ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

V N Reddy: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ವಿ.ಎನ್. ರೆಡ್ಡಿ ನಿಧನ

Pavagada News: ಪಾವಗಡ ತಾಲೂಕಿನ ವೆಂಕಟಾಪುರದಲ್ಲಿ 1923ರಲ್ಲಿ ಯರಪ್ಪರೆಡ್ಡಿ–ಲಕ್ಷಮ್ಮ ದಂಪತಿಗೆ ಜನಿಸಿದ ವಿ.ಎನ್. ರೆಡ್ಡಿಯವರು ಮಹಾತ್ಮ ಗಾಂಧಿ ಅವರ ಜೀವನವನ್ನೇ ಅಳವಡಿಸಿಕೊಂಡು ಪಾವಗಡ ತಾಲೂಕಿನ ‘ಗಾಂಧಿ’ ಎಂದು ಖ್ಯಾತರಾಗಿದ್ದಾರೆ. ಇವರ ನಿಧನಕ್ಕೆ ರಾಜಕಾರಣಿಗಳು ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಪಾವಗಡ, ಅ.27: ಪಾವಗಡ ತಾಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧೀಜಿ ಅವರ ನಿಷ್ಠಾವಂತ ಅನುಯಾಯಿ ವಿ.ಎನ್. ರೆಡ್ಡಿ (ವಿ. ನರಸಿಂಹರೆಡ್ಡಿ-V N Reddy) (103) ಅವರು ಸೋಮವಾರ ಬೆಳಗ್ಗೆ ತಮ್ಮ ಸ್ವಗ್ರಾಮ ವೆಂಕಟಾಪುರದಲ್ಲಿ ನಿಧನರಾಗಿದ್ದಾರೆ. ಮೃತರು ಪಾವಗಡ ತಾಲೂಕು ಮಂಡಲ ಪಂಚಾಯಿತಿ ಅಧ್ಯಕ್ಷರಾಗಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಇವರ ಪತ್ನಿ ವೆಂಕಟಲಕ್ಷಮ್ಮ ಮುಂಚೆಯೇ ನಿಧನರಾಗಿದ್ದರು. ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಅಂತಿಮ ಸಂಸ್ಕಾರ ಮಂಗಳವಾರ ವೆಂಕಟಾಪುರ ಸ್ವಗ್ರಾಮದಲ್ಲೇ ನೆರವೇರಲಿದೆ ಎಂದು ತಿಳಿದುಬಂದಿದೆ.

1923ರಲ್ಲಿ ವೆಂಕಟಾಪುರದಲ್ಲಿ ಯರಪ್ಪರೆಡ್ಡಿ–ಲಕ್ಷಮ್ಮ ದಂಪತಿಗೆ ಜನಿಸಿದ ವಿ.ಎನ್. ರೆಡ್ಡಿಯವರು ಮಹಾತ್ಮ ಗಾಂಧಿ ಅವರ ಜೀವನವನ್ನೇ ಅಳವಡಿಸಿಕೊಂಡು ಪಾವಗಡ ತಾಲೂಕಿನ ‘ಗಾಂಧಿ’ ಎಂದು ಖ್ಯಾತರಾದರು.

1942ರ ಸ್ವಾತಂತ್ರ್ಯ ಹೋರಾಟದ ವೇಳೆ ಮಹಾತ್ಮ ಗಾಂಧಿಜಿಗೆ ಪತ್ರ ಬರೆದಾಗ, ಅವರ ಕಾರ್ಯದರ್ಶಿ ಮಹಾದೇವದೇಶಾಯಿ ಅವರಿಂದ ಉತ್ತರ ಬಂದಿತ್ತು ಎಂದು ತಿಳಿದುಬಂದಿದೆ. ನಂತರ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಟ್ರೇಜರಿ ಕಚೇರಿಯನ್ನು ಧ್ವಂಸ ಮಾಡುವ ವೇಳೆ ಬಂಧಿತರಾಗಿ ತುಮಕೂರು, ಬಳಿಕ ಬೆಂಗಳೂರು ಸೆಂಟ್ರಲ್‌ ಜೈಲು ಮತ್ತು ವೈಟ್‌ಫೀಲ್ಡ್‌ ಕಾರಾಗೃಹಗಳಲ್ಲಿ 32 ದಿನಗಳ ಕಾಲ ಶಿಕ್ಷೆ ಅನುಭವಿಸಿದರು.

ಗಾಂಧೀಜಿ ಅವರ “Go Back to Villages” ಕರೆಗೆ ಸ್ಪಂದಿಸಿದ ವಿ.ಎನ್. ರೆಡ್ಡಿ ಅವರು, ಹಳ್ಳಿಗೆ ಮರಳಿ 1946ರಿಂದ 30 ವರ್ಷಗಳ ಕಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಂತರ 10 ವರ್ಷಗಳ ಕಾಲ ತಾಲೂಕು ಮಂಡಲ ಬೋರ್ಡ್ ಅಧ್ಯಕ್ಷ ಮತ್ತು ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಬರಗಾಲ ನಿರ್ವಹಣೆ ಸೇರಿದಂತೆ ವಿವಿಧ ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ | Vinay Guruji: ನಮಗೆ ಬೇಕಿರುವುದು ಗಾಂಧಿ ನೋಟಲ್ಲ, ಗಾಂಧಿ ಆದರ್ಶಗಳು: ವಿನಯ್ ಗುರೂಜಿ

ಗಣ್ಯರಿಂದ ಸಂತಾಪ

ಮೃತರ ನಿಧನಕ್ಕೆ ಮಾಜಿ ಸಚಿವ ವೆಂಕಟರಮಣಪ್ಪ, ಶಾಸಕ ವೆಂಕಟೇಶ್, ಮಾಜಿ ಶಾಸಕ ತಿಮ್ಮರಾಯಪ್ಪ ಸೋಮಲನಾಯ್ಕ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಹೋರಾಟಗಾರರು ಹಾಗೂ ಹಲವು ಸಂಘ ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿವೆ. ತಾಲೂಕು ಕಚೇರಿಯ ಉಪತಹಸೀಲ್ದಾರ್ ಪ್ರಸಾದ್ ಮತ್ತು ಗ್ರಾಮ ಆಡಳಿತಾಧಿಕಾರಿಗಳು, ಹೂವಿನ ಹಾರ ಅರ್ಪಿಸಿ ಗೌರವ ಸಲ್ಲಿಸಿದರು.