ಚಿಕ್ಕನಾಯಕನಹಳ್ಳಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷರಾದ ಸಿ.ಡಿ. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಪಡಿತರ ಚೀಟಿ ಗೊಂದಲ ನಿವಾರಣೆಗೆ ಪ್ರಮುಖ ಸಲಹೆ ಸಭೆಯಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಶಿರಸ್ತೇದಾರ್ ಕಿರಣ್‌ಕುಮಾರ್ ಅವರು ಸಾರ್ವ ಜನಿಕರ ಹಿತದೃಷ್ಟಿಯಿಂದ ಮಹತ್ವದ ಸಲಹೆಯನ್ನು ನೀಡಿದರು. ಸರಕಾರಿ ಸೌಲಭ್ಯ ಗಳನ್ನು ಪಡೆಯಲು ಒಂದೇ ಪಡಿತರ ಚೀಟಿಯನ್ನು ಅವಲಂಬಿಸಿರುವುದರಿಂದ ಅನಗತ್ಯ ಗೊಂದಲ ಮತ್ತು ಸೇವೆ ಪಡೆಯುವಲ್ಲಿ ವಿಳಂಬ ಉಂಟಾಗುತ್ತಿದೆ ಎಂದು ಅವರು ಗಮನ ಸೆಳೆದರು.
ಆಹಾರ ಭದ್ರತೆ ಮತ್ತು ವೈದ್ಯಕೀಯ ಸೇವೆಗಳಿಗಾಗಿ ಸರಕಾರವು ಪ್ರತ್ಯೇಕ ಕಾರ್ಡ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಪಡಿತರ ಚೀಟಿಯ ವಿತರಣೆ ಅಥವಾ ಪರಿಷ್ಕರಣೆ ಪ್ರಕ್ರಿಯೆ ವಿಳಂಬವಾದರೆ ಆ ಕುಟುಂಬವು ತುರ್ತು ವೈದ್ಯಕೀಯ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕುಟುಂಬದ ಸದಸ್ಯರ ಸೇರ್ಪಡೆ/ ತೆಗೆದುಹಾಕುವಿಕೆ ವಿಚಾರದಲ್ಲಿ ಆಹಾರ ಇಲಾಖೆಯಲ್ಲಿ ಆಗುವ ಸಣ್ಣ ತಿದ್ದುಪಡಿ ಕೂಡ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಿ ಎರಡೂ ಇಲಾಖೆಗಳಲ್ಲಿ ಗೊಂದಲಕ್ಕೆ ಕಾರಣವಾಗುತ್ತಿದೆ ಎಂದು ವಿವರಿಸಿದರು.
ಇದನ್ನೂ ಓದಿ: Chikkanayakanahalli News: ದಾರ್ಶನಿಕರ ಜಯಂತಿ ಸ್ವಾಗತಾರ್ಹ ಆದರೆ ಆಚರಣೆಯ ವೈಭವೀಕರಣಕ್ಕೆ ಟೀಕೆ
ಪಡಿತರವು ಆಹಾರ ಭದ್ರತೆಯ ಅಗತ್ಯವಾದರೆ ವೈದ್ಯಕೀಯವು ಜೀವನದ ತುರ್ತು, ಎರಡನ್ನೂ ಒಂದೇ ದಾಖಲೆಯಲ್ಲಿ ಬಂಧಿಸಿರುವುದು ಸರಿಯಲ್ಲ. ಆಹಾರಕ್ಕಾಗಿ ಪಡಿತರ ಚೀಟಿ ಮತ್ತು ಆರೋಗ್ಯ ಸೌಲಭ್ಯಗಳಿಗಾಗಿ ಪ್ರತ್ಯೇಕ ಆರೋಗ್ಯ ಗುರುತಿನ ಚೀಟಿಯನ್ನು ನೀಡಿದರೆ, ಜನರಿಗೆ ಸೇವೆ ಪಡೆಯುವುದು ಸರಳವಾಗುತ್ತದೆ ಮತ್ತು ಗೊಂದಲ ನಿವಾರಣೆ ಯಾಗುತ್ತದೆ ಎಂದು ಕಿರಣ್‌ಕುಮಾರ್ ಮನವಿ ಮಾಡಿದರು.
ವೃಕ್ಷ ಮಾತೆಗೆ ಶ್ರದ್ದಾಂಜಲಿ
ಸಭೆಗೂ ಮುನ್ನ ಇತ್ತೀಚೆಗೆ ನಿಧನರಾದ ಪರಿಸರ ಪ್ರೇಮಿ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಅಧ್ಯಕ್ಷರಾದ ಸಿ.ಡಿ.ಚಂದ್ರಶೇಖರ್ ಮಾತನಾಡಿ ತಿಮ್ಮಕ್ಕನವರು 2021 ರ ಸೆಪ್ಟೆಂಬರ್ 3 ರಂದು ಚಿಕ್ಕನಾಯಕನಹಳ್ಳಿಗೆ ಆಗಮಿಸಿ ಸಾರ್ವಜನಿಕರಿಗೆ ಸುಮಾರು 3000 ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿ ದ್ದರು. ಅವರು ನೆಟ್ಟ ಗಿಡಗಳು ಇಂದು ಜೀವಂತ ಸ್ಮಾರಕಗಳಾಗಿವೆ ಎಂದು ವಿವರಿಸಿದರು. ಬಳಿಕ ಗ್ಯಾರಂಟಿ ಯೋಜನೆಯ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸರಳವಾಗಿ ಮತ್ತು ಶೀಘ್ರವಾಗಿ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಉಪಾಧ್ಯಕ್ಷ ಪಾಂಡುರಂಗಯ್ಯ, ತಾ.ಪಂ ಇಓ ದೊಡ್ಡಸಿದ್ದಯ್ಯ, ಸಿಡಿಪಿಓ ಹೊನ್ನಪ್ಪ, ಬೆಸ್ಕಾಂ ಎಇಇ ಗವಿರಂಗಯ್ಯ, ಉದ್ಯೋಗಾಧಿಕಾರಿ ಕಿಶೋರ್, ಕೆಎಸ್‌ಆರ್‌ಟಿಸಿ ತುರುವೇಕೆರೆ ಘಟಕಾಧಿಕಾರಿ ತಮ್ಮಯ್ಯ, ತಾ.ಪಂ. ವ್ಯವಸ್ಥಾಪಕ ಬಸವರಾಜ್, ಯೋಜನಾಧಿಕಾರಿ ಮೂರ್ತಯ್ಯ ಗ್ಯಾರಂಟಿ ಸದಸ್ಯರುಗಳಾದ ನಟರಾಜು, ಓಂಕಾರ್, ಮಂಜುನಾಥ್, ಸೈಯದ್ ಇನಾಯತ್, ರೇಣುಕಸ್ವಾಮಿ, ನಿರಂಜನಮೂರ್ತಿ, ಚಂದ್ರಪ್ಪ, ರಾಜಣ್ಣ, ಚಂದ್ರಶೇಖರ್, ಚಿಕ್ಕತಿಮ್ಮಯ್ಯ ವಿಷಯ ನಿರ್ವಾಹಕ ಮಧು ಹಾಜರಿದ್ದರು.