ಚಿಕ್ಕನಾಯಕನಹಳ್ಳಿ, ಸೆ.16: ಅಬಕಾರಿ ಇಲಾಖೆಯ ಗುತ್ತಿಗೆ ಆಧಾರದ ವಾಹನದ ಚಾಲಕನೇ ದಾಳಿ ಕಾರ್ಯಾಚರಣೆಯ ಮಾಹಿತಿಯನ್ನು ಮುಂಚಿತವಾಗಿ ಅಕ್ರಮ ಚಟುವಟಿಕೆ ನಡೆಸುವವರಿಗೆ ತಿಳಿಸಿ, ಅವರು ತಪ್ಪಿಸಿಕೊಳ್ಳಲು ಸಹಕರಿಸುತ್ತಿದ್ದಾರೆ ಎಂದು ಅಬಕಾರಿ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ (Chikkanayakanahalli News) ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಯಿತು.
ಚಾಲಕನನ್ನು ಕೆಲಸದಿಂದ ತೆಗೆದುಹಾಕಲು ಕ್ರಮ ಕೈಗೊಂಡರೂ ಒತ್ತಡ ತಂದು ಪುನಃ ಅದೇ ವ್ಯಕ್ತಿಯನ್ನು ಕೆಲಸಕ್ಕೆ ಮುಂದುವರಿಸುವ ಪರಿಸ್ಥಿತಿ ಇದೆ. ಕೆಲವೊಮ್ಮೆ ಖಾಸಗಿ ವಾಹನಗಳನ್ನು ಬಳಸಿಕೊಂಡು ದಾಳಿ ನಡೆಸಬೇಕಾಗಿದೆ ಎಂದು ಅಧಿಕಾರಿ ಅಸಹಾಯಕತೆ ತೋಡಿಕೊಂಡಿದ್ದಾರೆ.
ಎತ್ತಿನಹೊಳೆ ಯೋಜನೆಯ ಕಾಮಗಾರಿ ಬಹುತೇಕ ಪೂರ್ಣ
ಸಭೆಯಲ್ಲಿ ಶಾಸಕ ಸಿ.ಬಿ. ಸುರೇಶ್‌ಬಾಬು ಮಾತನಾಡಿ, ಎತ್ತಿನಹೊಳೆ ಯೋಜನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅ.21ರೊಳಗೆ ಟ್ರಯಲ್ ನಡೆಸಲಾಗುವುದು ಎಂದು ತಿಳಿಸಿದರು. ಈ ವೇಳೆ ಕೃಷಿಕ ಸಮಾಜದ ಅಧ್ಯಕ್ಷ ಗಂಗಾಧರಯ್ಯ ಪ್ರತಿಕ್ರಿಯಿಸಿ, ಬೋರನ ಕಣಿವೆಯಿಂದ ಈ ಬಾರಿ ನೀರು ಹೊರಗೆ ಬಿಡಬಾರದು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಖಂಡಿತವಾಗಿಯೂ ನೀರು ಹೊರಗೆ ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿಗಳು ಸಾಲದ ಒತ್ತಡದಲ್ಲಿದ್ದು, 15ನೇ ಹಣಕಾಸು ಯೋಜನೆಯಡಿ ಅನುದಾನ ಬಿಡುಗಡೆಯಾಗದಿದ್ದರೆ ಪಂಚಾಯಿತಿಗಳನ್ನು ನಡೆಸುವುದು ಕಷ್ಟವಾಗಲಿದೆ ಎಂದು ಶಾಸಕರು ಹೇಳಿದರು. ಚುನಾವಣೆ ನಂತರ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದರು.
ಹುಳಿಯಾರು ಹೋಬಳಿಯ ಸಾಲಾಪುರ ಗೇಟ್ ಸಮೀಪದ ಪೌಡರ್ ತಯಾರಿಕಾ ಘಟಕದ ಹೆಸರಿನಲ್ಲಿ ಸರ್ಕಾರಿ ಜಮೀನು, ಕೆರೆ ಪ್ರದೇಶ, ಏರಿ ಹಾಗೂ ಅರಣ್ಯ ಪ್ರದೇಶಗಳಿಂದ ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು. ಮುತ್ತುಗ, ಆಲ, ಹತ್ತಿ ಸೇರಿದಂತೆ ವಿವಿಧ ಜಾತಿಯ ಮರಗಳನ್ನು ಟ್ರ್ಯಾಕ್ಟರ್‌ಗಳ ಮೂಲಕ ಸಾಗಿಸಿ ಪೌಡರ್ ಮಾಡಿ ಬೇರೆಡೆಗೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಲಾಯಿತು. ಜಿಪಿಎಸ್ ಸ್ಥಳ ಮಾಹಿತಿ, ಛಾಯಾಚಿತ್ರ ಹಾಗೂ ವಿಡಿಯೊಗಳೊಂದಿಗೆ ದೂರು ನೀಡಿದ್ದರೂ ಕ್ರಮವಾಗಿಲ್ಲ ಎಂದು ಸಭೆಯ ಗಮನಕ್ಕೆ ತರಲಾಯಿತು.
ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು: ಜಿಲ್ಲಾಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ಸೂಚನೆ
ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹೊನ್ನೇಬಾಗಿ ಶಶಿಧರ್ ಮಾತನಾಡಿ, ಅರಣ್ಯ ಇಲಾಖೆಯ ಕೆಲ ಗಾರ್ಡ್‌ಗಳು 5 ಸಾವಿರ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ ಮಾಡಿದರು. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ವಿವಿಧ ಕಾಲೋನಿಗಳಲ್ಲಿ ಅಳವಡಿಸಿರುವ ಹೈಮಾಸ್ಕ್ ದೀಪಗಳ ಗುಣಮಟ್ಟದ ಬಗ್ಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‌ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ನರೇಗಾ ಯೋಜನೆಯಡಿ ನಿರ್ಮಿಸಿರುವ ಸುಮಾರು 200 ಕೊಟ್ಟಿಗೆಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಕೆಡಿಪಿ ಸದಸ್ಯ ದೇವರಾಜು ಆರೋಪಿಸಿದರು. ಬಿಲ್ ಡಿಲೀಟೇಷನ್ ಹಾಗೂ ಜಾಬ್‌ಕಾರ್ಡ್ ಮಿಸ್‌ಮ್ಯಾಚ್ ಸಮಸ್ಯೆ ಪರಿಹರಿಸಿ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಕೇವಲ ಶಿಕ್ಷಣ ಇಲಾಖೆಯ ಸಾಧನೆಯಲ್ಲ; ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಪರಿಶ್ರಮದ ಫಲವಾಗಿದೆ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಹೇಳಿದರು. ಮಕ್ಕಳ ಮೇಲೆ ಅಂಕಗಳ ಒತ್ತಡ ಹೇರದೆ ಅವರ ಆಸಕ್ತಿ ಹಾಗೂ ಸಾಮರ್ಥ್ಯಕ್ಕೆ ಪ್ರೋತ್ಸಾಹ ನೀಡಬೇಕು ಎಂದರು. ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳ ಹಿನ್ನೆಲೆಯಲ್ಲಿ, ಅಧಿಕಾರಿಗಳು ಅವರ ಮನೆಗಳಿಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹಾಗೂ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕ್ರಮ ಕೈಗೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಬಿಇಒ ಕಾಂತರಾಜು ಸಮಜಾಯಿಷಿ ನೀಡಿ , ಶಾಲೆಗಳಲ್ಲಿ ಮೊಬೈಲ್ ಬಳಕೆಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗಿದೆ. ಕೆಲವು ಮಕ್ಕಳು ಮೊಬೈಲ್ ನೀಡದಿದ್ದರೆ ಶಾಲೆಗೆ ಬರುವುದಿಲ್ಲ ಎನ್ನುವ ಸಂದರ್ಭಗಳಿವೆ. ಕೆಲವು ಘಟನೆಗಳು ಮನೆಗಳಲ್ಲೇ ನಡೆದಿದ್ದು, ಶಾಲೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಡೆದಿರುವ ಬಗ್ಗೆ ಶಾಸಕರು ಪ್ರಶ್ನಿಸಿದರು. ಇಲಾಖೆ ಮಟ್ಟದಲ್ಲಿ ಸಾಂಕೇತಿಕವಾಗಿ ಕಾರ್ಯಕ್ರಮ ನಡೆಸಲಾಗಿದ್ದು, ಮಾಹಿತಿ ತಡವಾಗಿ ಬಂದಿತ್ತು ಎಂದು ಅಧಿಕಾರಿ ಸ್ಪಷ್ಟಪಡಿಸಿದರು. ಮಳೆಯ ಕೊರತೆಯಿಂದ ರಾಗಿ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಕೃಷಿ ಸಹಾಯಕ ಅಧಿಕಾರಿ ಶಿವರಾಜ್ ತಿಳಿಸಿದರು. ಮುಂದಿನ ದಿನಗಳಲ್ಲಿ ಮಳೆಯಾದರೆ ಸಿರಿಧಾನ್ಯ ಬಿತ್ತನೆಗೆ ಅಗತ್ಯ ಬೀಜ ದಾಸ್ತಾನು ಮಾಡಿಕೊಳ್ಳಲಾಗುವುದು ಎಂದರು. ಪಶುಸಂಗೋಪನೆ ಇಲಾಖೆ ಅಧಿಕಾರಿ ಕಾಂತರಾಜು, 15ರಿಂದ 16 ವಾರಗಳಿಗೆ ಸಾಕಾಗುವಷ್ಟು ಮೇವಿನ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.
ಸೆ.21ರಿಂದ ಮೂರು ದಿನಗಳ ಕಾಲ ನಡೆಯುವ ವಿಶೇಷ ಅಧಿವೇಶನದಲ್ಲಿ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಕುರಿತು ಚರ್ಚಿಸಲಾಗುವುದು ಎಂದು ಶಾಸಕರು ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು. ಜನಪ್ರತಿನಿಧಿಗಳು ಪ್ರಸ್ತಾಪಿಸಿದ ಸಮಸ್ಯೆಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.