ತುಮಕೂರು: 40 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಪಿಎಸ್‌ಐ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಠಾಣೆ ಪಿಎಸ್‌ಐ ಚೇತನ್ ಕುಮಾರ್ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದವರು. ಠಾಣೆ ವ್ಯಾಪ್ತಿಯಲ್ಲಿ ಕಾರೊಂದನ್ನು ವಶಕ್ಕೆ ಪಡೆದಿದ್ದ ಪಿಎಸ್‌ಐ ಚೇತನ್ ಕುಮಾರ್, ಕಾರಿನಲ್ಲಿ ಅನುಮಾನಾಸ್ಪದ ವಸ್ತುಗಳು ಇವೆ ಎಂದು ಠಾಣೆಗೆ ತಂದಿದ್ದಾರೆ. ಬಳಿಕ ಕಾರು ಬಿಡದೇ ಪ್ರಕರಣವನ್ನೂ ದಾಖಲಿಸದೇ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಪೊಲೀಸ್ ಅಧಿಕಾರಿ, ಬೆಂಗಳೂರು ಮೂಲದ ವ್ಯಕ್ತಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು, 40 ಸಾವಿರ ರೂಪಾಯಿ ಫೈನಲ್ ಮಾಡಿದ್ದರು. ಅದರಂತೆ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಟೋಲ್ ಬಳಿ ಅಂಗಡಿಯೊಂದರಲ್ಲಿ ಹಣ ಕೊಡಲು ಪಿಎಸ್‌ಐ ಹೇಳಿದ್ದರು. ಅಂಗಡಿಗೆ ಹಣ ಕೊಡಲು ಬರುವವನ ಫೋಟೋವನ್ನು ಅಂಗಡಿಯವನಿಗೆ ರವಾನಿಸಿದ್ದರು. ಅಂಗಡಿಯವನ ಮೊಬೈಲ್ ಪರಿಶೀಲಿಸಿದಾಗ ಪಿಎಸ್‌ಐ ಪಾತ್ರ ಬಯಲಾಗಿದೆ. ಸದ್ಯ ಪಿಎಸ್‌ಐ ಚೇತನ್ ಕುಮಾರ್‌ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ 4 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ ಇನ್ಸ್‌ಪೆಕ್ಟರ್
ಇನ್ನು ತುಮಕೂರು ಮಾದರಿಯ ಘಟನೆ ಬೆಂಗಳೂರಿನಲ್ಲೂ ನಡೆದಿತ್ತು. ಲಂಚ ಸ್ವೀಕರಿಸುತ್ತಿದ್ದ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ (Bengaluru Inspector) ಒಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ ಘಟನೆ (Lokayukta Raid) ನಗರದ ಚಾಮರಾಜಪೇಟೆಯ ಸಿಎಆರ್ ಮೈದಾನದಲ್ಲಿ ನಡೆದಿತ್ತು. ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರನ್ನು ಲಂಚ ಸ್ವೀಕಾರದ ವೇಳೆ ವಶಕ್ಕೆ ಪಡೆಯಲಾಗಿತ್ತು. ಟ್ರ್ಯಾಪ್ ವೇಳೆ ಲೋಕಾಯುಕ್ತ ಪೊಲೀಸರ ವಿರುದ್ಧ ಇನ್ಸ್‌ಪೆಕ್ಟರ್ ಗೋವಿಂದರಾಜು ಕೂಗಾಡಿ ಹೈಡ್ರಾಮಾ ಸೃಷ್ಟಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ವೈರಲ್ ಆಗಿತ್ತು.
ಹಣ ಹೂಡಿಕೆಗೆ ಸಂಬಂಧಿಸಿ ವಂಚನೆಗೊಳಗಾದ ಬಗ್ಗೆ ಧನರಾಜ್ ಎಂಬುವವರು ಕೆ.ಪಿ.ಅಗ್ರಹಾರ ಠಾಣೆಗೆ ದೂರು ನೀಡಿದ್ದರು. ಹಣ ಹೂಡಿಕೆ ಮಾಡಿದರೆ ಲಾಭ ಬರುತ್ತದೆ ಎಂದು ನಂಬಿಸಿ ಸೂರಜ್, ಸುಜನ್ ಮತ್ತು ಶ್ರೀನಿವಾಸ್ ಎಂಬುವವರು ಧನರಾಜ್ ಅವರಿಂದ 19 ಲಕ್ಷ ರೂ. ಪಡೆದು ವಂಚಿಸಿದ್ದರು. ಹಣ ವಾಪಸ್ ಕೇಳಿದಾಗ ಆರೋಪಿಗಳು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಸಂಬಂಧ ಜನವರಿ 22 ರಂದು ಕೆ.ಪಿ. ಅಗ್ರಹಾರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಸೂರಜ್ ಮತ್ತು ಸುಜನ್ ಮನೆಗೆ ಇನ್ಸ್‌ಪೆಕ್ಟರ್ ಗೋವಿಂದರಾಜು ನೇತೃತ್ವದ ತಂಡ ತೆರಳಿತ್ತು. ಈ ವೇಳೆ ಪೊಲೀಸರು ಮತ್ತು ಆರೋಪಿಗಳ ನಡುವೆ ಗಲಾಟೆ ನಡೆದಿತ್ತು. ಬಳಿಕ ಠಾಣೆಯಲ್ಲಿ ಪ್ರಕರಣವನ್ನು ಡೀಲ್ ಮಾಡಲು ಮುಂದಾದ ಇನ್ಸ್‌ಪೆಕ್ಟರ್ ಗೋವಿಂದರಾಜು, ಕೇಸ್‌ನಿಂದ ಬಿಡಿಸಲು ಮತ್ತು ಬಂಧಿಸದಿರಲು 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿತ್ತು.
ಮುಡಾ ಹಗರಣ; ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್: ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್
ಮೊದಲೇ 1 ಲಕ್ಷ ರೂಪಾಯಿ ಲಂಚ ಪಡೆದಿದ್ದ ಪೊಲೀಸ್ ಅಧಿಕಾರಿ, ಉಳಿದ 4 ಲಕ್ಷ ರೂಪಾಯಿ ಪಡೆಯಲು ಚಾಮರಾಜಪೇಟೆಯ ಸಿಎಆರ್ ಮೈದಾನಕ್ಕೆ ಬಂದಿದ್ದರು. ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಸುತ್ತುವರಿದು, ವಶಕ್ಕೆ ಪಡೆದಿದ್ದರು.