ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MB Patil: ತುಮಕೂರಿನಲ್ಲಿ ಕ್ರಿಕೆಟ್ ಮೈದಾನ: 41ಎಕರೆ ಸ್ವಾಧೀನ ಪತ್ರ ಹಸ್ತಾಂತರಿಸಿದ ಎಂ.ಬಿ.ಪಾಟೀಲ್‌

ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಕೆಐಎಡಿಬಿ ಮೂಲಕ ಒದಗಿಸುವ 41 ಎಕರೆ ಜಮೀನಿನ ಸ್ವಾಧೀನ ಪತ್ರವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆ.ಎಸ್.ಸಿ.ಎ) ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಹಸ್ತಾಂತರಿಸಿದರು.

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ: ಎಂ.ಬಿ.ಪಾಟೀಲ್‌

Profile Siddalinga Swamy May 5, 2025 11:11 PM

ತುಮಕೂರು: ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಕೆಐಎಡಿಬಿ ಮೂಲಕ ಒದಗಿಸುವ 41 ಎಕರೆ ಜಮೀನಿನ ಸ್ವಾಧೀನ ಪತ್ರವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆ.ಎಸ್.ಸಿ.ಎ.) ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (MB Patil) ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಈಗ ಕೊಟ್ಟಿರುವ ಜಾಗದ ಪಕ್ಕದಲ್ಲೇ ಇರುವ 6.5 ಎಕರೆ ಖರಾಬು ಜಮೀನನ್ನು ಕೆಎಸ್‌ಸಿಎಗೆ ಒದಗಿಸಬೇಕು ಎಂದು ಮನವಿ ಸಲ್ಲಿಸಿದರು.

ಇದಕ್ಕೆ ಸ್ಪಂದಿಸಿದ ಸಚಿವರು, ಈ ಮನವಿಯ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ತುಮಕೂರು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣಗಳು ಬರಬೇಕಾದ ಅಗತ್ಯವಿದೆ ಎಂದರು.

ಬೆಂಗಳೂರಿಗೆ ತಾಗಿಕೊಂಡಿರುವ ತುಮಕೂರು ಜಿಲ್ಲೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅಲ್ಲಿ ಒಂದು ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ಅಗತ್ಯವಿದೆ ಎಂದು ಗೃಹ ಸಚಿವ ಪರಮೇಶ್ವರ ಕೂಡ ಹೇಳುತ್ತಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ನಗರದ ಮಧ್ಯಭಾಗದಲ್ಲಿದೆ. ಹೀಗಾಗಿ ಇಲ್ಲಿ ಪಾರ್ಕಿಂಗ್, ಸಂಚಾರ ದಟ್ಟಣೆ ಇತ್ಯಾದಿ ಸಮಸ್ಯೆಗಳಿವೆ. ತುಮಕೂರಿನಲ್ಲೂ ಒಂದು ಕ್ರೀಡಾಂಗಣ ಬಂದರೆ ಅಲ್ಲಿನ ಪ್ರತಿಭೆಗಳಿಗೆ ಉಜ್ವಲ ಅವಕಾಶಗಳು ಸಿಗಲಿವೆ ಎಂದು ಅವರು ತಿಳಿಸಿದರು.

ವಿಜಯಪುರದಲ್ಲೂ ಇಂಥದ್ದೊಂದು ಕ್ರೀಡಾಂಗಣ ಬರಬೇಕು ಎನ್ನುವುದು ತಮ್ಮ ಕನಸಾಗಿದೆ. ಇಂತಹ ಮೈದಾನದಲ್ಲಿ ಪಂಚತಾರಾ ಹೋಟೆಲ್ ಸೇರಿ ಅನೇಕ ಅನುಕೂಲಗಳು ಬರಲಿವೆ ಎಂದು ಸಚಿವರು ಹೇಳಿದರು. ಕ್ರೀಡೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ 41 ಎಕರೆ ಜಾಗವನ್ನು ರಿಯಾಯಿತಿ ದರದಲ್ಲಿ ಅಂದರೆ ಎಕರೆಗೆ ₹15 ಲಕ್ಷದಂತೆ ನೀಡಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಈ ಸುದ್ದಿಯನ್ನೂ ಓದಿ | MB Patil: ನಂದಿ, ಕೃಷ್ಣಾ ಸಕ್ಕರೆ ಕಾರ್ಖಾನೆಗಳಿಗೆ ಹಣಕಾಸು ನೆರವು: ಸಚಿವ ಎಂ.ಬಿ.ಪಾಟೀಲ್‌

ಕಾರ್ಯಕ್ರಮದಲ್ಲಿ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.