ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi News: ಗುಬ್ಬಿಯಲ್ಲಿ ಅರ್ಥಪೂರ್ಣ ಕಾರ್ಗಿಲ್ ಮತ್ತು ಆಪರೇಷನ್ ಸಿಂಧೂರ ವಿಜಯೋತ್ಸವ

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ತಾಲ್ಲೂಕು ಘಟಕ ಆಯೋಜಿಸಿದ್ದ ಕಾರ್ಗಿಲ್ ಮತ್ತು ಆಪರೇಷನ್ ಸಿಂಧೂರ ವಿಜಯೋತ್ಸವ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವಾರ್ಪಣೆ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ, ಹುತಾತ್ಮರ ಭಾವಚಿತ್ರ ಮೆರವಣಿಗೆ ಮಾಡುವ ಮೂಲಕ ಅರ್ಥಪೂರ್ಣವಾಗಿ ನಡೆಸಲಾಯಿತು.

ಗುಬ್ಬಿ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ತಾಲ್ಲೂಕು ಘಟಕ ಆಯೋಜಿಸಿದ್ದ ಕಾರ್ಗಿಲ್ ಮತ್ತು ಆಪರೇಷನ್ ಸಿಂಧೂರ ವಿಜಯೋತ್ಸವ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವಾರ್ಪಣೆ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ, ಹುತಾತ್ಮರ ಭಾವಚಿತ್ರ ಮೆರವಣಿಗೆ ಮಾಡುವ ಮೂಲಕ ಅರ್ಥಪೂರ್ಣವಾಗಿ ನಡೆಸಲಾಯಿತು.

ತೊರೆಮಠದ ಶ್ರೀ ಅಟವಿ ಚನ್ನಬಸವ ಸ್ವಾಮೀಜಿ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿ, ದೇಶದೊಳಗೆ ನೆಮ್ಮದಿ ಬದುಕಿನ ಜೊತೆ ಸಾಧನೆ ಮಾಡುವುದಕ್ಕಿಂತ ದೇಶದ ಗಡಿಯಲ್ಲಿ ಚಳಿ ಮಳೆ ಲೆಕ್ಕಿಸದೆ 24 ಗಂಟೆ ನಿಂತು ದೇಶ ಕಾಯುವ ಸೈನಿಕನ ಸಾಧನೆ ಬಹು ಹಿರಿಮೆಗೆ ಪಾತ್ರವಾಗುತ್ತದೆ. ಕಾರ್ಗಿಲ್ ಯುದ್ಧದಲ್ಲಿ ನಾವು ಕಳೆದುಕೊಂಡ ವೀರ ಯೋಧರ ಸ್ಮರಣೆ ದೇಶದ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ದೇಶಕ್ಕಾಗಿ ಪ್ರಾಣ ತೆತ್ತ ಯೋಧನ ಕುಟುಂಬದ ನೋವು ದೇಶ ಸೇವೆ ಈಶ ಸೇವೆ ಎಂಬಂತೇ ಮೌನ ಸ್ಮರಣೆಯಲ್ಲಿ ಕೂಡಿದೆ. ಇಂತಹ ಯೋಧರ ಸ್ಮರಣೆ ಮಾಡಿದ ಮಾಜಿ ಸೈನಿಕರ ಸಂಘದ ಕಾರ್ಯಕ್ರಮ ಹೆಮ್ಮೆಯ ಕಾರ್ಯಕ್ರಮ ಎನಿಸಿದೆ ಎಂದರು.

ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ದೇಶದ ಭದ್ರತೆ ನಮ್ಮ ನೆಮ್ಮದಿಗೆ ಕಾರಣ. ದೇಶದ ಬೆನ್ನೆಲುಬು ರೈತ ಹಾಗೂ ಸೈನಿಕ ಎಂದರೆ ತಪ್ಪಿಲ್ಲ. ಸ್ವಾರ್ಥ ತುಂಬಿದ ಈ ಸಮಾಜದಲ್ಲಿ ನಿಸ್ವಾರ್ಥ ಸೇವೆ ಸೈನಿಕರಿಂದ ಮಾತ್ರ ಸಿಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಭಿವೃದ್ದಿಗೆ ಹೊಸ ಯೋಜನೆಗೆ ಮೀಸಲಿಟ್ಟಂತೆ ಸೈನಿಕರ ಕಲ್ಯಾಣಕ್ಕೆ ವಿಶೇಷ ಅನುದಾನ ಮೀಸಲಿಡಲಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: Gubbi News: ಕೆಪಿಎಸ್ಸಿ ಹಗರಣಕ್ಕೆ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ಶಾಸಕ ಎಂ.ಟಿ. ಕೃಷ್ಣಪ್ಪ

