ಗುಬ್ಬಿ: ಕನ್ನಡ ಭಾಷೆ ಸಂಕಷ್ಟಕ್ಕೀಡಾಗಿ ಇತ್ತೀಚಿನ ದಿನದಲ್ಲಿ ಗ್ರಾಮಾಂತರ ಶಾಲೆಗಳು ಮುಚ್ಚುವ ಹಂತ ತಲುಪಿದೆ. ಖಾಸಗಿ ಆಂಗ್ಲ ಮಾಧ್ಯಮಕ್ಕೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಿದೆ. ಕನ್ನಡ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕನ್ನಡ ಮಾಧ್ಯಮಕ್ಕೆ ಉದ್ಯೋಗ ಮೀಸಲಾತಿ ನೀಡುವ ದಿಟ್ಟ ನಿಲುವು ತಾಳಬೇಕಿದೆ ಎಂದು ಆರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಬಿ.ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಆಯೋಜಿಸಿದ್ದ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು ಯುವ ಜನರಲ್ಲಿ ಪುಸ್ತಕ ಪ್ರೀತಿ ಕಡಿಮೆಯಾಗಿದೆ. ಬೆರಳೆಣಿಕೆ ಮಂದಿ ಸಾಹಿತ್ಯಾಸಕ್ತಿ ಬೆಳೆಸಿಕೊಂಡು ಲೇಖನ ಬರೆದರೆ ಅವರಿಗೆ ಸರ್ಕಾರ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು.
ಇದನ್ನೂ ಓದಿ: Kannada Sahitya Sammelan: ಡಿ.20 ರಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ : ಕನ್ನಡ ಹಬ್ಬಕ್ಕೆ ಸಜ್ಜುಗೊಳಿಸಿದ ಪರಿಷತ್ತು
ಗ್ರಂಥಾಲಯಗಳು ಸಹ ಓದುಗರ ಕೊರತೆ ಎದುರಿಸಿದೆ. ಸರ್ಕಾರ ಪುಸ್ತಕಗಳ ಖರೀದಿ ಮಾಡಬೇಕಿದೆ. ಪಟ್ಟಣ ನಗರದಲ್ಲಿ ಪ್ರತಿ ಪ್ರಜೆಯಿಂದ ಲೈಬ್ರರಿ ಸೆಸ್ ವಸೂಲಿ ಮಾಡಲಾಗುತ್ತಿದೆ. ಆದರೆ ಗ್ರಂಥಾ ಲಯಕ್ಕೆ ಪುಸ್ತಕಗಳು ಖರೀದಿ ಆಗುತ್ತಿಲ್ಲ. ಅಂತೂ ಇಂತೂ ಖರೀದಿ ನಡೆದರೆ ಅದರ ಹಣ ಬರಲು ಮೂರು ನಾಲ್ಕು ವರ್ಷ ಬೇಕಿದೆ. ಈ ಜೊತೆಗೆ ಪ್ರಕಾಶಕರ ಸ್ಥಿತಿ ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದ ಅವರು ಸರ್ಕಾರ ಪುಸ್ತಕೋದ್ಯಮ ರಕ್ಷಿಸಬೇಕಿದೆ. ಈ ಕಾಯಕ ಎಲ್ಲಾ ಕನ್ನಡಿಗರ ಕರ್ತವ್ಯ ಎಂದರು.
ಕಲೆಗಳ ನಾಡು ಗುಬ್ಬಿ ವೀರಗಾಸೆ, ನಂದಿಧ್ವಜ ಕುಣಿತ, ಲಿಂಗ ವೀರರ ಕುಣಿತ, ಕೋಲಾಟ, ಸೋಮನ ಕುಣಿತ, ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟ ಹೀಗೆ ಅನೇಕ ಗ್ರಾಮೀಣ ಸೊಗಡಿನ ಸಾಹಿತ್ಯದ ತವರೂರು ಇದಾಗಿದೆ. ವಚನ ಸಾಹಿತ್ಯದಲ್ಲಿ ಗುಬ್ಬಿ ಎರಡನೇ ಕಲ್ಯಾಣ ಎಂದೆನಿಸಿದೆ. ಗುಬ್ಬಿ ಚನ್ನಬಸವೇಶ್ವರರ ಬಗ್ಗೆ ಎಲ್ಲರಿಗೂ ತಿಳಿಸುವ ಕೆಲಸ ಮಾಡಿ ಹೊಸಹಳ್ಳಿ ಅರಸರ ರಾಜ ಗುರುಗಳಾಗಿ ನಡೆಸಿದ ವಚನ ಸಾಹಿತ್ಯ ಕೃಷಿ 70 ವರ್ಷ ನಡೆದಿತ್ತು. ಈ ಜೊತೆಗೆ ಗುಬ್ಬಿ ಮಲ್ಲಣ್ಣ, ಮಲ್ಲಣ್ಣಾರ್ಯಾ, ಗುಬ್ಬಿ ವೀರಣ್ಣ, ನಟ ಭಯಂಕರ ಗಂಗಾಧರಯ್ಯ, ಚಿ.ಉದಯ ಶಂಕರ್, ಸಾಲು ಮರದ ತಿಮ್ಮಕ್ಕ ಯಾರನ್ನೂ ಮರೆಯುವಂತಿಲ್ಲ. ಇಂತಹ ನೆಲೆಯ ಸಾಹಿತ್ಯ ಸಮ್ಮೇಳನ ನನಗೆ ತೃಪ್ತಿ ನೀಡಿದೆ ಎಂದರು.
