ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ ನೀಡಿ: ಸರ್ಕಾರಕ್ಕೆ ಕಾಂಗ್ರೆಸ್​​ ಶಾಸಕ ರಂಗನಾಥ್ ಆಗ್ರಹ

HD Ranganath: ಕೃಷಿಯಲ್ಲಿ ತೊಡಗಿರುವ ಯುವಕರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಭತ್ಯೆ ಹಾಗೂ ಸ್ಥಾನಮಾನ ಘೋಷಿಸುವಂತೆ ತುಮಕೂರಿನ ಕುಣಿಗಲ್‌ ಕ್ಷೇತ್ರದ ಶಾಸಕ ಡಾ.ಎಚ್​​.ಡಿ. ರಂಗನಾಥ್ ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಶಾಸಕ ಡಾ. ಎಚ್​​.ಡಿ. ರಂಗನಾಥ್ ಮತ್ತು ಸಾಂದರ್ಭಿಕ ಚಿತ್ರ

ತುಮಕೂರು, ಫೆ. 19: ರೈತರ ಮಕ್ಕಳಿಗೆ, ಹಳ್ಳಿಯಲ್ಲಿ ವಾಸಿಸುವವರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಸಮಸ್ಯೆ ಸದ್ಯ ಬೃಹದಾಕಾರವಾಗಿ ಬೆಳೆದಿದೆ. ಈ ಬಗ್ಗೆ ಹಲವು ನಾಯಕರು ಈಗಾಗಲೇ ಧ್ವನಿ ಎತ್ತಿದ್ದಾರೆ. ಕಳೆದ ತಿಂಗಳು ಬೆಳಗಾವಿ ಸುವರ್ಣ ವಿಧಾನ ಸೌಧದದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಪುಟ್ಟಣ್ಣ (Puttanana) ಈ ವಿಚಾರ ಪ್ರಸ್ತಾವಿಸಿ, ರಾಜ್ಯದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡುವವರೇ ಇಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ರೈತರ ಮಕ್ಕಳ ಖಾತೆಗೆ 10 ಲಕ್ಷ ರೂ. ಹಾಕಬೇಕು ಎಂದು ಆಗ್ರಹಿಸಿದ್ದರು. ಇದೀಗ ತುಮಕೂರಿನ ಕುಣಿಗಲ್​​ ಕ್ಷೇತ್ರದ ಕಾಂಗ್ರೆಸ್​​ ಶಾಸಕ ಡಾ. ಎಚ್​​.ಡಿ. ರಂಗನಾಥ್ (HD Ranganath) ಕೂಡ ಈ ಬಗ್ಗೆ ಧ್ವನಿ ಎತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಕೃಷಿಯಲ್ಲಿ ತೊಡಗಿರುವ ಗಂಡು ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಭತ್ಯೆ ಹಾಗೂ ಸ್ಥಾನಮಾನ ಘೋಷಿಸುವಂತೆ ಆಗ್ರಹಿಸಿದ್ದಾರೆ.

ಫೆಬ್ರವರಿ 18ರಂದು ಪತ್ರ ಬರೆದಿರುವ ಅವರು, ಯುವಕರ, ಕೃಷಿಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದಾರೆ. ಸದ್ಯ ಅವರು ಬರೆದ ಈ ಪತ್ರ ಭಾರಿ ಚರ್ಚೆಗೆ ಕಾರಣವಾಗಿದೆ.

Kunigal MLA

ಪತ್ರದಲ್ಲಿ ಏನಿದೆ?

ʼʼನನ್ನ ಮತ ಕ್ಷೇತ್ರ ಕುಣಿಗಲ್ ತಾಲೂಕು ಗ್ರಾಮೀಣ ಪ್ರದೇಶವಾಗಿದ್ದು, ಹೆಚ್ಚಿನವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರನ್ನು ಮದುವೆ ಆಗಲು ಹೆಣ್ಣು ಮಕ್ಕಳು ನಿರಾಕರಿಸುತ್ತಿದ್ದು, 30 ವರ್ಷ ದಾಟಿದರೂ ಅವರ ವಿವಾಹ ನಡೆಯುತ್ತಿಲ್ಲ. ಹೀಗಾಗಿ ಅವರು ತೊಂದರೆಗೆ ಸಿಲುಕಿದ್ದು, ವ್ಯವಸಾಯ ಮಾಡಿಕೊಂಡಿರುವವರನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಭತ್ಯೆ, ವಿಶೇಷ ಸ್ಥಾನಮಾನವನ್ನು ಘೋಷಿಸಬೇಕುʼʼ ತಿಳಿಸಿದ್ದಾರೆ.