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ನಾವು ನಮ್ಮ ಕುಟುಂಬ ಎಂದು ಸ್ವಾರ್ಥ ಬದುಕು ನಡೆಸುವ ಜನರ ನಡುವೆ ದೇಶಕ್ಕಾಗಿ ಪ್ರಾಣ ಪಣಕ್ಕಿಟ್ಟು ಸೇವೆ ಮಾಡುವ ನಮ್ಮ ಯೋಧರ ನಿಸ್ವಾರ್ಥ ಸೇವೆ ನಿಜವಾದ ಸಾರ್ಥಕ ಭಾವ ಎನಿಸಿದೆ. ಕಾರ್ಗಿಲ್ ಯುದ್ಧ ನಮ್ಮ ಸೈನಿಕರ ಹೋರಾಟದ ದಿಟ್ಟತನ ತೋರಿತ್ತು. ಹುತಾತ್ಮರಾದ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಜೊತೆ ವಿಜಯೋತ್ಸವ ದೇಶದ ಗೆಲುವು ಎನಿಸಿದೆ ಎಂದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಸೇನಾ ಮೆಡಲ್ ಸೇವಾ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ನವೀನ್ ನಾಗಪ್ಪ ಮಾತನಾಡಿ, ದೇಶದ ಗಡಿ ಭಾಗದ ವಾತಾವರಣ ಸೈನಿಕರಿಗೆ ಮಾತ್ರ ತಿಳಿದಿರುತ್ತದೆ. ನಮ್ಮ ಎದುರಾಳಿ ದೇಶ ಮರ್ಮದ ಪೆಟ್ಟು ಹಾಕುವುದರಲ್ಲೇ ನಿರತರಾಗಿರುತ್ತಾರೆ. ಈ ಮಧ್ಯೆ ಭಯೋತ್ಪಾದಕರ ದಾಳಿ ಸಹ ಯಾವ ನಿಯಮ ಇಲ್ಲದಂತೆ ನಡೆಯುತ್ತದೆ. ಇಂತಹ ಪರಿಸ್ಥಿತಿ ಎದುರಿಸುವ ನಮ್ಮ ವೀರ ಯೋಧರು ಎಂದಿಗೂ ಜಗ್ಗದೆ ದಿಟ್ಟ ಉತ್ತರ ನೀಡಿದ್ದಾರೆ. ನಾನು ಖುದ್ದು ಯುದ್ಧದಲ್ಲಿ ಪಾಲ್ಗೊಂಡು ಕಾಲು ಕಳೆದುಕೊಂಡಿದ್ದೇನೆ. ಇದೇ ಮಾದರಿ ಹಲವು ಸೈನಿಕರ ಅಂಗ ವೈಕಲ್ಯವಾಗಿದೆ. ಅಂದಿನ ಯುದ್ಧ ಪರಿಸ್ಥಿತಿ ನೆನೆದರೆ ಮೈ ರೋಮಾಂಚನ ಆಗುತ್ತದೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಪ್ರಗತಿಪರ ರೈತ ಅಮ್ಮನಘಟ್ಟ ಶಿವಶಂಕರಪ್ಪ, ಮಾಜಿ ಸೈನಿಕರ ಸಂಘದ ತಾಲ್ಲೂಕು ಅಧ್ಯಕ್ಷ ಲೋಕೇಶ್ ಬಿದರೆ, ಪ್ರಾಚಾರ್ಯ ಓ.ನಾಗರಾಜಯ್ಯ, ಪಪಂ ಮಾಜಿ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಸರ್ವೇಯರ್ ಶಿವಕುಮಾರ್, ಪ್ರಿಯಾ ಶಾಲೆಯ ಪ್ರಾಂಶುಪಾಲ ಅರುಣ್ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.