ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Madhugiri News: ಬಂಡೆಯಿಂದ ಕೆಳಗೆ ಬಿದ್ದು ಮೂರು ವರ್ಷದ ಹೆಣ್ಣು ಕರಡಿಗೆ ಗಂಭೀರ ಗಾಯ

Madhugiri News: ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಬಿದರೆಕೆರೆ ಗ್ರಾಮದಲ್ಲಿ ಪರಸ್ಪರ ಕಾದಾಟ ನಡೆಸುತ್ತಿದ್ದ ಎರಡು ಕರಡಿಗಳು ಬಂಡೆಯಿಂದ ಕೆಳಗೆ ಬಿದ್ದ ಪರಿಣಾಮ, ಮೂರು ವರ್ಷದ ಹೆಣ್ಣು ಕರಡಿಯೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮಧುಗಿರಿ, ಸೆ.1: ತಾಲೂಕಿನ ಮಿಡಿಗೇಶಿ ಹೋಬಳಿಯ ಬಿದರೆಕೆರೆ ಗ್ರಾಮದಲ್ಲಿ (Madhugiri News) ಪರಸ್ಪರ ಕಾದಾಟ ನಡೆಸುತ್ತಿದ್ದ ಎರಡು ಕರಡಿಗಳು ಬಂಡೆಯಿಂದ ಕೆಳಗೆ ಬಿದ್ದ ಪರಿಣಾಮ, ಮೂರು ವರ್ಷದ ಹೆಣ್ಣು ಕರಡಿಯೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗ್ರಾಮದ ಜಮೀನೊಂದರಲ್ಲಿ ದೊಡ್ಡ ಗಾತ್ರದ ಬಂಡೆಯ ಮೇಲೆ ಎರಡು ಕರಡಿಗಳು ಉಗ್ರವಾಗಿ ಕಾದಾಡುತ್ತಿದ್ದವು. ಕಾದಾಟದ ರಭಸ ತಾಳಲಾರದೆ ಎರಡೂ ಕರಡಿಗಳು ಬಂಡೆಯಿಂದ ಕೆಳಗೆ ಉರುಳಿಬಿದ್ದಿದ್ದು, ಮೂರು ವರ್ಷದ ಹೆಣ್ಣು ಕರಡಿಯ ಮುಂಭಾಗದ ಕಾಲಿಗೆ ತೀವ್ರ ಪೆಟ್ಟಾಗಿದೆ.

ಗ್ರಾಮಸ್ಥರ ಸಮಯಪ್ರಜ್ಞೆ

ಕರಡಿಯು ತೀವ್ರ ನೋವಿನಿಂದ ಕಿರುಚಾಡುವುದನ್ನು ಗಮನಿಸಿದ ಸ್ಥಳೀಯರು, ಕೂಡಲೇ ಎಚ್ಚೆತ್ತುಕೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡುವ ಮೂಲಕ ತಮ್ಮ ಮಾನವೀಯತೆ ಮೆರೆದಿದ್ದಾರೆ. ಗ್ರಾಮಸ್ಥರ ಈ ಸಮಯಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಅರಣ್ಯ ಇಲಾಖೆ ಕಾರ್ಯಾಚರಣೆ

ವಿಷಯ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ಸುರೇಶ್‌ ಎಚ್.ಎಂ. ಹಾಗೂ ಡಿಆರ್‌ಎಫ್‌ಒ ಶಾಲಿನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಣ್ಯ ರಕ್ಷಕರಾದ ಮಹೇಶ್ ಮತ್ತು ಶ್ರೀಧರ್ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕರಡಿಯನ್ನು ರಕ್ಷಿಸಿದರು.

ಚಿಕಿತ್ಸೆಗಾಗಿ ಸ್ಥಳಾಂತರ

ಬಂಡೆಯಿಂದ ಬಿದ್ದ ರಭಸಕ್ಕೆ ಕರಡಿಯ ಮುಂಭಾಗದ ಕಾಲು ಮುರಿದಿರುವುದು ದೃಢಪಟ್ಟಿದೆ. ತಕ್ಷಣವೇ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕರಡಿಯನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಕಳುಹಿಸಿಕೊಡಲಾಗಿದೆ.

ನೇಪಾಳದಲ್ಲಿ ಭೀಕರ ಪ್ರವಾಹ; ಬಿಹಾರಕ್ಕೆ ತೇಲಿ ಬಂತು ವಿಚಿತ್ರ ಮೀನುಗಳು, ತಿಂದ್ರೆ ಸಮಸ್ಯೆ ಗ್ಯಾರಂಟಿ!

ಗ್ರಾಮಸ್ಥರಲ್ಲಿ ಆತಂಕ

ಜಮೀನು ಹಾಗೂ ಗ್ರಾಮದ ಸುತ್ತಮುತ್ತ ಕರಡಿಗಳ ಓಡಾಟ ಹೆಚ್ಚಾಗಿರುವುದರಿಂದ ಬಿದರೆಕೆರೆ ನಿವಾಸಿಗಳಲ್ಲಿ ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ತುರ್ತು ಮುನ್ನೆಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಗಾಯಗೊಂಡ ವನ್ಯಜೀವಿಯನ್ನು ಸಕಾಲದಲ್ಲಿ ರಕ್ಷಿಸಿ, ತ್ವರಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಕ್ಕೂ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.