ಸರ್ಕಾರದ ಹೊಸ ಯೋಜನೆಯು ರೈತ ಕುಟುಂಬಗಳ ಮೇಲಿನ ಸಾಮಾಜಿಕ ಒತ್ತಡವನ್ನು ಕಡಿಮೆ ಮಾಡಲಿದೆ ಮತ್ತು ಗ್ರಾಮೀಣ ಪ್ರದೇಶದ ಜನಜೀವನವನ್ನು ಉತ್ತಮಪಡಿಸಲಿದೆ ಎಂದು ರಂಗನಾಥ್ ವಿವರಿಸಿದ್ದಾರೆ.

ಮುಖ್ಯಮಂತ್ರಿಗೆ ಪತ್ರ ಬರೆದಿರುವ ಶಾಸಕ ರಂಗನಾಥ್‌, ಉದ್ದೇಶಿತ ಭತ್ಯೆ ಗ್ರಾಮೀಣ-ನಗರ ಅಂತರವನ್ನು ಕಡಿಮೆ ಮಾಡಲು, ರೈತರ ಕುಟುಂಬಗಳಿಗೆ ಬೆಂಬಲ ನೀಡಲು ಮತ್ತು ಕೃಷಿ ಸಮುದಾಯಗಳು ಎದುರಿಸುತ್ತಿರುವ ಕಷ್ಟಗಳತ್ತ ಗಮನ ಸೆಳೆಯಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಮದುವೆಯಾಗದ ರೈತ ಮಕ್ಕಳ ಖಾತೆಗೆ 10 ಲಕ್ಷ ರುಪಾಯಿ ಹಾಕಿ; ಪುಟ್ಟಣ್ಣ ಆಗ್ರಹ

ಗಮನ ಸೆಳೆದಿದ್ದ ಪುಟ್ಟಣ್ಣ

ಡಿಸೆಂಬರ್‌ನಲ್ಲಿ ಇದೇ ವಿಚಾರವಾಗಿ ಸರ್ಕಾರದ ಗಮನ ಸೆಳೆದಿದ್ದ ಪುಟ್ಟಣ್ಣ, ʼʼರಾಜ್ಯದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡುವವರೇ ಇಲ್ಲ. ಈ ಹಿನ್ನೆಲೆಯಲ್ಲಿ ತಾಲೂಕುವಾರು ಮಠಗಳನ್ನು ಸರ್ಕಾರ ನಿರ್ಮಿಸಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಈಗಾಗಲೇ ಹೆಣ್ಣು ಸಿಗಲಿ ಎಂದು ಮಲೆಮಹದೇಶ್ವರ ಮತ್ತು ಧರ್ಮಸ್ಥಳ ಯಾತ್ರೆ ಕೈಗೊಂಡಿದ್ದಾರೆ. ಮದುವೆಯಾಗದ ರೈತರ ಮಕ್ಕಳಿಗಾಗಿ ಪ್ರೋತ್ಸಾಹ ಧನ ಯೋಜನೆ ರೂಪಿಸಬೇಕುʼʼ ಎಂದು ಆಗ್ರಹಿಸಿದ್ದರು.

ʼʼಸರ್ಕಾರ ರೈತರ ಮಕ್ಕಳ ನೆರವಿಗೆ ಬರಬೇಕು. ಹಾಗೆ ನೋಡಿದರೆ 25 ಲಕ್ಷ ರುಪಾಯಿ ಕೊಟ್ಟರೆ ಉತ್ತಮ. ಆದರೆ ಕನಿಷ್ಠ 10 ಲಕ್ಷ ರುಪಾಯಿ ಠೇವಣಿ ಇಡುವಂತಾಗಬೇಕು. ಈ ಮೂಲಕ ರೈತರ ಮಕ್ಕಳನ್ನು ಮದುವೆಯಾಗಲು ಉತ್ತೇಜನ ನೀಡಬೇಕುʼʼ ಎಂದು ಹೇಳಿದ್ದರು.

Ramesh Ballamoole

View all posts by this author