ಬಿ.ಕೋಡಿಹಳ್ಳಿ ಮಠದ ಶ್ರೀ ಬಸವ ಭೃಂಗೇಶ್ವರ ಸ್ವಾಮೀಜಿ ಮಾತನಾಡಿ ಮರಿ ಕಲ್ಯಾಣ ಎಂದೇ ಉತ್ತರ ಕರ್ನಾಟಕದಲ್ಲಿ ಗುಬ್ಬಿ ಕ್ಷೇತ್ರ ಗುರುತಿಸಿಕೊಂಡಿದೆ. ಸಾಹಿತ್ಯಕ ಶ್ರೀಮಂತಿಕೆ ಇಲ್ಲಿದೆ. ಇಂದಿಗೂ ಸಾವಿರ ಬರವಣಿಗೆದಾರರು ಸಿಗುತ್ತಾರೆ. ಆದರೆ ಸಾಹಿತ್ಯಾಸಕ್ತಿ ಕೇವಲ ಸಿನಿಮಾ ಹಾಡಿನ ಸೀಮಿತ ವಾಗಿದೆ. ಕನ್ನಡ ಸಾಹಿತ್ಯಕ್ಕೆ ಎರಡೂವರೆ ವರ್ಷದ ಇತಿಹಾಸವಿದೆ. ಈಗಾಗಲೇ ಸುತ್ತಲಿನ ಅನ್ಯ ರಾಜ್ಯ ನಮ್ಮ ನೆಲ ಕಿತ್ತು ಸಾಹಿತ್ಯ ಕಿಟ್ಟುಕೊಳ್ಳುತ್ತಿದೆ. ನಮ್ಮ ಸಾಹಿತಿಗಳ ಬರವಣಿಗೆ ತಿರುಚುವ ಕೆಲಸ ನಡೆದಿದೆ. ಘೋರ ಸನ್ನಿವೇಶ ಎದುರಿಸುವ ಮುನ್ನ ನಮ್ಮ ಕನ್ನಡ ಸಾಹಿತ್ಯ ಉಳಿಸುವ ಕೆಲಸ ನಿರಂತರ ಮಾಡಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕೀರ್ತನಾಕಾರ ಲಕ್ಷ್ಮಣ್ ದಾಸ್ ಮಾತನಾಡಿ, ಹದಿನೆಂಟು ಕೋಮಿನ ಗುಬ್ಬಿಯಪ್ಪ ಇತಿಹಾಸಕ್ಕೆ ಸಾಕ್ಷಿ ಆಧಾರ ಸಹಿತ ಕೃತಿ ಬರೆದ ನಂಜುಂಡಸ್ವಾಮಿ ಸಮ್ಮೇಳನಕ್ಕೆ ಅರ್ಥ ತಂದಿದ್ದಾರೆ. ಗುಬ್ಬಿಯ ಮಹನೀಯರಲ್ಲಿ ನಿಟ್ಟೂರು ಶ್ರೀನಿವಾಸರಾವ್, ಹೊಸಕೆರೆ ಚಿದಂಬ ರಯ್ಯ, ಹಾಗಲವಾಡಿ ಜುಂಜಪ್ಪ, ನಾಟಕ ರತ್ನ ಗುಬ್ಬಿ ವೀರಣ್ಣ, ಚಿ.ಉದಯಶಂಕರ್, ಗಂಗಾಧ ರಯ್ಯ, ಹೀಗೆ ಅನೇಕರನ್ನು ಸ್ಮರಿಸುವ ಕರ್ತವ್ಯ ಎಲ್ಲರ ಮೇಲಿದೆ ಎಂದರು.
