ಗುಬ್ಬಿ: ಸತತ ಐದು ಬಾರಿ ಶಾಸಕರಾದ ಗುಬ್ಬಿಯ ಎಸ್.ಆರ್.ಶ್ರೀನಿವಾಸ್(S R Srinivas) ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಬೇಕು ಎಂದು ಕಾಡುಗೊಲ್ಲ ಅಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ್ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಬುಧವಾರ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ವಾಸಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು. ಸಾಮಾನ್ಯರಿಗೆ ಸಿಗುವ ಶಾಸಕರು ತಾಲ್ಲೂಕಿನಲ್ಲಿ ಹಿಂದುಳಿದ ವರ್ಗಗಳ ಹಾಗೂ ಬಡವರ ಪರ ಕೆಲಸ ಮಾಡಿದ್ದಾರೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರೀನಿವಾಸ್ ಅವರು ಸಚಿವರಾಗಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಸಿದ್ದರಾಮಯ್ಯ ಅವರು ಕಾಡುಗೊಲ್ಲರಿಗೆ ಎಸ್ಟಿ ಮೀಸಲು ನೀಡಲು ಶಿಫಾರಸ್ಸು ಕಡತವನ್ನು ಕೇಂದ್ರ ಸರ್ಕಾರಕ್ಕೆ 2014 ರಲ್ಲಿ ಕಳುಹಿಸಿದ್ದಾರೆ. ಈ ಜೊತೆಗೆ ಅಭಿವೃದ್ದಿ ನಿಗಮ ಮಂಡಳಿ ತೆರೆದು ನಮ್ಮ ಸಮುದಾಯಕ್ಕೆ ಅನುದಾನಗಳನ್ನು ನೀಡಿದ್ದರು. ಇದೇ ಮಾದರಿಯಲ್ಲಿ ಶಿವಕುಮಾರ್ ಅವರು ಸಹ ಕಾಡು ಗೊಲ್ಲರನ್ನು ಗುರುತಿಸಿ ವಿಶೇಷ ಆದ್ಯತೆ ಹಾಗೂ ಅನುದಾನ ನೀಡಬೇಕು ಎಂದು ಒತ್ತಾಯಿಸಿದ ಅವರು ಕಾಡುಗೊಲ್ಲ ಸಮಾಜಕ್ಕೆ ರಾಜಕೀಯ ಪ್ರಾಧಾನ್ಯತೆ ನೀಡಲು ಒಂದಾದರೂ ವಿಧಾನ ಪರಿಷತ್ ಸದಸ್ಯ ಸ್ಥಾನ ಒದಗಿಸ ಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Gubbi News: ಇಂದು ಅದ್ದೂರಿ ಬಸವ ಜಯಂತಿ: ಯಶಸ್ವಿಗೆ ಆಚರಣಾ ಸಮಿತಿ ಮನವಿ
ಕಾಡುಗೊಲ್ಲ ಅಭಿವೃದ್ದಿ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಕೆ.ಸದಾಶಿವಯ್ಯ ಮಾತನಾಡಿ ಕಾಂಗ್ರೆಸ್ ಆಡಳಿತ ತರುವಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರ ಶ್ರಮ ವಿದೆ. ಸಮಸ್ತ ಕಾಡುಗೊಲ್ಲರ ಪರವಾಗಿ ಶಿವಕುಮಾರ್ ಅವರಿಗೆ ಅಭಿನಂದನೆಗಳು. ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದ ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲರನ್ನು ಮುಖ್ಯವಾಹಿನಿಗೆ ತರಲು ಮುಖ್ಯಮಂತ್ರಿಗಳು ಗುಬ್ಬಿಯ ಶ್ರೀನಿವಾಸ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಎಲ್ಲಾ ಓಬಿಸಿ ವರ್ಗಗಳನ್ನು ಕೈಹಿಡಿದ ವಾಸಣ್ಣ ನಮ್ಮ ಸಮಾಜಕ್ಕೆ ಆಧಾರವಾಗಲಿದ್ದಾರೆ ಎಂದರು.
ಸಂಘದ ಗೌರವಾಧ್ಯಕ್ಷ ತಿಪ್ಪಯ್ಯ ಮಾತನಾಡಿ ನಾಗರೀಕ ಸಮಾಜದಿಂದ ಪ್ರತ್ಯೇಕ ಹಳ್ಳಿ ರಚಿಸಿಕೊಂಡು ಪಶುಪಾಲನೆ ಮೂಲಕ ಜೀವನ ಸಾಗಿಸುವ ಕಾಡು ಗೊಲ್ಲರ ಯೋಗಕ್ಷೇಮ ಈ ಬಾರಿಯ ಹೊಸ ಸಚಿವ ಸಂಪುಟ ಮಾಡುವ ನಿರೀಕ್ಷೆ ಇದೆ. ಶಿವಕುಮಾರ್ ಅವರ ಕಾರ್ಯವೈಖರಿಗೆ ಸಾಥ್ ನೀಡುವ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಿದರೆ ಎಲ್ಲಾ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗಲಿದೆ. ಈ ನಿಟ್ಟಿನಲ್ಲಿ ಬಡವರ ಪರ ಕೆಲಸ ಮಾಡುವ ಶ್ರೀನಿವಾಸ್ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಬೇಕು. ಹಾಗೆಯೇ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಡುಗೊಲ್ಲ ಅಭಿವೃದ್ದಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡವೀರಯ್ಯ, ತಾಲ್ಲೂಕು ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಕುಮಾರ್, ಖಜಾಂಚಿ ಮುದ್ದೇನಹಟ್ಟಿ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಜಗದೀಶ್, ಹೋಬಳಿ ಅಧ್ಯಕ್ಷ ಮೋಹನ್ ಸೇರಿದಂತೆ ಹಲವು ಮುಖಂಡರು ಇದ್ದರು.