೆ.21: ಹೇಮಾವತಿ ನಾಲಾ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೆ ತಾಲೂಕಿನಾದ್ಯಂತ ನಡೆಯುತ್ತಿರುವ ಇತರೆಲ್ಲಾ ಸರ್ಕಾರಿ ಕಾಮಗಾರಿಗಳನ್ನು ತಡೆಯಲಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಕೆಆರ್‌ಎಸ್ ಪಕ್ಷದ ಮುಖಂಡ ಭಟ್ಟರಹಳ್ಳಿ ಮಲ್ಲಿಕಾರ್ಜುನ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದಲ್ಲಿ (Chikkanayakanahalli News) ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.
ಹೇಮಾವತಿ ಯೋಜನೆಯಡಿ ಬಾಕಿ ಇರುವ 11 ಸೇತುವೆಗಳು ಮತ್ತು 8 ಕಿಲೋಮೀಟರ್ ಉದ್ದದ ಕಾಮಗಾರಿ ಪೂರ್ಣಗೊಂಡರೆ ಮಾತ್ರ ನವಿಲೆ ಕೆರೆಗೆ ನೀರು ಹರಿಯಲು ಸಾಧ್ಯ. ಈ ಕೆಲಸಗಳಿಗೆ ಅಗತ್ಯವಿರುವ ಅನುದಾನ ಲಭ್ಯವಿದ್ದರೂ ಹಾಗೂ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲದೆ ಕೆಲಸ ವಿಳಂಬವಾಗುತ್ತಿದೆ ಎಂದು ದೂರಿದರು. ಇದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಮುಂದಿನ ಎರಡು ತಿಂಗಳು ಸುಸ್ಥಿರವಾಗಿ ಕೆಲಸ ನಡೆಸಿದರೆ ಈ ಯೋಜನೆ ಪೂರ್ಣಗೊಂಡು ಕೆರೆಗೆ ನೀರು ತಲುಪಲಿದೆ ಎಂದರು.
ನವಿಲೆ ಕೆರೆಗೆ ನೀರು ಬಂದರೆ ಈ ಭಾಗದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಸರ್ಕಾರಿ ಅಡೆತಡೆಗಳನ್ನು ಬದಿಗಿಟ್ಟು, ಯುದ್ಧೋಪಾದಿಯಲ್ಲಿ ಕೆಲಸ ನಡೆಸಿ ಮಳೆಗಾಲಕ್ಕೆ ಮುನ್ನವೇ ನೀರು ತಲುಪುವಂತೆ ಮಾಡಬೇಕು. ಇಲ್ಲವಾದಲ್ಲಿ ತಾಲೂಕಿನ ಪ್ರತಿಯೊಂದು ಸರ್ಕಾರಿ ಕೆಲಸವನ್ನೂ ತಡೆದು ಪ್ರತಿಭಟಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೀರಾವರಿ ಹೋರಾಟಗಾರ ಮಧು ಮಾತನಾಡಿ, ತಾಲೂಕಿನ ಶಾಸಕರು ಮಕ್ಕಳಿಗೆ ಉಚಿತ ಸಿಇಟಿ ಮತ್ತು ನೀಟ್ ತರಬೇತಿ ನೀಡುವ ಪ್ರಚಾರದ ಕೆಲಸ ಮಾಡುವುದನ್ನು ಬಿಟ್ಟು, ಮೊದಲು ನವಿಲೆ ಕೆರೆಗೆ ನೀರು ಹರಿಸಲಿ. ನಾಲೆಯಲ್ಲಿ ನೀರು ಹರಿದು ರೈತರು ಬೆಳೆ ಬೆಳೆದರೆ, ಆ ಹಣದಿಂದಲೇ ನಮ್ಮ ಮಕ್ಕಳನ್ನು ಓದಿಸುವ ಶಕ್ತಿ ನಮಗಿದೆ. ನಮಗೆ ಉಚಿತ ಶಿಕ್ಷಣದ ಭಿಕ್ಷೆ ಬೇಡ, ನಮ್ಮ ಹಕ್ಕಿನ ನೀರು ಕೊಡಿ. ನೀರಾವರಿ ಸೌಲಭ್ಯವಿದ್ದರೆ ರೈತ ತನ್ನ ಮಕ್ಕಳನ್ನು ಸ್ವಂತ ಖರ್ಚಿನಲ್ಲೇ ಉತ್ತಮವಾಗಿ ಓದಿಸುತ್ತಾನೆ. ಶಾಸಕರು ಶಿಕ್ಷಣದ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ರೈತರ ಜಮೀನಿಗೆ ನೀರು ತಲುಪಿಸಲಿ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯವನ್ನು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವುದೇ ನಮ್ಮ ಗುರಿ: ಎಚ್.ಕೆ. ಪಾಟೀಲ್
ಈ ಸಂದರ್ಭದಲ್ಲಿ ಹೇಮಾವತಿ ನೀರಾವರಿ ಹೋರಾಟ ಸಮಿತಿಯ ಆಟೋ ಮಂಜುನಾಥ್, ಹೊನ್ನೆಬಾಗಿ ಪ್ರಸನ್ನ, ಯೋಗಿಶ್, ಹನುಮಂತಪ್ಪ, ರೈತ ಸಂಘದ ಯದುಕುಮಾರ್, ಮುದ್ದೇನಹಳ್ಳಿ ಗ್ರಾ. ಪಂ. ಮಾಜಿ ಅಧ್ಯಕ್ಷ ಗಂಗಾಧರಯ್ಯ ಹಾಗೂ ಇತರರು ಉಪಸ್ಥಿತರಿದ್ದರು.