Madhugiri News: ಗ್ರಾಮಸ್ಥರ ಹೆಸರಿನಲ್ಲಿ ಸಾಲ ಪಡೆದು ಪರಾರಿಯಾದ ದಂಪತಿ!
Madhugiri News: ಗ್ರಾಮಸ್ಥರ ಹೆಸರಿನಲ್ಲಿ ಸುಮಾರು 10ಕ್ಕೂ ಅಧಿಕ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದು ಅದನ್ನು ಮರು ಪಾವತಿಸದೇ ಹಣದ ಸಮೇತ ದಂಪತಿಗಳು ಪರಾರಿಯಾಗಿದ್ದಾರೆ ಎಂದು ಮಧುಗಿರಿ ತಾಲೂಕಿನ ಪುರವರ ಹೋಬಳಿ ದೊಡ್ಡಹೊಸಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಮಧುಗಿರಿ ತಾಲೂಕಿನ ಪುರವರ ಹೋಬಳಿ ದೊಡ್ಡಹೊಸಹಳ್ಳಿ ಗ್ರಾಮದ ಪ್ರತಾಪ ಮತ್ತು ರತ್ನಮ್ಮ ದಂಪತಿ.

ಮಧುಗಿರಿ: ಸುಮಾರು 10ಕ್ಕೂ ಅಧಿಕ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಗ್ರಾಮಸ್ಥರ ಹೆಸರಿನಲ್ಲಿ ಸಾಲ ಪಡೆದು ಅದನ್ನು ಮರು ಪಾವತಿಸದೇ ಹಣದ ಸಮೇತ ದಂಪತಿ ಪರಾರಿಯಾಗಿದ್ದಾರೆ ಎಂದು ಮಧುಗಿರಿ (Madhugiri News) ತಾಲೂಕಿನ ಪುರವರ ಹೋಬಳಿ ದೊಡ್ಡಹೊಸಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕಿನ ಪುರವರ ಹೋಬಳಿ ದೊಡ್ಡಹೊಸಹಳ್ಳಿ ಗ್ರಾಮದ ಪ್ರತಾಪ ಮತ್ತು ರತ್ನಮ್ಮ ಎಂಬುವರು ಸುಮಾರು 35 ಮಂದಿಯ ಆಧಾರ್ ಕಾರ್ಡ್, ಇತರೆ ದಾಖಲೆ ಪಡೆದಿದ್ದರು. 10 ಮೈಕ್ರೋ ಫೈನಾನ್ಸ್ ಕಂಪನಿಗಳಿಂದ 45 ರಿಂದ 50 ಲಕ್ಷದ ವರೆಗೆ ಸಾಲ ಮಂಜೂರು ಮಾಡಿಸಿದ್ದರು. ಜನರಿಗೆ ಮಂಜೂರಾದ ಸಾಲದ ಹಣ ಪಡೆದು ನಾವೇ ಕಟ್ಟಿಕೊಂಡು ಹೋಗುತ್ತೇವೆ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ಇಲ್ಲಿನ ಗ್ರಾಮಸ್ಥರು ಗ್ರಾಮಸ್ಥರು ಆರೋಪಿಸಿದ್ದಾರೆ.
ದಂಪತಿಗಳಿಗೆ ಮೈಕ್ರೋ ಫೈನಾನ್ಸ್ ಕಂಪನಿ ಜತೆಗೆ ಒಡನಾಟ ಇಟ್ಟುಕೊಂಡು ಪ್ರಾರಂಭದಲ್ಲಿ ಕೆಲವರಿಗೆ ಸಾಲ ಕೊಡಿಸಿದ್ದರು. ನಂತರ ಗ್ರಾಮದ 35 ಮಂದಿಗೆ ಸಾಲ ಕೊಡಿಸಿದ್ದಾರೆ. ಪ್ರತಿ ತಿಂಗಳು ನಾವೇ ಈ ಹಣವನ್ನು ಕಟ್ಟಿಕೊಂಡು ಹೋಗುತ್ತೇವೆ ಎಂದು ನಂಬಿಸಿ ಹಣದ ಸಮೇತ 2 ತಿಂಗಳ ಹಿಂದೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಮರು ಪಾವತಿ ಮಾಡುವಂತೆ ಗ್ರಾಮಸ್ಥರಿಗೆ ನೋಟಿಸ್ ಜಾರಿ ಮಾಡಿವೆ. ಫೈನಾನ್ಸ್ ಸಿಬ್ಬಂದಿ ಪ್ರತಿ ದಿನ ಮನೆಗಳ ಮುಂದೆ ಬಂದು ಸಾಲ ಕಟ್ಟುವಂತೆ ಒತ್ತಡ ಹೇರುತ್ತಿದ್ದಾರೆ. ನಮ್ಮ ಹಣವನ್ನು ಪಡೆದು ದಂಪತಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಈ ವೇಳೆ ಗ್ರಾಮದ ರಂಗಮ್ಮ, ಸಾವಿತ್ರಮ್ಮ, ನರಸಮ್ಮ, ಕೋಟೆಮ್ಮ ಸಿದ್ದಗಂಗಮ್ಮ, ರತ್ನಮ್ಮ, ಎಸ್.ರಂಗಮ್ಮ, ಕೋಮಲಮ್ಮ, ಲಕ್ಷ್ಮೀದೇವಮ್ಮ, ಮಂಜುಳಾ, ವೀರನಾಗಮ್ಮ, ಹನುಮಕ್ಕ, ಮಂಜುಳಮ್ಮ, ಮೇಘಾ, ಪುಟ್ಟ ತಾಯಪ್ಪ ಹಾಜರಿದ್ದರು.
ಸಾಲ ಪಡೆದು ಪರಾರಿಯಾಗಿಲ್ಲ
ನಾವು ಗ್ರಾಮಸ್ಥರ ಹೆಸರಿನಲ್ಲಿ ಯಾವುದೇ ರೀತಿಯ ಸಾಲ ಪಡೆದು ಪರಾರಿಯಾಗಿಲ್ಲ. ಯಾವುದೇ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಈ ಬಗ್ಗೆ ಸುಮ್ಮನೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ದಂಪತಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | R Ashok: ಕಾಂಗ್ರೆಸ್ ಸರ್ಕಾರದಿಂದ ರೌಡಿಗಳಿಗೆ ಕೈ ತುಂಬಾ ಉದ್ಯೋಗ: ಆರ್.ಅಶೋಕ್