ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರೂ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸಿ.ಬಿ.ಸುರೇಶಬಾಬು ಅವರು ಸಮಾಜದಲ್ಲಿ ಸಮಾನತೆ ಮತ್ತು ಸೌಹರ್ದತೆಯ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಜಾತಿ, ಧರ್ಮ ಗಳನ್ನು ಮೀರಿದ ಮಾನವೀಯ ಮೌಲ್ಯಗಳ ಆಧಾರಿತವಾದ ಸರ್ವ ದಾರ್ಶನಿಕರ ಜಯಂತಿ ಎಂಬ ವಿನೂತನ ಪರಿಕಲ್ಪನೆಯ ಮೂಲಕ ಅವರು ಹೊಸ ಇತಿಹಾಸಕ್ಕೆ ಭಾಷ್ಯ ಬರೆದಿದ್ದಾರೆ ಎಂದು ಪ್ರಜ್ಞಾವಂತ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಸಮಾನತೆಯ ಸಂದೇಶ ಮತ್ತು ಭವ್ಯ ಪುತ್ಥಳಿ ಅನಾವರಣ
ಶಾಸಕ ಸುರೇಶಬಾಬು ಅವರ ನೇತೃತ್ವದಲ್ಲಿ ನ.26 ಇಂದು ನಡೆಯುತ್ತಿರುವ ಈ ವಿಶಿಷ್ಟ ಕಾರ್ಯಕ್ರಮವು ಕೇವಲ ಸಾಂಪ್ರದಾಯಿಕ ಆಚರಣೆಗೆ ಸೀಮಿತವಾಗದೆ, ದಾರ್ಶನಿಕರ ಆದರ್ಶಗಳನ್ನು ಶಾಶ್ವತಗೊಳಿಸುವ ಧಿಕ್ಕಿನಲ್ಲಿ ಸಾಗಿದೆ. ಇದೇ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ರಾಷ್ಟçಪಿತ ಮಹಾತ್ಮ ಗಾಂಧಿಜಿ ಅವರ ಭವ್ಯ ಪುತ್ಥಳಿಯನ್ನು ತಾಲ್ಲೂಕು ಕಚೇರಿ ಆವರಣದಲ್ಲಿ ಅನಾವರಣಗೊಳಿಸಲಾಗುವುದು.
ಇದನ್ನೂ ಓದಿ; Chikkanayakanahalli News: ರಾಜಣ್ಣ ವಜಾ ಏಜೆಂಟರ ಸೂಚನೆ ಕಾರಣ: ಡಾ. ಸಾಸಲು ಸತೀಶ್ ವಾಗ್ದಾಳಿ
ಸರ್ವ ದಾರ್ಶನಿಕರ ಜಯಂತಿ ಕಾರ್ಯಕ್ರಮವು ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗದೆ, ಸಮಸ್ತ ದಾರ್ಶನಿಕರು, ಸಮಾಜ ಸುಧಾರಕರು ಮತ್ತು ಮಹಾತ್ಮರ ಜಯಂತಿಗಳನ್ನು ಒಟ್ಟಾಗಿ ಆಚರಿಸುವ ಒಂದು ವೇದಿಕೆಯಾಗಿದೆ. ಬುದ್ದ, ದೇವರ ದಾಸಿಮಯ್ಯ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಮಹರ್ಷಿ ವಾಲ್ಮಿಕಿ, ಕನಕದಾಸರು ಸೇರಿದಂತೆ ಹಲವು ಮಹನೀಯರ ಆದರ್ಶ ಮತ್ತು ಸಂದೇಶಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುವುದು.
ಶಾಸಕರ ದೃಷ್ಟಿಕೋನ
ಕಾರ್ಯಕ್ರಮದ ಕುರಿತು ಮಾತನಾಡಿದ ಶಾಸಕ ಸುರೇಶಬಾಬು ಅವರು ದಾರ್ಶನಿಕರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತರಲ್ಲ. ಅವರು ಇಡೀ ಮಾನವ ಕುಲಕ್ಕೆ ದಾರಿದೀಪ. ಅವರ ಜಯಂತಿಗಳನ್ನು ಪ್ರತ್ಯೇಕವಾಗಿ ಆಚರಿಸುವ ಬದಲು ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಗೌರವಿಸುವುದು ನಮ್ಮ ಉದ್ದೇಶ. ಇದರಿಂದ ಯುವ ಪೀಳಿಗೆಗೆ ಸೌಹಾರ್ದತೆಯ ನಿಜವಾದ ಪಾಠ ಸಿಗುತ್ತದೆ. ತಮ್ಮ ಕ್ಷೇತ್ರದ ಜನರ ನಡುವೆ ಪ್ರೀತಿ ಮತ್ತು ಸಮಾನತೆಯ ಭಾವನೆಯನ್ನು ಗಟ್ಟಿಗೊಳಿಸಲು ಈ ಕಾರ್ಯಕ್ರಮ ಸಹಕಾರಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಸ ಭಾಷ್ಯ ಮೆಚ್ಚುಗೆ
ಸಾಮಾನ್ಯವಾಗಿ ದಾರ್ಶನಿಕರ ಜಯಂತಿಗಳು ರಾಜಕೀಯ ಸ್ವರೂಪ ಪಡೆದು ಕೇವಲ ಆಚರಣೆಗೆ ಸೀಮಿತವಾಗುತ್ತಿವೆ ಎಂಬ ಟೀಕೆಗಳಿರುವ ಈ ಸಂದರ್ಭದಲ್ಲಿ ಸುರೇಶಬಾಬು ಅವರ ಈ ಹೆಜ್ಜೆ ಸಾಮಾಜಿಕ ಸಾಮರಾಸ್ಯದ ನಿಟ್ಟಿನಲ್ಲಿ ಒಂದು ಮಾದರಿ ಪ್ರಯತ್ನವಾಗಿದೆ. ದಾರ್ಶನಿಕರ ಜಯಂತಿಯನ್ನು ಕೇವಲ ಸರಕಾರಿ ಕಾರ್ಯಕ್ರಮ ಎಂಬ ಚೌಕಟ್ಟಿನಿಂದ ಹೊರತಂದು ಜನರ ಕಾರ್ಯಕ್ರಮವನ್ನಾಗಿ ರೂಪಿಸಿದ ಶಾಸಕರ ಕ್ರಮವು ಹೊಸ ರಾಜಕೀಯ ಮತ್ತು ಸಾಮಾಜಿಕ ಇತಿಹಾಸಕ್ಕೆ ನಾಂದಿ ಹಾಡಿದೆ ಎಂದು ಬೋವಿ ಸಮಾಜದ ತಾಲ್ಲೂಕು ಅಧ್ಯಕ್ಷ ಮೈಲಕಬ್ಬೆ ಹನುಮಂತಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.