ಧ್ವಜ ಹಸ್ತಾಂತರ ಮಾಡಿದ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಚಿಕ್ಕಣ್ಣ ಯಣ್ಣೆಕಟ್ಟೆ ಮಾತನಾಡಿ, ಆರು ಸಮ್ಮೇಳನ ತಾಲ್ಲೂಕಿನ ಸಾಹಿತ್ಯಕ್ಕೆ ಸಾಕ್ಷಿಯಾಗಿದೆ. ನಮ್ಮ ಮೂಲ ನೆಲೆಯ ಪರಂಪರೆ ಬಿಂಬಿ ಸುವ ಸಾಹಿತ್ಯ ಜನಪದ ಸೊಗಡಿನಲ್ಲಿದೆ. ಜುಂಜಪ್ಪನ ಕಾವ್ಯ ಎಂದಿಗೂ ಕಾಡು ಗೊಲ್ಲರ ಪರಂಪರೆ ತೋರುತ್ತದೆ. ಜೊತೆಗೆ ಶಕ್ತಿ ದೇವತೆಗಳ ಆರಾಧನೆ ನಮ್ಮಲ್ಲಿ ಹೆಚ್ಚು ನಡೆಯುತ್ತದೆ. ಮಣ್ಣಮ್ಮ, ಗ್ರಾಮದೇವತೆ, ಆಲದ ಕೊಂಬೆಯಮ್ಮ, ಕೊಲ್ಲಾಪುರದಮ್ಮ, ದಂಡಿನ ಮಾರಮ್ಮ ಹೀಗೆ ಅನೇಕ ಇತಿಹಾಸ ನಮ್ಮಲ್ಲಿ ಪರಿಶಿಷ್ಟ ವಲಯದಿಂದ ಉಳಿದುಬಂದಿದೆ. ಕಲ್ಲೂರು ನಾಗರಾಜಪ್ಪ, ಎಸ್.ನಾಗಪ್ಪ ಮೊದಲಾದವರನ್ನು ಈ ಸಮಯ ಸ್ಮರಿಸಬೇಕಿದೆ. ಸಮ್ಮೇಳನ ಹೆಚ್ಚು ನಡೆದು ಯುವ ಸಾಹಿತಿಗಳಿಗೆ ವೇದಿಕೆ ರೂಪಿಸಲಿ ಎಂದು ಆಶಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಸಮ್ಮೇಳನ ಯಶಸ್ವಿಗೆ ಸಹಕರಿಸಿದ್ದವರನ್ನು ಸ್ಮರಿಸಿದರು.
ವೇದಿಕೆಯ ಕಾರ್ಯಕ್ರಮಕ್ಕೆ ಮುನ್ನ ಬೆಳಿಗ್ಗೆ ಧ್ವಜಾರೋಹಣ ನಂತರ ಕನ್ನಡಾಂಬೆಯ ಭಾವಚಿತ್ರ ಹಾಗೂ ಸಮ್ಮೇಳಾಧ್ಯಕ್ಷರ ಭವ್ಯ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡದೊಂದಿಗೆ ನಡೆಯಿತು. ಇದೇ ಸಂದರ್ಭದಲ್ಲಿ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಬಿಡುಗಡೆ ಗೊಳಿಸಿದರು.
ಯುವ ಸಾಹಿತಿಗಳಾದ ಅರುಣ್ ಕುಮಾರ್ ಅವರ ಸ್ಫೂರ್ತಿ ಕವನ ಸಂಕಲನ, ಗೀತಾ ಕಲ್ಲೂರು ಅವರ ಭಾವ ಸಿಂಚನ ಹಾಗೂ ಅಂಜನ್ ಕುಮಾರ್ ಅವರ ಕಾಲ್ಗೆಜ್ಜೆ ಪುಸ್ತಕವನ್ನು ಉಪನ್ಯಾಸಕ ಡಾ.ಗೋವಿಂದರಾಜು ಎಂ.ಕಲ್ಲೂರು ಬಿಡುಗಡೆ ಗೊಳಿಸಿದರು.
ವೇದಿಕೆಯಲ್ಲಿ ತಹಸೀಲ್ದಾರ್ ಆರತಿ.ಬಿ, ಬಿಇಓ ನಟರಾಜ್, ತಾಪಂ ಇಓ ರಂಗನಾಥ್, ಸಾಹಿತಿ ಎಚ್.ಕೆ.ನರಸಿಂಹಮೂರ್ತಿ, ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್, ಜಿಪಂ ಮಾಜಿ ಸದಸ್ಯ ಜಿ.ಎಚ್. ಜಗನ್ನಾಥ್, ಪಪಂ ಮಾಜಿ ಸದಸ್ಯರಾದ ಮಹಮ್ಮದ್ ಸಾದಿಕ್, ಆಯಿಷಾ ತಾಸೀನ್, ಸವಿತಾ.ಎಸ್. ಗೌಡ, ಜಿ.ಸಿ.ಕೃಷ್ಣಮೂರ್ತಿ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಮುಖಂಡರಾದ ಕಳ್ಳಿಪಾಳ್ಯ ಲೋಕೇಶ್, ಬೆಣಚಿಗೆರೆ ರುದ್ರೇಶ್, ಜಿ.ವಿ.ಮಂಜುನಾಥ್, ಯಲ್ಲಪ್ಪ, ಅಪ್ಪಾಜಿ, ಚೇಳೂರು ಶಿವನಂಜಪ್ಪ, ಗುಬ್ಬಚ್ಚಿ ಸತೀಶ್, ಕಸಾಪ ಪದಾಧಿಕಾರಿಗಳಾದ ರಾಜೇಶ್ ಗುಬ್ಬಿ, ಸಿ.ಆರ್.ಶಂಕರ್ ಕುಮಾರ್, ಸಲೀಂಪಾಷ, ಜಯಣ್ಣ, ಸುಬ್ರಹ್ಮಣ್ಯ, ಕೆ.ವಿ.ದಯಾನಂದ್, ರವೀಶ್, ರಮೇಶ್ ಗೌಡ, ಕೋಟೆ ರಂಗಸ್ವಾಮಿ ಇತರರು ಇದ್ದರು.