ಚಿಕ್ಕನಾಯಕನಹಳ್ಳಿ: ಪಟ್ಟಣದ ಹೃದಯಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ಆಯಕಟ್ಟಿನ ಜಾಗದಲ್ಲಿ ರಾತ್ರೋರಾತ್ರಿ ಗೂಡಂಗಡಿಯೊಂದು ಪ್ರತ್ಯಕ್ಷವಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಶನಿವಾರ ಸಂಜೆಯವರೆಗೆ ಖಾಲಿ ಇದ್ದ ಜಾಗದಲ್ಲಿ, ಭಾನುವಾರ ಬೆಳಗ್ಗೆ ಸಾರ್ವಜನಿಕರು ಬರುವಷ್ಟರಲ್ಲಿ ಸುಸಜ್ಜಿತವಾದ ಕಬ್ಬಿಣದ ಪೆಟ್ಟಿ ಅಂಗಡಿಯೊಂದು ಸಿದ್ಧವಾಗಿ ನಿಂತಿತ್ತು. ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಹಾಗೂ ಪಾದಚಾರಿಗಳು ಇದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯಾವುದೇ ಮುನ್ಸೂಚನೆ ಅಥವಾ ಕಾನೂನುಬದ್ಧ ಪರವಾನಗಿ ಇಲ್ಲದೆ, ಸಾರ್ವಜನಿಕ ಸ್ವತ್ತನ್ನು ಬಳಸಿಕೊಂಡು ಈ ರೀತಿ ರಾತ್ರೋರಾತ್ರಿ ಅಂಗಡಿ ನಿರ್ಮಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬಸ್ ನಿಲ್ದಾಣದ ಮುಂಭಾಗವು ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಈಗಾಗಲೇ ವಾಹನಗಳ ಪಾರ್ಕಿಂಗ್ ಮತ್ತು ಪಾದಚಾರಿಗಳ ಓಡಾಟಕ್ಕೆ ಸ್ಥಳದ ಅಭಾವವಿದ್ದು, ಈಗ ಈ ಅಂಗಡಿಯು ಪಾದಚಾರಿ ಮಾರ್ಗವನ್ನೇ ಅತಿಕ್ರಮಿಸಿದೆ. ಇದರಿಂದಾಗಿ ಪ್ರಯಾಣಿಕರು ಮುಖ್ಯ ರಸ್ತೆಯಲ್ಲೇ ಸಂಚರಿಸುವಂತಾಗಿದ್ದು, ಅಪಘಾತದ ಭೀತಿ ಎದುರಾಗಿದೆ. ಪಟ್ಟಣದ ಪ್ರಮುಖ ಕೇಂದ್ರದಲ್ಲೇ ಇಂತಹ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೂ ಪುರಸಭೆ ಅಥವಾ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸದಿರುವುದು ಸಾರ್ವಜನಿಕರ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ವಾರಾಂತ್ಯದ ರಜಾ ದಿನಗಳನ್ನು ಬಳಸಿಕೊಂಡು ಸದ್ದಿಲ್ಲದೆ ಈ ಅಂಗಡಿಯನ್ನು ಇರಿಸಲಾಗಿದೆ. ಅಧಿಕಾರಿಗಳ ಮೌನ ಸಮ್ಮತಿ ಇಲ್ಲದೆ ಇದು ಸಾಧ್ಯವೇ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಅಕ್ರಮವಾಗಿ ತಲೆ ಎತ್ತಿರುವ ಈ ಪೆಟ್ಟಿ ಅಂಗಡಿಯನ್ನು ಕೂಡಲೇ ತೆರವುಗೊಳಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಪಟ್ಟಣದಾದ್ಯಂತ ಇಂತಹ ಅಕ್ರಮ ಒತ್ತುವರಿಗಳು ಹೆಚ್ಚಾಗಲಿವೆ ಎಂದು ನಾಗರಿಕರು ಎಚ್ಚರಿಸಿದ್ದಾರೆ.